ತಮ್ಮನ ಮನೆಗೇ ಕನ್ನ: 6 ಗಂಟೆಗಳಲ್ಲೇ ಕಳವು ಆರೋಪಿ ಅಣ್ಣನ ಬಂಧಿಸಿದ ಮಡಿಕೇರಿ ಪೊಲೀಸರು

Update: 2020-06-05 16:47 GMT

ಮಡಿಕೇರಿ, ಜೂ.5: ಒಡ ಹುಟ್ಟಿದ ಅಣ್ಣನೇ ತಮ್ಮನ ಮನೆಯಲ್ಲಿ ನಗದು ಮತ್ತು ಚಿನ್ನಾಭರಣ ಕಳವು ಮಾಡಿ ಸಿಕ್ಕಿ ಬಿದ್ದ ಘಟನೆ ನಗರದಲ್ಲಿ ನಡೆದಿದ್ದು, ಪ್ರಕರಣ ನಡೆದ ಕೇವಲ 6 ಗಂಟೆಯಲ್ಲೇ ಕಳವು ಆರೋಪಿಯನ್ನು ಬಂಧಿಸುವಲ್ಲಿ ಮಡಿಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. 

ಮಂಡ್ಯ ಕೆ.ಆರ್.ಪೇಟೆಯ ಸಾರಂಗಿ ಗ್ರಾಮದ ಸಂತೆ ಬಾಚಳ್ಳಿ ಹೋಬಳಿ ನಿವಾಸಿ ಎನ್. ಸಂತೋಷ್ ಕುಮಾರ್ ಅಲಿಯಾಸ್ ಸಂತು(36) ಎಂಬತನೇ ಬಂಧಿತ ಆರೋಪಿ.

ಪ್ರಕರಣ ಹಿನ್ನಲೆ: ಜೂ.4ರಂದು ಸಂಜೆ ಲೋಕೋಪಯೋಗಿ ಇಲಾಖಾ ನೌಕರರಾರಗಿರುವ ಅರುಣ್ ಕುಮಾರ್ ಎಂಬವರ ಮನೆಯಲ್ಲಿ 4.50 ಲಕ್ಷ ನಗದು ಮತ್ತು 2.70 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಅರುಣ್ ಕುಮಾರ್ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ, ಅರುಣ್ ಕುಮಾರ್ ಅವರ ಮನೆಯ ಅಕ್ಕಪಕ್ಕದ ಮನೆಯಲ್ಲಿದ್ದ ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದರು. ಈ ಸಂದರ್ಭ ವ್ಯಕ್ತಿಯೊಬ್ಬ ಸಂಜೆ 6.30ರಿಂದ 7.30ರ ಸಮಯದಲ್ಲಿ ಅರುಣ್ ಕುಮಾರ್ ಅವರ ಮನೆಯ ಬಳಿ ಸುತ್ತಾಡಿರುವುದು ಕಂಡು ಬಂದಿದೆ. ತಕ್ಷಣವೇ ನಗರದ ಬಸ್ ನಿಲ್ದಾಣ ಮತ್ತು ಟ್ಯಾಕ್ಸಿ ನಿಲ್ದಾಣಗಳನ್ನು ಜಾಲಾಡಿದ ಪೊಲೀಸರು ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಈ ಸಂದರ್ಭ ಆರೋಪಿ ಹಾಸನದ ಮೂಲಕ ಶಿವಮೊಗ್ಗಕ್ಕೆ ತೆರಳುತ್ತಿರುವ ಮಾಹಿತಿ ದೊರೆತಿದೆ. ಬಳಿಕ ಆರೋಪಿಯ ಬೆನ್ನು ಹತ್ತಿದ ಪೊಲೀಸರು ಹಾಸನದಲ್ಲಿ ಕಳವು ಆರೋಪಿಯನ್ನು ಮಾಲು ಸಹಿತ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ಈ ಕುರಿತು ಮಾಹಿತಿ ನೀಡಿದ ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ ಕಳವು ಆರೋಪಿ ಮತ್ತು ದೂರುದಾರ ಅರುಣ್ ಕುಮಾರ್ ಒಡ ಹುಟ್ಟಿದ ಸಹೋದರರಾಗಿದ್ದು, ಕಳೆದ ಒಂದೂವರೆ ತಿಂಗಳ ಹಿಂದೆ ಆರೋಪಿ ಸಂತೋಷ್ ಕುಮಾರ್ ತಮ್ಮ ಅರುಣ್ ಕುಮಾರ್ ನ ಮನೆಗೆ ಬಂದಿದ್ದ. ಈ ಸಂದರ್ಭ ಸಂತೋಷ್ ಕುಮಾರ್, ಅರುಣ್ ಕುಮಾರ್ ಬಳಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. ಆದರೆ ಅರುಣ್ ಕುಮಾರ್ ಹಣ ನೀಡದೇ ಬರಿಕೈಯಲ್ಲಿ ಕಳುಹಿಸಿದ್ದ . ಇದಾದ ಬಳಿಕ ಜೂ.4ರಂದು ಮಡಿಕೇರಿಗೆ ಬಂದ ಸಂತೋಷ್ ಕುಮಾರ್ ಸಂಜೆ ವೇಳೆ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಮನೆಯ ಮುಂಬಾಗಿಲಿನ ಬೀಗ ತೆಗೆದು ಒಳ ಪ್ರವೇಶಿಸಿ 4.5 ಲಕ್ಷ ರೂ. ನಗದು ಮತ್ತು ಕಬೋರ್ಡ್‍ನಲ್ಲಿಟ್ಟಿದ್ದ ಆತನ ತಾಯಿಯ 60 ಗ್ರಾಂ ತೂಕದ ಮಾಂಗಲ್ಯ ಸರ, 4 ಗ್ರಾಂ ತೂಕದ ಚಿನ್ನದ ಉಂಗುರ ಕದ್ದು ಪರಾರಿಯಾಗಿದ್ದ ಎಂದು ಹೇಳಿದರು.

