ಜೂ.8ರಿಂದ ಮಸೀದಿಗಳನ್ನು ತೆರೆಯಲು ಅವಕಾಶ: ಸರಕಾರದ ನಿರ್ದೇಶನಗಳನ್ನು ಪಾಲಿಸಲು ಅಮೀರೆ ಶರೀಅತ್ ಮನವಿ

Update: 2020-06-06 15:26 GMT

ಬೆಂಗಳೂರು, ಜೂ.6: ಕೋವಿಡ್-19 ಲಾಕ್‍ಡೌನ್ ಸಡಿಲಿಸಿ ಜೂ.8ರಿಂದ ಮಸೀದಿಗಳನ್ನು ತೆರೆಯಲು ಅವಕಾಶ ಕಲ್ಪಿಸಿರುವ ರಾಜ್ಯ ಸರಕಾರದ ತೀರ್ಮಾನವನ್ನು ಸ್ವಾಗತಿಸಿರುವ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ, ಸರಕಾರ ಮಸೀದಿಗಳಲ್ಲಿ ಕೈಗೊಳ್ಳಲಾಗುವ ಚಟುವಟಿಕೆಗಳ ಕುರಿತು ನೀಡಿರುವ ನಿರ್ದೇಶನಗಳನ್ನು ಪ್ರತಿಯೊಬ್ಬರೂ ತಪ್ಪದೆ ಪಾಲಿಸುವಂತೆ ಮನವಿ ಮಾಡಿದ್ದಾರೆ.

ಶನಿವಾರ ನಗರದ ಖುದ್ದೂಸ್ ಸಾಹೇಬ್ ಈದ್ಗಾ ಆವರಣದಲ್ಲಿರುವ ಖಾದ್ರಿಯಾ ಮಸೀದಿಯಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು ಹಾಗೂ ಸರಕಾರಿ ಅಧಿಕಾರಿಗಳ ಸಮಾಲೋಚನಾ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮಸೀದಿಯೊಳಗೆ ಪ್ರವೇಶಿಸುವ ಮುನ್ನ ತಮ್ಮ ಕೈಗಳನ್ನು ಸ್ಯಾನಿಟೈಸರ್ ನಿಂದ ಸ್ವಚ್ಛಗೊಳಿಸಬೇಕು ಅಥವಾ ಸೋಪಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು. ಮಸೀದಿಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರಾರ್ಥನೆ ಸಲ್ಲಿಸುವವರು ತಮ್ಮ ಮನೆಯಿಂದಲೆ ವುಝೂ ಮಾಡಿಕೊಂಡು ಬರಬೇಕು. ನಮಾಝ್ ಮಾಡುವಾಗ ಪರಸ್ಪರ ಕನಿಷ್ಠ ಮೂರು ಅಡಿಗಳ ಅಂತರವನ್ನು ಕಾಯ್ದುಕೊಳ್ಳುವುದು ಸೇರಿದಂತೆ ಅನೇಕ ನಿದೇರ್ಶನಗಳನ್ನು ಸರಕಾರ ಹಾಗೂ ಇಮಾರತ್-ಎ-ಶರೀಅ ಮೂಲಕ ನೀಡಲಾಗಿದೆ ಎಂದು ಅವರು ಹೇಳಿದರು.

ಕೆಲವು ಜಿಲ್ಲೆಗಳಲ್ಲಿ ಜೂನ್ ಅಂತ್ಯದ ವರೆಗೂ ಮಸೀದಿಗಳನ್ನು ತೆರೆಯದಿರಲು ನಿರ್ಧರಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಅವರು ತೀರ್ಮಾನಗಳನ್ನು ಕೈಗೊಂಡಿರುತ್ತಾರೆ. ಅದೇ ರೀತಿ ಶುಕ್ರವಾರದ ನಮಾಝ್ ಸಂದರ್ಭದಲ್ಲಿಯೂ ಒಂದಕ್ಕಿಂತ ಹೆಚ್ಚಿನ ಜಮಾತ್ ಮಾಡುವ ಕುರಿತು ಸ್ಥಳೀಯವಾಗಿ ತೀರ್ಮಾನಗಳನ್ನು ಮಾಡುತ್ತಾರೆ ಎಂದು ಅವರು ಹೇಳಿದರು.

