ಮೈಶುಗರ್ ಕಂಪೆನಿ ಖಾಸಗೀಕರಣ ಬೇಡ: ಸಿಎಂ ಬಿಎಸ್‌ವೈಗೆ ಪತ್ರ ಬರೆದ ಸಿದ್ದರಾಮಯ್ಯ

Update: 2020-06-06 11:42 GMT

ಬೆಂಗಳೂರು, ಜೂ.6: ಸಾವಿರಾರು ಕೋಟಿ ರೂ. ಮೌಲ್ಯವುಳ್ಳ ಮೈಶುಗರ್ ಕಂಪೆನಿಯನ್ನು ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಬಾರದೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ಹಳೇ ಮೈಸೂರು ಭಾಗದಲ್ಲಿ ಧೀರ್ಘ ಇತಿಹಾಸ ಹಾಗೂ ಆ ಭಾಗದ ರೈತರ ಬದುಕನ್ನು ಸುಭದ್ರಗೊಳಿಸಿದ್ದ ಮೈಶುಗರ್ ಕಂಪೆನಿಯನ್ನು ರಾಜ್ಯ ಸರಕಾರ ಮಾರಾಟ ಮಾಡಲು ಮುಂದಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ವಿಶೇಷ ಆಸಕ್ತಿಯಿಂದಾಗಿ 1933ರಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ ಆರಂಭಗೊಂಡಿತು. ಇದನ್ನೆ ಮೈಶುಗರ್ ಕಾರ್ಖಾನೆ ಎಂದು ಕರೆಯಲಾಯಿತು. ಇದು ರಾಜ್ಯದ ಮೊಟ್ಟಮೊದಲ, ಏಕೈಕ ಸರಕಾರಿ ಸಕ್ಕರೆ ಕಾರ್ಖಾನೆಯೆಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಾರ್ಖಾನೆಯಿಂದ ಹಳೇ ಮೈಸೂರು ಭಾಗದ ಕಬ್ಬು ಬೆಳೆಗಾರರ ಬದುಕು ದೊಡ್ಡ ಪ್ರಮಾಣದಲ್ಲಿ ಸುಧಾರಿಸಿದನ್ನು ರಾಜ್ಯ ಸರಕಾರ ಮನಗಾಣಬೇಕು.

ಮಂಡ್ಯ ಜಿಲ್ಲೆಯೊಂದರಲ್ಲಿಯೇ ಸುಮಾರು 83,831 ಎಕರೆ ಪ್ರದೇಶದಲ್ಲಿ 35 ಲಕ್ಷ ಮೆಟ್ರಿಕ್ ಟನ್‍ಗಳಿಗೂ ಹೆಚ್ಚು ಕಬ್ಬನ್ನು ಬೆಳೆಯಲಾಗುತ್ತೆ. ಅಕ್ಕಪಕ್ಕದ ಜಿಲ್ಲೆಗಳಲ್ಲೂ ಅಪಾರ ಪ್ರಮಾಣದ ಕಬ್ಬನ್ನು ಬೆಳೆಯಲಾಗುತ್ತದೆ. ಮೈಶುಗರ್ ಕಾರ್ಖಾನೆಗೆ ಪ್ರತಿನಿತ್ಯ ಸುಮಾರು 5 ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯವಿದೆ. ಈ ಹಿಂದೆ ವಾರ್ಷಿಕ 9 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಅರೆಯುತ್ತಿತ್ತು. ಜತೆಗೆ ಈ ಕಾರ್ಖಾನೆಯು ಡಿಸ್ಟಿಲರಿ, ಗ್ಲೂಕೋಸ್, ಚಾಕ್ಲೇಟ್ ಮತ್ತು ಎಥೆನಾಲ್‍ನಂತಹ ಉತ್ಪನ್ನಗಳನ್ನು ನಿರಂತರವಾಗಿ ಉತ್ಪಾದಿಸುವ ಸಾಮರ್ಥ್ಯವಿತ್ತು.

ಮೈಶುಗರ್ ಕಂಪೆನಿ ಶೇ.20ರಿಂದ 30ಶೇರು ಡಿವಿಡೆಂಟ್‍ನ್ನು 18 ವರ್ಷಕ್ಕೂ ಹೆಚ್ಚು ಕಾಲ ನೀಡಿರುವ ಹೆಗ್ಗಳಿಕೆ ಹೊಂದಿದೆ. 14ಕ್ಕೂ ಹೆಚ್ಚು ಫಾರ್ಮ್‍ಗಳು, ವಿದ್ಯಾಸಂಸ್ಥೆಗಳು ಮತ್ತು ರೈತ ಸಮುದಾಯ ಭವನಗಳನ್ನು ಹೊಂದಿದ್ದು, ಮಂಡ್ಯ ಜಿಲ್ಲೆಯೊಂದರಲ್ಲಿಯೇ ಸುಮಾರು 207 ಎಕರೆಗಿಂತ ಹೆಚ್ಚು ಭೂಮಿಯನ್ನು ಹೊಂದಿದೆ. ಈ ಕಂಪೆನಿಯ ಪುನಶ್ಚೇತನಕ್ಕಾಗಿ 2013ರಿಂದ 2018-19ರವರೆಗೆ ಸುಮಾರು 229.65ಕೋಟಿ ರೂ.ಗಳನ್ನು ನೀಡಲಾಗಿತ್ತು. ಇಷ್ಟು ಸುಧೀರ್ಘ ಇತಿಹಾಸ ಹಾಗೂ ಸಾಕಷ್ಟು ಸಂಪತ್ತನ್ನು ಹೊಂದಿರುವ ಮೈಶುಗರ್ ಕಂಂಪೆನಿಯನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡದೆ, ಸರಕಾರವೇ ಒಂದಷ್ಟು ಬಂಡವಾಳ ನೀಡಿ ಕಾರ್ಖಾನೆಯನ್ನು ಆಧುನೀಕರಣ ಮಾಡುವ ಮೂಲಕ ಇನ್ನಷ್ಟು ಸದೃಢಗೊಳಿಸಬೇಕೆಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News