ಮಡಿಕೇರಿ ನಗರ ಠಾಣೆ ಮತ್ತು ನಗರ ವೃತ್ತ ನಿರೀಕ್ಷಕರ ಕಚೇರಿ ಸಿಬ್ಬಂದಿಗಳ ಸಹಿತ ಹಾಸನ ಪೊಲೀಸರು ಕೂಡ ಆರೋಪಿಯನ್ನು ಬಂಧಿಸುವಲ್ಲಿ ಸಹಕರಿಸಿದ್ದಾರೆ. ಪ್ರಕರಣ ನಡೆದು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಮಾಲು ಸಹಿತ ಬಂಧಿಸಿರುವ ಪೊಲೀಸರ ಕಾರ್ಯಕ್ಕೆ ಎಸ್.ಪಿ. ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ ಡಿವೈಎಸ್‍ಪಿ ದಿನೇಶ್ ಕುಮಾರ್ ಮತ್ತು ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮಾರ್ಗದರ್ಶನದಲ್ಲಿ ನಗರ ಠಾಣಾಧಿಕಾರಿ ಕು. ಅಂತಿಮ, ಸಿಪಿಐ ಕಚೇರಿ ಸಿಬ್ಬಂದಿಗಳಾದ ಕಿರಣ್, ಚರ್ಮಣ್ಣ, ಅಪರಾಧ ವಿಭಾಗದ ಶ್ರೀನಿವಾಸ, ಪ್ರವೀಣ್, ನಾಗರಾಜ್, ಅರುಣ್ ಕುಮಾರ್, ಪ್ರಸನ್ನ ಕುಮಾರ್, ಮಹದೇವಸ್ವಾಮಿ, ಸುನೀಲ್, ಶಶಿಕುಮಾರ್, ಭವಾನಿ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News