ಕೊರೋನ ಸೋಂಕಿತರ ಆರೈಕೆಯಲ್ಲಿ ಭಟ್ಕಳದ ನಿಸ್ವಾರ್ಥ ಸೇವಕ 'ಟಾಪ್ ನಿಸಾರ್'

Update: 2020-06-06 04:46 GMT

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪ್ರಾಕೃತಿಕ ಸೌಂದರ್ಯದೊಂದಿಗೆ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ಹಾಗೆಯೇ ಇಲ್ಲಿನ ಜನರು ಮಾನವೀಯತೆ, ಸಹೋದರತೆ ಮತ್ತು ಸಮಾಜ ಸೇವೆಗೆ ಬಹಳಷ್ಟು ಆಧ್ಯತೆ ನೀಡುತ್ತಾರೆ. ಸಾಮಾಜಿಕ ಕಳಕಳಿಯೊಂದಿಗೆ ಇಲ್ಲಿ ಹಲವು ಸಂಘ ಸಂಸ್ಥೆ, ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ವ್ಯಕ್ತಿಗಳ ಸಾಲಿನಲ್ಲಿ ರುಕ್ನುದ್ದೀನ್ ನಿಸಾರ್ ಆಹ್ಮದ್ ರವರ ಹೆಸರು ಮುಂಚೂಣಿಯಲ್ಲಿದೆ. ಟಾಪ್ ನಿಸಾರ್ ಎಂದೇ ಖ್ಯಾತರಾಗಿರುವ ನಿಸಾರ್ ಆಹ್ಮದ್ ಅವರ ಸಮಾಜ ಸೇವೆ ಕಾರ್ಯ ಎಲ್ಲರಿಗೂ ಮಾದರಿ.

ಭಟ್ಕಳದ ಸಮಾಜ ಸೇವಕ ನಿಸಾರ್ ಆಹ್ಮದ್ ರುಕ್ನುದ್ದೀನ್ ಯಾನೆ ಟಾಪ್ ನಿಸಾರ್ ಕಳೆದ 2 ತಿಂಗಳುಗಳಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೋನ ಸೋಂಕಿತರ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದು, ನನಗೆ ಈ ಕಾರ್ಯವು ಮನಶ್ಶಾಂತಿಯನ್ನು ನೀಡುತ್ತದೆ. ನಾನು ಈ ಕಾರ್ಯ ಮಾಡುವಾಗ ತೃಪ್ತನಾಗುತ್ತೇನೆ ಎಂದು ಹೇಳುತ್ತಾರೆ. ಭಟ್ಕಳದಲ್ಲಿ ಕಳೆದ 20 ವರ್ಷಗಳಿಂದ ತನ್ನನ್ನು ಸಮಾಜ ಸೇವಾ ಕಾರ್ಯದಲ್ಲಿ ತೊಡಿಗಿಸಿಕೊಂಡಿರುವ ಟಾಪ್ ನಿಸಾರ್ ಇದಕ್ಕಾಗಿ ಯಾವುದೇ ಪ್ರತಿಫಲವನ್ನು ಬಯಸದೆ ಕೆಲಸ ಮಾಡುತ್ತಿದ್ದಾರೆ. 

ಮನುಷ್ಯ ಸೇವೆ ಅವರಿಗೆ ಪ್ರಿಯವಾದ ಕೆಲಸವಾಗಿದೆ. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಮಾತುಗಳಂತೆ ಅವರು ಮಾಡುವ ಕಾಯಕದಲ್ಲಿ ಕೈಲಾಸವನ್ನು ಕಾಣುತ್ತಾರೆ. ಈ ಕಾರ್ಯಾಕ್ಕಾಗಿ ಇವರನ್ನು ಸರ್ಕಾರ ಗುರುತಿಸಿ ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳನ್ನು ನೀಡಿದೆ. ಆದರೆ ಈ ಪ್ರಶಸ್ತಿಗಳಿಂದ ಯಾವತ್ತೂ ಹೊಟ್ಟೆ ತುಂಬದು. ಇಂತಹ ಸಮಾಜಿಕ ಕಾರ್ಯಕರ್ತರಿಗೆ ಸರ್ಕಾರ ಮಾಶಾಸನ ನೀಡುವುದರ ಮೂಲಕ ಅವರ ಕುಟುಂಬಗಳಿಗೆ ನೆರವಾಗಬೇಕು ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. 

