ಚೀನಾವನ್ನು ಟೀಕಿಸಿದ ಜಾಹೀರಾತು: ಅಮುಲ್ ಟ್ವಿಟರ್ ಖಾತೆ ಕೆಲ ಸಮಯ ಸ್ಥಗಿತ

Update: 2020-06-06 15:17 GMT
  ಫೋಟೊ ಕೃಪೆ: twitter.com/Amul_Coop

ಅಹ್ಮದಾಬಾದ್,ಜೂ.6: ಖ್ಯಾತ ಅಮುಲ್ ಬ್ರಾಂಡ್‌ನ ಮಾಲಕನಾಗಿರುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟವು ಚೀನಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಪರೋಕ್ಷ ಕರೆ ನೀಡಿದ್ದ ಕಾರ್ಟೂನ್‌ನ್ನು ಪೋಸ್ಟ್ ಮಾಡಿದ ಬಳಿಕ ಅದರ ಟ್ವಿಟರ್ ಖಾತೆಯನ್ನು ಸ್ವಲ್ಪ ಸಮಯ ತಡೆಹಿಡಿಯಲಾಗಿತ್ತು.

 ‘ಜಾಹೀರಾತು ಏಜೆನ್ಸಿಯು ಗುರುವಾರ ರಾತ್ರಿ ‘ಎಕ್ಸಿಟ್ ಡ್ರ್ಯಾಗನ್?’ಎಂಬ ಅಡಿಬರಹದೊಂದಿಗೆ ಸಂಸ್ಥೆಯ ಲಾಂಛನವಾಗಿರುವ ‘ಅಮುಲ್ ಗರ್ಲ್’ನ್ನು ಒಳಗೊಂಡ ಕಾರ್ಟೂನ್‌ನ್ನು ಪೋಸ್ಟ್ ಮಾಡಿದ ಬಳಿಕ ಟ್ವಿಟರ್ ಅಮುಲ್ ಹ್ಯಾಂಡಲ್‌ನ್ನು ಸ್ಥಗಿತಗೊಳಿಸಿತ್ತು. ಮತ್ತೆ ಸಕ್ರಿಯಗೊಳಿಸುವಂತೆ ನಾವು ಟ್ವಿಟರ್‌ನ್ನು ಕೋರಿದ ಬಳಿಕ ಖಾತೆಯನ್ನು ಮರುಸ್ಥಾಪಿಸಲಾಗಿದೆ ’ ಎಂದು ಒಕ್ಕೂಟದ ಆಡಳಿತ ನಿರ್ದೇಶಕ ಆರ್.ಎಸ್.ಸೋಧಿ ತಿಳಿಸಿದರು.

ಜಾಹಿರಾತಿನ ಕೆಳಗಿನ ಬಲಮೂಲೆಯಲ್ಲಿ ‘ಅಮುಲ್ ಮೇಡ್ ಇನ್ ಇಂಡಿಯಾ ’ಎಂಬ ಶಬ್ದಗಳಿದ್ದವು.

ಕಾರ್ಟೂನ್ ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ್ ಅಭಿಯಾನವನ್ನು ಬೆಂಬಲಿಸಿದ್ದಂತೆ ಮತ್ತು ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನಿ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿದ್ದಂತೆ ಕಂಡುಬಂದಿತ್ತು.

ಶನಿವಾರ ಮಧ್ಯಾಹ್ನ ಅಮುಲ್‌ನ ಟ್ವಿಟರ್ ಹ್ಯಾಂಡಲ್ ಪ್ರವೇಶಿಸಿದಾಗ ಸದ್ರಿ ಕಾರ್ಟೂನ್‌ನ್ನು ಒಳಗೊಂಡಿದ್ದ ಪೋಸ್ಟ್ ಅಲ್ಲಿತ್ತು.

‘ಟ್ವಿಟರ್‌ನಿಂದ ಯಾವುದೇ ಅಧಿಕೃತ ಹೇಳಿಕೆಯನ್ನು ನಾವು ಸ್ವೀಕರಿಸಿಲ್ಲ,ಹೀಗಾಗಿ ಖಾತೆಯನ್ನು ಏಕೆ ತಡೆಹಿಡಿಯಲಾಗಿತ್ತು ಎನ್ನುವುದು ನಮಗೆ ಗೊತ್ತಿಲ್ಲ. ಅಮುಲ್ ಯಾರ ವಿರುದ್ಧವೂ ಜಾಹೀರಾತು ಅಭಿಯಾನವನ್ನು ನಡೆಸಿಲ್ಲ ’ಎಂದು ಸೋಧಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News