ಚಾಮರಾಜನಗರ ಜಿಲ್ಲಾಧಿಕಾರಿಗೆ ಕರೆ ಮಾಡಿದ ಕೇಂದ್ರ ಆರೋಗ್ಯ ಸಚಿವರು ಹೇಳಿದ್ದೇನು ?: ಡಿಸಿ ಡಾ.ರವಿ ವಿವರಿಸಿದ್ದು ಹೀಗೆ..

Update: 2020-06-05 18:48 GMT
ಡಾ.ಎಂ.ಆರ್. ರವಿ

ಚಾಮರಾಜನಗರ, ಜೂ.5: ಚಾಮರಾಜನಗರ ಜಿಲ್ಲೆಯು ಕೊರೋನ ಮುಕ್ತವಾಗಿ ಮುಂದುವರೆಯುತ್ತಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರಿಗೆ ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ರೆಡ್‍ಕ್ರಾಸ್ ವತಿಯಿಂದ ವಿಶ್ವ ಪರಿಸರ ದಿನ ಅಂಗವಾಗಿ ಪೊಲೀಸ್ ಉಪ ಅಧೀಕ್ಷರ ಕಚೇರಿ ಮುಂಭಾಗದಲ್ಲಿ ಹಾಗೂ ಜಿಲ್ಲಾ ಆಸ್ಪತ್ರೆಯ ಅವರಣದಲ್ಲಿ ಗಿಡ ನೆಡುವ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜೊತೆ ಜಿಲ್ಲಾಧಿಕಾರಿ ದೂರವಾಣಿ ಕರೆಯ ವಿಷಯ ತಿಳಿಸಿದರು.

ಗುರುವಾರ ಸಂಜೆ ಕೇಂದ್ರ ಆರೋಗ್ಯ ಸಚಿವರು ದೂರವಾಣಿ ಮೂಲಕ ಮಾತನಾಡಿ ಚಾಮರಾಜನಗರ ಜಿಲ್ಲೆಯಲ್ಲಿ ಒಂದೇ ಒಂದು ಕೊರೋನ ಪ್ರಕರಣ ದಾಖಲಾಗಿಲ್ಲ. ಈ ಮೂಲಕ ಹಸಿರು ವಲಯವನ್ನಾಗಿ ಕಾಪಾಡಿಕೊಂಡಿರುವ ಬಗ್ಗೆ ಜಿಲ್ಲೆಯ ಜನತೆ, ಅಧಿಕಾರಿಗಳು ಹಾಗೂ ನನಗೆ ಶುಭ ಹಾರೈಸಿದ್ದಾರೆ ಎಂದರು.

ಕೇಂದ್ರ ಆರೋಗ್ಯ ಸಚಿವರು ದೂರವಾಣಿ ಕರೆ ಮಾಡಿರುವುದು ನನಗೆ ಆಶ್ಚರ್ಯ ಹಾಗೂ ಸಂತಸ ಉಂಟುಮಾಡಿದೆ. ಜಿಲ್ಲೆಯನ್ನು ಕೋವಿಡ್ ಮುಕ್ತಗೊಳಿಸುವ ಕಾರ್ಯವು ಮುಂದುವರೆಯಲಿ ಎಂದು ಸಚಿವರು ಶ್ಲಾಘಿಸಿದ್ದಾರೆ ಎಂದು ರವಿ ಅವರು ತಿಳಿಸಿದರು.

ಜಿಲ್ಲೆಯು ಕೊರೋನ ಮುಕ್ತವಾಗಿ ಮುಂದುವರಿಯಲು ಅಧಿಕಾರಿಗಳು ಸೇರಿದಂತೆ ಎಲ್ಲಾ ಸಿಬ್ಬಂದಿ ಒಂದು ತಂಡವಾಗಿ ಸತತವಾಗಿ ಕೆಲಸ ನಿರ್ವಹಿಸಿದ್ದಾರೆ. ಜನಪ್ರತಿನಿಧಿಗಳು ಸಹ ಪ್ರೋತ್ಸಾಹ, ಸಹಕಾರ ನೀಡುವ ಮೂಲಕ ಜಿಲ್ಲೆ ಕೋವಿಡ್ ಮುಕ್ತವಾಗಿ ಮುಂದುವರಿದುಕೊಂಡು ಬಂದಿದೆ. ವಿಶೇಷವಾಗಿ ಜಿಲ್ಲೆಯ ಜನರು ಲಾಕ್‍ಡೌನ್ ಅವಧಿಯಲ್ಲಿ ಜಾಗೃತರಾಗಿ ಸರ್ಕಾರದ ನಿರ್ದೇಶನಗಳನ್ನು ಪಾಲಿಸಿದ್ದಾರೆ. ಹೀಗಾಗಿ ಜಿಲ್ಲೆ ಹಸಿರು ವಲಯದಲ್ಲಿ ಉಳಿದಿದೆ. ಮುಂದೆಯೂ ಸಹ ಜಿಲ್ಲೆಯನ್ನು ಹಸಿರು ವಲಯದಲ್ಲಿಯೇ ಉಳಿಸಿಕೊಂಡು ಹೋಗುವ ಸವಾಲು ನಮ್ಮ ಮುಂದಿದೆ. ಜನರ ಸಹಕಾರ ಇದೇ ರೀತಿ ಇರಲಿ ಎಂದು ತಾವು ಬಯಸುವುದಾಗಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News