ಕೊರೋನ ಸೋಂಕಿತರನ್ನು ಉಪಚರಿಸುತ್ತಿರುವ ಟಾಪ್ ನಿಸಾರ್ ದೈರ್ಯ ಮೆಚ್ಚಲೇ ಬೇಕು. ನಿಸಾರ್ ರವರ ನಿಸ್ವಾರ್ಥ ಕಾರ್ಯವನ್ನು ಕಂಡ ಭಟ್ಕಳ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮಾತ್ ‘ಕೋರೋನಾ ಪ್ರಕರಣಕ್ಕೂ ಹಿಂದಿನಿಂದಲೂ ತಾಲೂಕು ಆಸ್ಪತ್ರೆಯ ಸಂಪರ್ಕದಲ್ಲಿದ್ದ ಟಾಪ್ ನಿಸಾರ್ ಎಲ್ಲಾ ತುರ್ತು ಸಂದರ್ಭದಲ್ಲಿ ನಮ್ಮ ಜೊತೆಗೆ ನಿಂತಿದ್ದಾರೆ. ಈಗ ಕೋರೋನ ವೇಳೆಯಲ್ಲಿಯೂ ತಮ್ಮ ಜೀವದ ಹಂಗು ತೊರೆದು ಓರ್ವ ಸಮಾಜ ಸೇವಕರಾಗಿ ಸ್ವಯಂ ಪ್ರೇರಿತರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಸರಕಾರದಿಂದ ಸಂಬಳ ಪಡೆದು ಕೆಲಸ ಮಾಡುವವರಿಗಿಂತ ಹೆಚ್ಚಾಗಿ ದಿನದ 24 ಗಂಟೆ ಕೆಲಸ ಮಾಡಿದ್ದಾರೆ. ಇವರ ಈ ಕಾರ್ಯಕ್ಕೆ ತಾಲೂಕು ಆಸ್ಪತ್ರೆ ವತಿಯಿಂದ ಅಭಿನಂದಿಸುತ್ತೇನೆ ಎನ್ನುತ್ತಾರೆ. 

"ನಾನು ಕಳೆದ 20 ವರ್ಷಗಳಿಂದ ಭಟ್ಕಳದಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳೊಂದಿಗೆ ಉತ್ತಮ ಬಾಂಧವ್ಯವನ್ನಿಟ್ಟುಕೊಂಡಿದ್ದೇನೆ. ಜನರ ಯಾವುದೇ ಕೆಲಸವಿರಲಿ ಅವರ ಸಹಾಯಕ್ಕೆ ಹೋಗುತ್ತೇನೆ. ದೇವರ ದಯೆಯಿಂದ ಸದ್ಯಕ್ಕೆ ಭಟ್ಕಳದಿಂದ ಕೊರೋನ ಸೋಂಕು ಕಾಲ್ಕಿತ್ತಿದೆ. ಎಲ್ಲರೂ ಗುಣಮುಖರಾಗಿ ಮನೆಗಳಿಗೆ ಬಂದಿದ್ದಾರೆ. ಇದು ನನಗೆ ಅತ್ಯಂತ ಹೆಚ್ಚು ಸಂತೋಷ ನೀಡಿದೆ" ಎನ್ನುತ್ತಾರೆ ನಿಸಾರ್ ರುಕ್ನುದ್ದೀನ್.

Writer - ​ಎಂ.ಆರ್. ಮಾನ್ವಿ

contributor

Editor - ​ಎಂ.ಆರ್. ಮಾನ್ವಿ

contributor

Similar News