ಹುಬ್ಬಳ್ಳಿ-ಅಂಕೋಲಾ ಹೊಸ ಬ್ರಾಡ್ ಗೇಜ್ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅನುಮತಿ ನೀಡಲು ದೇಶಪಾಂಡೆ ಮನವಿ

Update: 2020-06-06 07:27 GMT

ಬೆಂಗಳೂರು, ಜೂ.6: ಹುಬ್ಬಳ್ಳಿ-ಅಂಕೋಲಾ ಹೊಸ ಬ್ರಾಡ್ ಗೇಜ್ ರೈಲ್ವೆ ಮಾರ್ಗ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಅನುಮತಿ ನೀಡಬೇಕೆಂದು ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ಮನವಿ ಮಾಡಿದ್ದಾರೆ. 

ಈ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಪರಿಸರ ಸಚಿವರಾದ ಶ್ರೀ ಪ್ರಕಾಶ್ ಜಾವ್ದೇಕರ್ ಅವರಿಗೆ ಪತ್ರ ಬರೆದಿರುವ ಅವರು, ಈ ರೈಲು ಮಾರ್ಗಕ್ಕೆ ಅಂದಿನ ಪ್ರಧಾನಿ ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಅಡಿಗಲ್ಲು ಹಾಕಿದ್ದರು, ಜೊತೆಗೆ ಹುಬ್ಬಳ್ಳಿಯಿಂದ ಕಲಘಟಗಿ ವರೆಗೆ ಟ್ರ್ಯಾಕ್ ನ ಒಂದು ಭಾಗ ಪೂರ್ಣಗೊಂಡಿದೆ. ಮುಂದಿನ ಭಾಗದ ಕಾಮಗಾರಿಯು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವುದರಿಂದ ಅಂದರೆ ಕಾರವಾರ, ಯಲ್ಲಾಪುರ ಮತ್ತು ಧಾರವಾಡ ವಿಭಾಗದ ಸುಮಾರು 595.64 ಹೆಕ್ಟರ್ ನಷ್ಟು ಅರಣ್ಯ ಭೂಮಿ ಉಪಯೋಗಿಸಬೇಕಾಗುತ್ತದೆ. ಹೀಗಾಗಿ ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಬೇಕಾಗಿದ್ದು, ಕೇಂದ್ರ ಸರ್ಕಾರ ಈ ಪ್ರದೇಶದ ಬಳಕೆಗೆ ಅನುಮತಿ ನೀಡಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.

ಈಗಾಗಲೇ ರಾಜ್ಯ ವನ್ಯಜೀವಿ ಮಂಡಲಿಯಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ಅರಣ್ಯ ಪ್ರದೇಶ ಬಳಕೆಗೆ ಅನುಮತಿ ನೀಡಲಾಗಿದ್ದು, ಸದರಿ ಪ್ರಸ್ತಾವನೆಯನ್ನು ಕೇಂದ್ರ ವನ್ಯಜೀವಿ ಮಂಡಳಿಗೆ ಅನುಮತಿಗಾಗಿ ಕಳುಹಿಸಲಾಗಿದೆ. ಹೀಗಾಗಿ ನಮ್ಮ ರಾಜ್ಯದ ಕೇಂದ್ರ ಸಚಿವರೂ ಕೂಡಾ ಈ ವಿಷಯದ ಬಗ್ಗೆ ಕೇಂದ್ರ ಪರಿಸರ ಸಚಿವರಿಗೆ ಮನವರಿಕೆ ಮಾಡಿಕೊಟ್ಟು, ಅನುಮತಿ ನೀಡಲು ಒತ್ತಾಯಿಸಬೇಕೆಂದು ದೇಶಪಾಂಡೆ ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News