ಶಾಸನ ರಿಝ್ವಾನ್ ಅರ್ಶದ್ ಮಾತನಾಡಿ, ಕೊರೋನ ವಿರುದ್ಧದ ಹೋರಾಟಕ್ಕೆ ರಾಜ್ಯ ಸರಕಾರದ ಜೊತೆ ನಾವು ಕೈ ಜೋಡಿಸಿದ್ದೇವೆ. ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಜನ ಸಾಮಾನ್ಯರಿಗಾಗಿ ನಾವೆಲ್ಲ ಒಂದಾಗಿ ದುಡಿದಿದ್ದೇವೆ. ಇದೀಗ ಜೂ.8ರಿಂದ ಮಸೀದಿಗಳು ಸೇರಿದಂತೆ ಎಲ್ಲ ಪ್ರಾರ್ಥನಾ ಸ್ಥಳಗಳನ್ನು ತೆರೆಯುತ್ತಿರುವುದರಿಂದ ಏನೆಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಚರ್ಚಿಸಲು ಇಂದಿನ ಸಭೆ ಕರೆಯಲಾಗಿತ್ತು ಎಂದರು.

ರಾಜ್ಯ ಸರಕಾರದ ಅಧಿಕಾರಿಗಳು, ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅದರಂತೆ, ಧಾರ್ಮಿಕ ಕೇಂದ್ರಗಳು ಹಾಗೂ ವ್ಯಾಪಾರ ವಹಿವಾಟು ನಡೆಸುವ ಸ್ಥಳಗಳಲ್ಲಿ ಕೊರೋನ ವೈರಾಣು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಯಾವ ರೀತಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಕುರಿತು ಮಾಹಿತಿ ಒದಗಿಸಲಾಗಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್, ಮೌಲಾನ ಏಜಾಝ್ ಅಹ್ಮದ್ ನದ್ವಿ, ಮೌಲಾನ ಸೈಯ್ಯದ್ ಶಬ್ಬೀರ್ ಅಹ್ಮದ್ ನದ್ವಿ, ಮೌಲಾನ ಝೈನುಲ್ ಆಬಿದೀನ್, ಕೆಪಿಸಿಸಿ ಪ್ರಧಾನ ಕಾರ್ಯ ಮುಹಮ್ಮದ್ ಉಬೇದುಲ್ಲಾ ಶರೀಫ್, ಬೆಂಗಳೂರು ನಗರ ಉತ್ತರ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಸೈಯ್ಯದ್ ಶುಜಾವುದ್ದೀನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ದೇಶಕ್ಕೆ ನಮ್ಮ ರಾಜ್ಯ ಮಾದರಿ

ಕೊರೋನ ಸೋಂಕಿತರ ಸಂಖ್ಯೆಯನ್ನು ಗಮನಿಸಿದಾಗ ಇಡೀ ದೇಶಕ್ಕೆ ನಮ್ಮ ರಾಜ್ಯ ಮಾದರಿಯಾಗಿದೆ. ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ, ಆಡಳಿತ ಯಂತ್ರ, ಸ್ವಯಂ ಸೇವಕರು, ಸಾರ್ವಜನಿಕರು ನೀಡಿರುವ ಸಹಕಾರ ಅವಿಸ್ಮರಣೀಯ. ಇವತ್ತು ಮುಂಬೈ, ದಿಲ್ಲಿ, ಚೆನ್ನೈ ಸೇರಿದಂತೆ ಇನ್ನಿತರ ನಗರಗಳಲ್ಲಿ ಹತ್ತಾರು ಸಾವಿರ ಪ್ರಕರಣಗಳನ್ನು ನಾವು ಕಾಣುತ್ತಿದ್ದೇವೆ. ಆದರೆ, ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಕೇವಲ 500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪರೀಕ್ಷೆ, ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ಮಾಡುತ್ತಿರುವುದರಿಂದ ಈ ವೈರಾಣು ವಿರುದ್ಧ ನಾವು ಯಶಸ್ವಿಯಾಗಿ ಹೋರಾಡಲು ಸಾಧ್ಯವಾಗಿದೆ.

-ಎ.ಬಿ.ಇಬ್ರಾಹಿಮ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News