ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಕೇಂದ್ರಗಳಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದ ರಾಜ್ಯ ಸರಕಾರ

Update: 2020-06-06 16:23 GMT

ಬೆಂಗಳೂರು, ಜೂ.6: ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಮ್, ಕ್ರೈಸ್ತ, ಜೈನ, ಬೌದ್ಧ, ಸಿಖ್ಖರು ಹಾಗೂ ಪಾರ್ಸಿಗಳ ಧಾರ್ಮಿಕ ಕೇಂದ್ರಗಳಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಶನಿವಾರ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಸಾಮಾನ್ಯ ಮಾರ್ಗಸೂಚಿಗಳು: ಕಂಟೈನ್ಮೆಂಟ್ ಝೋನ್‍ಗಳಲ್ಲಿರುವ ಧಾರ್ಮಿಕ ಹಾಗೂ ಆರಾಧನಾ ಸ್ಥಳಗಳು ಡಿನೋಟಿಫೈ ಆಗುವವರೆಗೂ ಮುಚ್ಚಲ್ಪಟ್ಟಿರುತ್ತವೆ. ಕಂಟೈನ್ಮೆಂಟ್ ಝೋನ್‍ಗಳ ಹೊರಗೆ ಇರುವ ಧಾರ್ಮಿಕ ಹಾಗೂ ಆರಾಧನಾ ಸ್ಥಳಗಳನ್ನು ಮಾತ್ರ ತೆರೆಯಲು ಅವಕಾಶ ಕಲ್ಪಿಸಲಾಗಿದೆ.

60 ವರ್ಷ ಮೇಲ್ಪಟ್ಟವರು, ಅಸ್ವಸ್ಥತೆ ಹೊಂದಿರುವವರು, ಗರ್ಭಿಣಿ ಮಹಿಳೆಯರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೆ ಇರುವಂತೆ ಸಲಹೆ ನೀಡಲಾಗಿದೆ. ಹೆಚ್ಚಿನ ಜನ ಸೇರುವಂತಹ ಸಭೆ ಸಮಾರಂಭಗಳನ್ನು ನಿಷೇಧಿಸಿ, ಪರಸ್ಪರ ಕನಿಷ್ಠ ಎರಡು ಮೀಟರ್(6 ಅಡಿ) ಅಂತರವನ್ನು ಎಲ್ಲ ಸಂದರ್ಭಗಳಲ್ಲಿಯೂ ಕಾಯ್ದುಕೊಳ್ಳಿ. ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

ಕೆಮ್ಮುವಾಗ ಹಾಗೂ ಸೀನುವಾಗ ಬಾಯಿ ಹಾಗೂ ಮೂಗನ್ನು ಟಿಶ್ಯೂ ಅಥವಾ ಅಂಗವಸ್ತ್ರದಿಂದ ಮುಚ್ಚಿಕೊಳ್ಳಬೇಕು. ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವವರನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಲು ತರಬೇತಿ ಹೊಂದಿದ ಸ್ವಯಂ ಸೇವಕರನ್ನು ನಿಯೋಜಿಸಬೇಕು. 37.5 ಡಿ.ಸೆ. ಅಥವಾ 99.5 ಡಿ.ಸೆ. ತಾಪಮಾನ ಹೊಂದಿರುವ ಅಥವಾ ಕೆಮ್ಮ, ನೆಗಡಿ, ಗಂಟಲು ನೋವು ಹಾಗೂ ಅನಾರೋಗ್ಯಕ್ಕೀಡಾಗಿರುವವರನ್ನು ಧಾರ್ಮಿಕ ಕೇಂದ್ರದ ಆವರಣದೊಳಗೆ ಪ್ರವೇಶಿಸಲು ಅವಕಾಶ ನೀಡಬಾರದು. ಅಂತಹವರಿಗೆ ವೈದ್ಯಕೀಯ ನೆರವು ಪಡೆಯಲು ಸಲಹೆ ನೀಡಿ, ಆಪ್ತಮಿತ್ರ ಸಹಾಯವಾಣಿ 14410ಗೆ ಕರೆ ಮಾಡಬೇಕು.

