ಖಾಸಗಿ ಸಂಸ್ಥೆಗಳ ಮಾಲಕರಿಗೆ ಸರಕಾರ ಮಾದರಿಯಾಗಬೇಕು: ಸಿದ್ದರಾಮಯ್ಯ

Update: 2020-06-06 12:16 GMT

ಬೆಂಗಳೂರು, ಜೂ. 6: 'ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ), ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಸಿಬ್ಬಂದಿಗೆ ರಜೆ ನೀಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ದೇಶನ ನೀಡದೆ, ಅವರಿಗೆ ನೀಡಬೇಕಾದ ಸಂಬಳ ಸೇರಿದಂತೆ ಇನ್ನಿತರ ಅಗತ್ಯ ಸವಲತ್ತುಗಳನ್ನು ಈ ಕೂಡಲೇ ನೀಡಿ, ಖಾಸಗಿ ಸಂಸ್ಥೆ, ಕಾರ್ಖಾನೆಗಳ ಮಾಲಕರಿಗೆ ಮಾದರಿಯಾಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಶನಿವಾರ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಸರಕಾರದ ಅಧೀನದಲ್ಲಿರುವ ಎಲ್ಲ ಸಂಸ್ಥೆಗಳ/ ಕಾರ್ಖಾನೆಗಳ/ ಕಂಪೆನಿಗಳ ನೌಕರರಿಗೆ ನೀಡಬೇಕಾದ ವೇತನವನ್ನು ಕೂಡಲೇ ನೀಡಬೇಕು. ಕೆಎಸ್ಸಾರ್ಟಿಸಿ ಚಾಲಕ, ನಿರ್ವಾಹಕರು ಸೇರಿದಂತೆ ಇನ್ನಿತರ ಸಿಬ್ಬಂದಿಗಳಿಗೆ ಲಾಕ್ ಡೌನ್ ಅವಧಿಯಲ್ಲಿ ಸರಿಯಾಗಿ ಸಂಬಳ ನೀಡದೇ ರಜೆ ಹಾಕುವಂತೆ ಒತ್ತಾಯ ಮಾಡಲಾಗುತ್ತಿದೆ ಎಂಬ ದೂರುಗಳಿವೆ. ಸರಕಾರವು ಖಾಸಗಿ ವಲಯದ ಕಂಪೆನಿಗಳ, ಕೈಗಾರಿಕೆಗಳ ಮಾಲಕರಿಗೆ ನೀಡಿರುವ ನಿರ್ದೇಶನದಂತೆ ತಮ್ಮ ತಮ್ಮ ಸಂಸ್ಥೆಗಳ ನೌಕರರಿಗೆ ಸಂಬಳ ಮತ್ತು ಸೌಲಭ್ಯಗಳನ್ನು ಯಾವುದೇ ಕಾರಣಕ್ಕೂ ಕಡಿತ ಮಾಡಬಾರದು ಎಂದು ನಿರ್ದೇಶನ ನೀಡಿದೆ. ಆದರೆ, ಸರಕಾರ ಕೆಎಸ್ಸಾರ್ಟಿಸಿ ಸಿಬ್ಬಂದಿಗೆ ವೇತನ ನೀಡದೆ ರಜೆ ಹಾಕಬೇಕೆಂದು ಒತ್ತಾಯ ಮಾಡುವ ದ್ವಂದ್ವ ನೀತಿ ಸರಿಯಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.

ಖಾಸಗಿ ಸಂಸ್ಥೆಗಳಿಗೆ, ಕಾರ್ಖಾನೆಗಳ ಮಾಲಕರಿಗೆ ವೇತನ ನೀಡಬೇಕೆಂದು ಒತ್ತಾಯ ಮಾಡುವ ಮೊದಲು ತಾನು ನೈತಿಕ ಹಾದಿಯಲ್ಲಿ ನಡೆಯಬೇಕು. ಕೂಡಲೇ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿ ಇನ್ನಿತರ ಸಂಸ್ಥೆಗಳ ನೌಕರರಿಗೆ ಕೂಡಲೇ ವೇತನ ಮತ್ತು ಸವಲತ್ತುಗಳನ್ನು ನೀಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News