ಲಾಕ್‍ಡೌನ್‍ನಿಂದ ಹಣಕಾಸಿನ ಸಮಸ್ಯೆ: ಆತ್ಮಹತ್ಯೆಗೆ ಶರಣಾದ ಚಿಕ್ಕಮಗಳೂರಿನ ವೃದ್ಧ ದಂಪತಿ

Update: 2020-06-06 16:05 GMT

ಚಿಕ್ಕಮಗಳೂರು, ಜೂ.6: ಲಾಕ್‍ಡೌನ್‍ನಿಂದಾಗಿ ಹಣಕಾಸಿನ ಸಮಸ್ಯೆಗೊಳಗಾಗಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ಶನಿವಾರ ಸಂಜೆ ವರದಿಯಾಗಿದೆ.

ನಗರದ ಹೊಸಮನೆ ಬಡಾವಣೆ ನಿವಾಸಿಗಳಾದ ಗೋಪಾಲಕೃಷ್ಣ (78) ಹಾಗೂ ಇವರ ಪತ್ನಿ ರತ್ನಾ (74) ಆತ್ಮಹತ್ಯೆ ಮಾಡಿಕೊಂಡವರು. ಮಕ್ಕಳ ನಿರ್ಲಕ್ಷ್ಯಕ್ಕೆ ಬೇಸತ್ತಿದ್ದಾರೆನ್ನಲಾದ ದಂಪತಿ ಇತ್ತೀಚೆಗೆ ಲಾಕ್‍ಡೌನ್‍ನಿಂದಾಗಿ ಹಣಕಾಸಿನ ಸಮಸ್ಯೆಗೂ ಒಳಗಾಗಿದ್ದರು. ಇದರಿಂದ ನೊಂದ ದಂಪತಿ ಶನಿವಾರ ಸಂಜೆ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದು ಬಂದಿದೆ.

ಆತ್ಮಹತ್ಯೆಗೆ ಶರಣಾಗಿರುವ ದಂಪತಿ ಪೈಕಿ ಗೋಪಾಲಕೃಷ್ಣ ಮನೆಯಲ್ಲಿ ನೇಣಿಗೆ ಶರಣಾಗಿದ್ದರೆ, ರತ್ನಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಲಾಕ್‍ಡೌನ್ ಸಂದರ್ಭದಲ್ಲಿ ಈ ದಂಪತಿ ಭಾರೀ ಹಣಕಾಸಿನ ತೊಂದರೆಗೊಳಗಾಗಿದ್ದು, ಅನಾರೋಗ್ಯ ಸಂಬಂಧ ಆಸ್ಪತ್ರೆಯಲ್ಲಿ ತಪಾಸಣೆಗೂ ಹಣಕಾಸಿನ ತೊಂದರೆ ಎದುರಿಸುತ್ತಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದ ದಂಪತಿ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಮೃತ ದಂಪತಿಯ ಇಬ್ಬರು ಮಕ್ಕಳು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News