ಕೋವಿಡ್-19ನಿಂದ ರಕ್ಷಿಸಿಕೊಳ್ಳಲು ಕೈಗೊಳ್ಳಬೇಕಿರುವ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಪೋಸ್ಟರ್ ಗಳನ್ನು ಪ್ರದರ್ಶಿಸಬೇಕು. ಆಡಿಯೊ, ವಿಡಿಯೊ ಕ್ಲಿಪ್‍ಗಳ ಮೂಲಕವು ಜಾಗೃತಿ ಮೂಡಿಸಬೇಕು. ಶ್ರದ್ಧಾಳುಗಳಿಗಾಗಿ ದ್ರವರೂಪದಲ್ಲಿರುವ ಸಾಬೂನು ಹಾಗೂ ನೀರು, ಸ್ಯಾನಿಟೈಸರ್ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಧಾರ್ಮಿಕ ಕೇಂದ್ರಗಳಲ್ಲಿ ಆಗಮಿಸಲು ಹಾಗೂ ನಿರ್ಗಮಿಸಲು ಪ್ರತ್ಯೇಕ ದ್ವಾರಗಳನ್ನು ನಿಗದಿಗೊಳಿಸಬೇಕು.

ಧಾರ್ಮಿಕ ಕೇಂದ್ರಗಳ ಬಳಿ ವಾಹನಗಳ ನಿಲುಗಡೆ ಸ್ಥಳ ಹಾಗೂ ಹೊರಗಡೆಯು ಸುರಕ್ಷಿತ ಅಂತರ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ಬಗೆಯ ಅಂಗಡಿ, ಮುಂಗಟ್ಟುಗಳು, ಕೆಫೆಟೆರಿಯಾ ಸೇರಿದಂತೆ ಇನ್ನಿತರೆಡೆಯು ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಇರುವಂತೆ ನೋಡಿಕೊಳ್ಳಬೇಕು.

ವಿಗ್ರಹಗಳು, ಪವಿತ್ರ ಪುಸ್ತಕಗಳನ್ನು ಮುಟ್ಟುವುದನ್ನು ನಿರ್ಬಂಧಿಸಲಾಗಿದೆ. ವೈರಾಣು ಹರಡುವುದನ್ನು ತಡೆಗಟ್ಟಲು ಧಾರ್ಮಿಕ ಕೇಂದ್ರಗಳಲ್ಲಿ ಮುದ್ರಿತ ಭಕ್ತಿ ಗೀತೆಗಳನ್ನು ಪ್ರಸಾರ ಮಾಡುವುದು. ಯಾವುದೇ ಬಗೆಯಲ್ಲಿ ಗುಂಪು ಸೇರಿ ಭಕ್ತಿ ಗೀತೆಗಳನ್ನು ಹಾಡುವಂತಿಲ್ಲ.

ಪರಸ್ಪರ ಶುಭಾಶಯ ಕೋರುವಾಗ ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಶ್ರದ್ಧಾಳುಗಳು ಪ್ರತ್ಯೇಕವಾದ ಪ್ರಾರ್ಥನಾ ಚಾಪೆಯನ್ನು ತಂದು, ಪ್ರಾರ್ಥನೆ ಮುಗಿದ ಬಳಿಕ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು.

ಪ್ರಸಾದ, ತೀರ್ಥವನ್ನು ಧಾರ್ಮಿಕ ಕೇಂದ್ರದ ಆವರಣದೊಳಗೆ ಹಂಚುವುದನ್ನು ನಿರ್ಬಂಧಿಸಲಾಗಿದೆ. ಸಮುದಾಯಕ ಅಡುಗೆ ಕೋಣೆಗಳು, ಲಂಗರ್ ಗಳು ಹಾಗೂ ಅನ್ನದಾನದ ಸಂದರ್ಭದಲ್ಲಿ ಅಡುಗೆ ಸಿದ್ಧಪಡಿಸುವಾಗ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಬೇಕು. ತಾಜಾ ಆಹಾರವನ್ನು ವಿತರಿಸಬೇಕು.

ಕೈ, ಕಾಲು ತೊಳೆಯುವ ಜಾಗ ಹಾಗೂ ಶೌಚಾಲಯಗಳ ಬಳಿ ಸ್ಯಾನಿಟೈಸ್ ವ್ಯವಸ್ಥೆ ಮಾಡಬೇಕು. ಕಾಲಕಾಲಕ್ಕೆ ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಬೇಕು. ವೀಕ್ಷಕರು, ಶ್ರದ್ಧಾಳುಗಳು, ಸಿಬ್ಬಂದಿಗಳು ಬಳಸಿ ತೆರವು ಮಾಡುವಂತಹ ಫೇಸ್ ಕವರ್, ಮಾಸ್ಕ್ ಹಾಗೂ ಗ್ಲೌಸ್‍ಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು.

