ಕೊರೋನ ವೈರಸ್: ಇಟಲಿಯನ್ನು ಹಿಂದಿಕ್ಕಿ ಆರನೇ ಸ್ಥಾನ ತಲುಪಿದ ಭಾರತ

Update: 2020-06-06 06:48 GMT

ಹೊಸದಿಲ್ಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ದಾಖಲೆಯ 9,887 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 2,36,657 ತಲುಪುವುದರೊಂದಿಗೆ ಭಾರತವು ಇಟಲಿಯಲ್ಲಿನ ಕೋವಿಡ್-19 ಪ್ರಕರಣಗಳನ್ನೂ ಮೀರಿ ಕೋವಿಡ್-19ನಿಂದ ತೀವ್ರತರವಾಗಿ ಬಾಧಿತವಾಗಿರುವ ಜಗತ್ತಿನ ದೇಶಗಳ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದೆ.

ಇಲ್ಲಿಯ ತನಕ ದೇಶದಲ್ಲಿ ಕೋವಿಡ್-19ಗೆ ಬಲಿಯಾದವರ ಸಂಖ್ಯೆ 6,642 ಆಗಿದ್ದು ಕಳೆದ 24 ಗಂಟೆಗಳಲ್ಲಿ ಗರಿಷ್ಠ 294 ಸಾವು ಪ್ರಕರಣಗಳು ದಾಖಲಾಗಿವೆ. ಶುಕ್ರವಾರ, ಸತತ ಮೂರನೇ ದಿನ ಭಾರತದ ಕೋವಿಡ್-19 ಪ್ರಕರಣಗಳು 9,000ದ ಗಡಿ ದಾಟಿದೆ. ಅಮೆರಿಕಾ, ಬ್ರೆಝಿಲ್, ರಷ್ಯಾ, ಸ್ಪೇನ್ ಹಾಗೂ ಬ್ರಿಟನ್ ನಂತರ ಈಗ ಭಾರತ ಆರನೇ ಸ್ಥಾನದಲ್ಲಿದೆಯೆಂದು ಜಾನ್ಸ್ ಹಾಪ್ಕಿನ್ಸ್ ವಿವಿ ಅಂಕಿಅಂಶಗಳು ತಿಳಿಸಿವೆ.

ಭಾರತದಲ್ಲಿ ಈಗ ಒಟ್ಟು 1,15,942 ಸಕ್ರಿಯ ಕೋವಿಡ್-19 ಪ್ರಕರಣಗಳಿದ್ದು ಇಲ್ಲಿಯ ತನಕ 1,14,072 ಮಂದಿ ಗುಣಮುಖರಾಗಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳ ಪ್ರಕಾರ ಇಲ್ಲಿಯ ತನಕ ಶೇ 48.20 ಸೋಂಕಿತರು ಗುಣಮುಖರಾಗಿದ್ದಾರೆ. ಶುಕ್ರವಾರ ಬೆಳಿಗ್ಗೆಯಿಂದ ವರದಿಯಾದ 294 ಸಾವು ಪ್ರಕರಣಗಳಲ್ಲಿ ಮಹಾರಾಷ್ಟ್ರದಲ್ಲಿ 139 ಸೋಂಕಿತರು ಮೃತಪಟ್ಟಿದ್ದರೆ, ದಿಲ್ಲಿಯಲ್ಲಿ 58, ಗುಜರಾತ್‍ನಲ್ಲಿ 35,  ತಮಿಳುನಾಡು ಹಾಗೂ ಉತ್ತರ ಪ್ರದೇಶದಲ್ಲಿ ತಲಾ 12, ತೆಲಂಗಾಣದಲ್ಲಿ ಎಂಟು, ಮಧ್ಯಪ್ರದೇಶದಲ್ಲಿ ಏಳು, ರಾಜಸ್ಥಾನದಲ್ಲಿ ಐದು, ಆಂಧ್ರ ಪ್ರದೇಶದಲ್ಲಿ ಇಬ್ಬರು ಹಾಗೂ ಜಮ್ಮು ಕಾಶ್ಮೀರ, ಒಡಿಶಾ, ಪಂಜಾಬ್, ಜಾರ್ಖಂಡ್ ಹಾಗೂ ಉತ್ತರಾಖಂಡ್ ನಲ್ಲಿ ತಲಾ ಒಬ್ಬ ಸೋಂಕಿತ ಮೃತಪಟ್ಟಿದ್ದಾರೆ.

ದೇಶದಲ್ಲಿ ಮೃತಪಟ್ಟ 6,642 ಮಂದಿಯುಲ್ಲಿ ಮಹಾರಾಷ್ಟ್ರದ 2,849, ಗುಜರಾತ್‍ನ 1,190, ದಿಲ್ಲಿಯ 708, ಮಧ್ಯ ಪ್ರದೇಶದ 384,  ಪಶ್ಚಿಮ ಬಂಗಾಳದ 356, ಉತ್ತರ ಪ್ರದೇಶದ 257, ತಮಿಳುನಾಡಿನ 232, ರಾಜಸ್ಥಾನದ 218, ತೆಲಂಗಾಣದ 113, ಆಂಧ್ರ ಪ್ರದೇಶದ 73, ಕರ್ನಾಟಕದ 57 ಹಾಗೂ ಪಂಜಾಬ್‍ನ 48 ಮಂದಿ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News