ಬಿಜೆಪಿ ಸರಕಾರ ರಚನೆಗೆ ಎಂಟಿಬಿ, ಎಚ್.ವಿಶ್ವನಾಥ್ ಕೊಡುಗೆ ಹೆಚ್ಚಿದೆ: ಸಚಿವ ಬಿ.ಸಿ.ಪಾಟೀಲ್

Update: 2020-06-05 16:55 GMT

ಕೊಪ್ಪಳ, ಜೂ. 5: ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಗೆ ಆರ್.ಶಂಕರ್, ಎಂಟಿಬಿ ನಾಗರಾಜ್ ಮತ್ತು ಎಚ್.ವಿಶ್ವನಾಥ್ ಕೊಡುಗೆ ಹೆಚ್ಚಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಕೊಪ್ಪಳ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೊಸಕೋಟೆ ಕ್ಷೇತ್ರದಿಂದ ಶರತ್ ಬಚ್ಚೇಗೌಡ ಸ್ಪರ್ಧಿಸುವುದು ಬೇಡ ಎಂದು ಬಿಜೆಪಿ ಸೂಚನೆ ನೀಡಿತ್ತು. ಆದರೆ, ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರಿಂದ ಎಂಟಿಬಿ ನಾಗರಾಜ್ ಅವರಿಗೆ ಅನ್ಯಾಯವಾದಂತೆ ಆಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಸಿದ್ದರಾಮಯ್ಯ ಒಂದು ಕಡೆ, ಮತ್ತವರ ಪುತ್ರ ರಾಕೇಶ್ ಅವರು ಮತ್ತೊಂದು ಕಡೆ ಹಾಗೂ ಕೆಂಪಯ್ಯ ಅವರು ಡಿಫ್ಯಾಕ್ಟ್ ಹೋಮ್ ಮಿನಿಸ್ಟರ್ ಎನ್ನುತ್ತಿದ್ದರು. ಮೈತ್ರಿ ಸರಕಾರದಲ್ಲಿ ಸಿದ್ದರಾಮಯ್ಯ ಎಲ್ಲರನ್ನು ಸರಿಯಾಗಿ ನಡೆಸಿಕೊಂಡಿದ್ದರೆ, ಉತ್ತಮವಾಗಿ ಆಡಳಿತ ನಡೆಸಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದು ಪಾಟೀಲ್ ಲೇವಡಿ ಮಾಡಿದರು.

ಮೈತ್ರಿ ಸರಕಾರದ ಅವಧಿಯಲ್ಲಿ ಎಲ್ಲರೂ ತಮ್ಮ ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಗೋಡೆ ಕಟ್ಟಿಕೊಂಡು ಸರಕಾರವನ್ನು ಕೆಡವಿದ್ದಾರೆ. ಧರ್ಮಸ್ಥಳದ ಪ್ರಕೃತಿ ಚಿಕಿತ್ಸೆಗೆ ತೆರಳಿದ್ದ ವೇಳೆ ಸಿದ್ದರಾಮಯ್ಯ ಮೈತ್ರಿ ಸರಕಾರ ಉಳಿಯುವುದಿಲ್ಲ ಎಂಬ ಹೇಳಿಕೆ ನೀಡಿದ್ದರು ಎಂದ ಅವರು, ಮೈತ್ರಿ ಸರಕಾರ ಪತನದ ಬಳಿಕ ಏನಾಗಿದೆ ಎಂದು ಎಲ್ಲರಿಗೂ ಗೊತ್ತು ಎಂದು ತಿರುಗೇಟು ನೀಡಿದರು.

ಮಾರಕ ಕೊರೋನ ಸೋಂಕು ನಿಯಂತ್ರಿಸುವಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಶ್ರಮವಹಿಸಿ ಕೆಲಸ ಮಾಡುತ್ತಿದ್ದು, ಹೊರ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸಿರುವವರಿಗಷ್ಟೇ ಸೋಂಕು ತಗುಲಿದೆ. ರಾಜ್ಯದಲ್ಲಿನ ಜನರಿಗೆ ಅಷ್ಟಾಗಿ ಸೋಂಕು ಕಾಣಿಸಿಕೊಂಡಿಲ್ಲ. ವಿಪಕ್ಷಗಳು ಸುಖಾಸುಮ್ಮನೆ ಆರೋಪ ಮಾಡುವುದಲ್ಲಿ ಅರ್ಥವಿಲ್ಲ ಎಂದು ಬಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News