ಧಾರ್ಮಿಕ ಕೇಂದ್ರಗಳ ಆವರಣದಲ್ಲಿ ಉಗುಳುವುದನ್ನು ನಿಷೇಧಿಸಬೇಕು. ಆರೋಗ್ಯ ಸೇತು ಆಪ್ ಅನ್ನು ಪ್ರತಿಯೊಬ್ಬರೂ ತಮ್ಮ ಮೊಬೈಲ್‍ಗಳಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಬೇಕು. ಎಲ್ಲ ಧಾರ್ಮಿಕ ಸಂಸ್ಥೆಗಳಿಗೆ ಮಾರ್ಗಸೂಚಿಗಳು ಇರುವಂತಹ ಚೆಕ್‍ಲೀಸ್ಟ್ ಅನ್ನು ನೀಡಲಾಗಿದ್ದು, ಅದನ್ನು ಭರ್ತಿ ಮಾಡಿ ಸಂಬಂಧಿಸಿದ ಜಿಲ್ಲಾ ಪ್ರಾಧಿಕಾರಗಳಿಗೆ ತಲುಪಿಸಬೇಕು.

ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಹಿಂದಿರುಗುವವರು ಮನೆಯೊಳಗೆ ಪ್ರವೇಶಿಸುವ ಮುನ್ನ ಕೈ, ಕಾಲುಗಳನ್ನು ತೊಳೆದುಕೊಳ್ಳಬೇಕು ಹಾಗೂ ಮನೆಯಲ್ಲಿರುವ ಹಿರಿಯ ನಾಗರಿಕರನ್ನು ಸಮೀಪದಿಂದ ಸಂಪರ್ಕ ಏರ್ಪಡಿಸಬಾರದು. ಧಾರ್ಮಿಕ ಕೇಂದ್ರಗಳ ಒಳಗೆ ಹಾಗೂ ಆವರಣದೊಳಗೆ ಮೊಬೈಲ್ ಫೋನ್‍ಗಳ ಬಳಕೆ ಹಾಗೂ ವಿಡಿಯೊ ರೆಕಾರ್ಡ್ ಮಾಡುವುದನ್ನು ನಿರ್ಬಂಧಿಸಬೇಕು.

ಧಾರ್ಮಿಕ ಕೇಂದ್ರದ ಆವರಣದೊಳಗೆ ಶಂಕಿತ ಅಥವಾ ದೃಢ ಪ್ರಕರಣ ಕಂಡು ಬಂದಲ್ಲಿ, ಕೂಡಲೇ ಅಂತಹ ವ್ಯಕ್ತಿಯನ್ನು ಒಂದು ಕೊಣೆಯೊಳಗೆ ಐಸೋಲೇಟ್ ಮಾಡಬೇಕು. ವೈದ್ಯರು ಬಂದು ತಪಾಸಣೆ ಮಾಡುವವರೆಗೆ ಅಂತಹವರಿಗೆ ಮಾಸ್ಕ್ ಅನ್ನು ನೀಡಬೇಕು. ಕೂಡಲೆ ಸಮೀಪದ ಆಸ್ಪತ್ರೆ ಅಥವಾ ಫೀವರ್ ಕ್ಲಿನಿಕ್ ಅಥವಾ ಆಪ್ತಮಿತ್ರ ಸಹಾಯವಾಣಿ 14410ಗೆ ಕರೆ ಮಾಡಿ ಮಾಹಿತಿ ನೀಡಬೇಕು.

ಮಸೀದಿಗಳು, ಇಮಾಮ್‍ಗಳು, ಮುಅಝ್ಝಿನ್‍ಗಳು, ದರ್ಗಾಗಳು, ಚರ್ಚ್‍ಗಳು ಹಾಗೂ ಕ್ರೈಸ್ತ ಧಾರ್ಮಿಕ ಸಂಸ್ಥೆಗಳು, ಗುರುದ್ವಾರಗಳು ಹಾಗೂ ಸಿಖ್ಖರ ಧಾರ್ಮಿಕ ಸಂಸ್ಥೆಗಳು, ಜೈನ ಬಸದಿಗಳು ಹಾಗೂ ಜೈನರ ಧಾರ್ಮಿಕ ಸಂಸ್ಥೆಗಳು, ಬುದ್ಧ ವಿಹಾರಗಳು ಹಾಗೂ ಬೌದ್ಧರ ಧಾರ್ಮಿಕ ಸಂಸ್ಥೆಗಳು, ಪಾರ್ಸಿ ಝೋರಾಸ್ಟ್ರಿಯನ್ ಅಗ್ಯಾರಿ ಹಾಗೂ ಇತರ ಪಾರ್ಸಿ ಧಾರ್ಮಿಕ ಸಂಸ್ಥೆಗಳು, ಹಾಗೂ ಅವುಗಳ ಆಡಳಿತ ಸಮಿತಿಗಳು, ಶ್ರದ್ಧಾಳುಗಳು ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಪ್ರತ್ಯೇಕವಾಗಿ ಪ್ರಕಟಣೆ ಹೊರಡಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಕಾರ್ಯದರ್ಶಿ ಎ.ಬಿ.ಇಬ್ರಾಹಿಮ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News