ಅಮೆರಿಕದಲ್ಲಿ ಕಪ್ಪು ಜನಾಂಗದವರ ಮೇಲಿನ ದೌರ್ಜನ್ಯ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ

Update: 2020-06-05 18:57 GMT

ಮೈಸೂರು,ಜೂ.5: ಅಮೆರಿಕದಲ್ಲಿ ಕಪ್ಪು ಜನಾಂಗದವರ ಮೇಲೆ ನಡೆದ ದೌರ್ಜನ್ಯ ಖಂಡಿಸಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ಕಳೆದ ಒಂದು ವಾರದಿಂದ ಅಮೆರಿಕ ಹೊತ್ತಿ ಉರಿಯುತ್ತಿದೆ. ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಎಂಬುವವರನ್ನು ಮಿನಿಯಾ ಪೊಲೀಸ್ ನಗರದಲ್ಲಿ ಶ್ವೇತವರ್ಣೀಯ ಪೊಲೀಸ್ ಅಧಿಕಾರಿಯೊಬ್ಬ ನೆಲಕ್ಕೆ ಕೆಡವಿ ಆತನ ಕತ್ತಿನ ಮೇಲೆ ಮಂಡಿಯಿಟ್ಟು ಉಸಿರುಗಟ್ಟಿ ಸಾಯುವಂತೆ ಮಾಡಿದ್ದಾನೆ. ಇದು ವರ್ಣ ಭೇದದ ದೌರ್ಜನ್ಯವಾಗಿದ್ದು, ಅಮೆರಿಕದಲ್ಲಿ ಎಲ್ಲ ಕಡೆ ಪ್ರತಿಭಟನೆ ಹಿಂಸಾರೂಪ ತಾಳಿದೆ. ಇದು ಅಮೆರಿಕ ಅಧ್ಯಕ್ಷ ಟ್ರಂಪ್ ವೈಫಲ್ಯಕ್ಕೆ ಸಾಕ್ಷಿ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಕಂಡ ಕಂಡವರ ಮೇಲೆ ಹರಿಹಾಯುತ್ತಿರುವ ಟ್ರಂಪ್, ಜನರ ಪ್ರತಿಭಟನೆಯ ಬಗ್ಗೆ ಸಹಾನುಭೂತಿ ತೋರಿಸುವ ಬದಲು ಪದೇ ಪದೆ ಟ್ವೀಟ್ ಮಾಡಿ ಮಾಧ್ಯಮಗಳ ಮೇಲೆ ಕಿಡಿಕಾರಿದ್ದಾರೆ. ಅಮೆರಿಕದಲ್ಲಿ ಅರಾಜಕತೆ, ಹಿಂಸಾಚಾರಕ್ಕೆ ಮಾಧ್ಯಮಗಳು ಕಾರಣ ಎಂದು ಹೇಳಿದ್ದಾರೆ. ಟ್ರಂಪ್ ತಮ್ಮ ಮನಸ್ಥಿತಿ ಬದಲಾಯಿಸಿಕೊಂಡು ಪ್ರತಿಭಟನಾಕಾರರ ಮನವೊಲಿಸಿ, ವರ್ಣಭೇದ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಡಾ.ವಿ.ಎನ್.ಲಕ್ಷ್ಮಿನಾರಯಣ, ವಕೀಲ ಬಾಬುರಾಜ್, ಮೈಸೂರು ವಿ.ವಿ.ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ, ನೂರ್ ಮಹಮದ್ ಮರ್ಚೆಂಟ್, ಪಂಡಿತಾರಾಧ್ಯ, ವಕೀಲ ಪುನೀತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News