ಚಿಕ್ಕಮಗಳೂರು: ಸಾಲಬಾಧೆಗೆ ಬೇಸತ್ತ ಕೃಷಿಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

Update: 2020-06-06 14:44 GMT

ಚಿಕ್ಕಮಗಳೂರು, ಜೂ.6: ಸಾಲ ತೀರಿಸಲಾಗದೇ ನೊಂದ ಕೃಷಿಕರೊಬ್ಬರು ಮನೆಯಲ್ಲಿದ್ದ ಪರವಾನಿಗೆ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಮ್ಮಾರು ಗ್ರಾಮ ಸಮೀಪದ ಮದ್ಲೆಬೈಲು ಎಂಬಲ್ಲಿ ಶನಿವಾರ ಸಂಜೆ ವರದಿಯಾಗಿದೆ.

ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮ ಸಮೀಪದ ಮದ್ಲೆಬೈಲು ಗ್ರಾಮದ ಕೃಷಿಕ ಶಿವಪ್ಪ ನಾಯಕ (65) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತ. ನೆಮ್ಮಾರು ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಶೃಂಗೇರಿ ಎರಡು ರಾಷ್ಟ್ರೀಯ ಬ್ಯಾಂಕ್‍ಗಳಲ್ಲಿ ಸಾಲ ಮಾಡಿಕೊಂಡಿದ್ದ ಇವರು ಸಾಲ ತೀರಿಸಲಾಗದೇ ಇತ್ತೀಚೆಗೆ ಮಾನಸಿಕವಾಗಿ ನೊಂದಿದ್ದರೆಂದು ತಿಳಿದುಬಂದಿದೆ.

ಶನಿವಾರ ಸಂಜೆ ಮನೆಯಲ್ಲಿದ್ದ ಪರವಾನಿಗೆ ಬಂದೂಕಿನೊಂದಿಗೆ ಮನೆ ಸಮೀಪದ ಅಡಿಕೆ ತೋಟಕ್ಕೆ ತೆರಳಿದ್ದ ಶಿವಪ್ಪನಾಯಕ ಬಂದೂಕಿನಿಂದ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುಂಡಿದ ಸದ್ದು ಕೇಳಿ ಮನೆಯಲ್ಲಿದ್ದ ಪತ್ನಿ ತೋಟಕ್ಕೆ ಹೋಗಿ ನೋಡಿದಾಗ ಶಿವಪ್ಪನಾಯಕ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಶಿವಪ್ಪನಾಯಕ ಮೂಲತಃ ನೆಮ್ಮಾರು ಸಮೀಪದ ಕೆರೆಕಟ್ಟೆ ನಿವಾಸಿಯಾಗಿದ್ದು, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಇವರ ಜಮೀನು ಸೇರಿದ್ದರಿಂದ ಜಮೀನಿಗೆ ಸರಕಾರದ ಪರಿಹಾರ ಪಡೆದು ನೆಮ್ಮಾರು ಸಮೀಪದಲ್ಲಿ ಜಮೀನು ಖರೀದಿಸಿ ಕೃಷಿ ಮಾಡಿದ್ದರು. ಕೃಷಿ ಹಾಗೂ ಮನೆ ನಿರ್ಮಾಣಕ್ಕೆ ವಿವಿಧ ಬ್ಯಾಂಕ್‍ಗಳಲ್ಲಿ ಸಾಲ ಮಾಡಿದ್ದ ಶಿವಪ್ಪನಾಯಕ ಇದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದು ಬಂದಿದ್ದು, ಮೃತರಿಗೆ ಇಬ್ಬರು ಮಕ್ಕಳಿದ್ದು ಉದ್ಯೋಗ ಹೊರ ಜಿಲ್ಲೆಯಲ್ಲಿ ನೆಲೆಸಿದ್ದಾರೆಂದು ತಿಳಿದು ಬಂದಿದೆ.

ಘಟನೆ ಸಂಬಂಧ ಶೃಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News