ಆನ್‍ಲೈನ್ ಶಿಕ್ಷಣದ ಕುರಿತು ಜೂ.8ರಂದು ಆದೇಶ ಪ್ರಕಟ: ಶಿಕ್ಷಣ ಸಚಿವ ಸುರೇಶ್‍ ಕುಮಾರ್

Update: 2020-06-06 15:19 GMT

ಬಳ್ಳಾರಿ, ಜೂ.6: ಕೋವಿಡ್-19 ಹಿನ್ನೆಲೆಯಲ್ಲಿ ಯಾವ ತರಗತಿಯಿಂದ ಆನ್‍ಲೈನ್ ಶಿಕ್ಷಣ ನೀಡಿದರೆ ಉತ್ತಮ ಎಂಬುದರ ಕುರಿತು ಜೂ.8ರಂದು ಆದೇಶ ಹೊರಡಿಸಲಾಗುವುದೆಂದು ಶಿಕ್ಷಣ ಸಚಿವ ಸುರೇಶ್‍ಕುಮಾರ್ ತಿಳಿಸಿದ್ದಾರೆ.

ಶನಿವಾರ ಜಿಲ್ಲೆಯ ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್‍ಕೆಜಿ, ಯುಕೆಜಿ ಮಕ್ಕಳಿಗೆ ಆನ್‍ಲೈನ್ ಶಿಕ್ಷಣದಿಂದ ದುಷ್ಪರಿಣಾಮ ಬೀರುತ್ತದೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಹಾಗಾದರೆ, ಎಷ್ಟನೇ ತರಗತಿಯಿಂದ ಆನ್‍ಲೈನ್ ಶಿಕ್ಷಣ ಪ್ರಾರಂಭಿಸಬೇಕು, ಹಾಗೂ ಅದು ಯಾವ ಸ್ವರೂಪದಲ್ಲಿ ಇರಬೇಕು, ಎಷ್ಟು ಗಂಟೆಗಳ ನಡೆದರೆ ಸೂಕ್ತ ಎಂಬುದರ ಕುರಿತು ಮುಂದಿನ ಸೋಮವಾರ ಸುತ್ತೋಲೆ ಹೊರಡಿಸಲಾಗುವುದು ಎಂದರು.

ಆನ್‍ಲೈನ್ ಶಿಕ್ಷಣಕ್ಕೆ ಪೂರಕವಾದ ಪರಿಕರಗಳು ಎಷ್ಟು ಮಕ್ಕಳ ಮನೆಗಳಲ್ಲಿವೆ ಎಂಬುದರ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. 48 ಲಕ್ಷ ಮಕ್ಕಳ ಪೈಕಿ 26ಲಕ್ಷ ಮಂದಿಯ ಮನೆಯಲ್ಲಿ ಮಾತ್ರ ಆಂಡ್ರಾಯ್ಡ್ ಫೋನ್‍ಗಳಿವೆ. ಇಂತಹ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಆನ್‍ಲೈನ್ ಮೂಲಕ ಶಿಕ್ಷಣ ನೀಡಬೇಕೆಂದು ಚಿಂತನೆ ನಡೆಯುತ್ತಿದೆ. ಹಾಗೂ ಎಲ್‍ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಬೇಡವೆಂಬುದು ಪೋಷಕರ ಅಭಿಪ್ರಾಯವಾಗಿದೆ. ಅದಕ್ಕೆ ನನ್ನ ಸಹಮತ ಇದೆ ಎಂದು ಅವರು ತಿಳಿಸಿದ್ದಾರೆ.

ಎಸೆಸೆಲ್ಸಿ ಪರೀಕ್ಷೆ: ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಎಸೆಸೆಲ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುರಕ್ಷಿತ ಅಂತರ, ಮಾಸ್ಕ್, ಸ್ಯಾನಿಟೈಸರ್ ಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ 8,48,203 ಮಂದಿ ಪರೀಕ್ಷೆ ಬರೆಯಲಿದ್ದಾರೆ. ಈ ವೇಳೆ ಅನಾರೋಗ್ಯದ ಮಕ್ಕಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಜುಲೈ ಕೊನೆವಾರ ಇಲ್ಲವೆ ಆಗಸ್ಟ್ ನ ಮೊದಲ ವಾರದಲ್ಲಿ ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಲಿದೆ. ಈ ವರ್ಷವೂ ಪೂರಕ ಪರೀಕ್ಷೆ ನಡೆಸಲಿದ್ದೇವೆ. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲವೆಂದು ಅವರು ತಿಳಿಸಿದ್ದಾರೆ.

ಶುಲ್ಕ ವಸೂಲಿಗೆ ಒತ್ತಡ ಬೇಡ

ಆರ್‍ಟಿಇ ಶುಲ್ಕದ ಮರುಪಾವತಿ ಹಣವನ್ನು ಸರಕಾರ ಪಾವತಿಸುವುದರಿಂದ ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಪೋಷಕರ ಬಳಿ ಶುಲ್ಕ ವಸೂಲಿಗೆ ಒತ್ತಡ ಹಾಕಬಾರದೆಂದು ಶಿಕ್ಷಣ ಸಚಿವ ಸುರೇಶ್‍ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಫೇಸ್‍ಬುಕ್‍ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಈ ಸಾಲಿನ ಆರ್‍ಟಿಇ ಶುಲ್ಕ ಮರುಪಾವತಿ ಹಣ ಬಿಡುಗಡೆಯಿಂದ ಖಾಸಗಿ ಶಾಲೆಗಳ ಸಾಮಾಜಿಕ ಜವಾಬ್ದಾರಿ ಹೆಚ್ಚಿದೆ. ಒಂದೇ ಕಂತಿನಲ್ಲಿ ಪಾವತಿಸಲಾಗಿರುವ ಅನುದಾನವನ್ನು ಬಳಸಿಕೊಂಡು ಆರ್ಥಿಕ ದುಸ್ಥಿತಿಯಲ್ಲಿರುವ ಪೋಷಕರ ಹಿತ ಕಾಯಬೇಕಾಗಿದೆ. ಮುಖ್ಯವಾಗಿ ಖಾಸಗಿ ಶಾಲೆಗಳು ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ಶುಲ್ಕ ಹೆಚ್ಚಳ ಮಾಡಬಾರದು. ಶಾಲೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿಸುವುದು ಸೇರಿದಂತೆ ಸರಕಾರದ ಸದಾಶಯವನ್ನು ಅರ್ಥೈಸಿಕೊಂಡು ಕಾರ್ಯನಿರ್ವಹಿಸಬೇಕಿದೆ ಎಂದು ಅವರು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News