ಆಯುಷ್ಮಾನ್ ಭಾರತ ಯೋಜನೆಯಡಿ ಕೊರೋನ ರೋಗಿಗಳಿಗೆ ಚಿಕಿತ್ಸಾ ಶುಲ್ಕ ವಿಧಿಸಲು ಸಿದ್ಧರಿದ್ದೀರಾ?

Update: 2020-06-05 16:41 GMT

ಹೊಸದಿಲ್ಲಿ, ಜೂ.5: ಸರಕಾರದ ಆಯುಷ್ಮಾನ್ ಭಾರತ ಯೋಜನೆಯಡಿ ನಿಗದಿಪಡಿಸಲಾದ ದರಗಳಲ್ಲಿ ಕೊರೋನ ವೈರಸ್ ಸೋಂಕು ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಸಿದ್ಧವಾಗಿವೆಯೇ ಎಂದು ಶುಕ್ರವಾರ ಅವುಗಳಿಗೆ ಪ್ರಶ್ನಿಸಿತು.

ನಿರ್ದಿಷ್ಟ ಸಂಖ್ಯೆಯ ಕೊರೋನ ವೈರಸ್ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವಂತೆ ಸರ್ವೋಚ್ಚ ನ್ಯಾಯಾಲಯವು ಎಲ್ಲ ಖಾಸಗಿ ಆಸ್ಪತ್ರೆಗಳನ್ನು ಕೇಳುತ್ತಿಲ್ಲ,ಇಂತಹ ಕ್ರಮಕ್ಕೆ ಮುಂದಾಗುವಂತೆ ಸರಕಾರದಿಂದ ರಿಯಾಯಿತಿ ದರಗಳಲ್ಲಿ ಜಮೀನು ಪಡೆದುಕೊಂಡಿರುವ ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ಕೇಳುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಪೀಠವು ಹೇಳಿತು.

ದೇಶಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಚಿಕಿತ್ಸಾ ವೆಚ್ಚದ ನಿಯಂತ್ರಣಕ್ಕೆ ನಿರ್ದೇಶ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸುತ್ತಿದ್ದ ಪೀಠವು, ಆಯುಷ್ಮಾನ್ ಭಾರತ ದರಗಳಲ್ಲಿ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಸಿದ್ಧವಾಗಿವೆಯೇ ಎಂದಷ್ಟೇ ಕೇಳಲು ತಾನು ಬಯಸುತ್ತಿದ್ದೇನೆ ಎಂದು ಹೇಳಿತು.

ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು,ಸಮಾಜದ ತಳಮಟ್ಟದಲ್ಲಿರುವವರು ಮತ್ತು ಚಿಕಿತ್ಸಾ ವೆಚ್ಚಗಳನ್ನು ಪಾವತಿಸಲು ಸಾಧ್ಯವಾಗದವರನ್ನು ಆಯುಷ್ಮಾನ್ ಭಾರತ ಯೋಜನೆಯ ವ್ಯಾಪ್ತಿಗೊಳಪಡಿಸಲು ಸರಕಾರವು ತನ್ನ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.

ಎರಡು ವಾರಗಳ ನಂತರ ಮತ್ತೆ ಈ ವಿಷಯದಲ್ಲಿ ವಿಚಾರಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News