ಕುತ್ತಿಗೆಯನ್ನು ಅಮುಕುವ ಪಟ್ಟುಗಳಿಗೆ ನಿಷೇಧ ವಿಧಿಸಿದ ಮಿನಪೊಲಿಸ್, ಕ್ಯಾಲಿಫೋರ್ನಿಯ

Update: 2020-06-06 17:02 GMT

ಮಿನಪೊಲಿಸ್ (ಅಮೆರಿಕ), ಜೂ. 6: ಮೇ 25ರಂದು ಅಮೆರಿಕದ ಮಿನಸೋಟ ರಾಜ್ಯದ ಮಿನಪೊಲಿಸ್ ನಗರದಲ್ಲಿ ಬಿಳಿಯ ಪೊಲೀಸ್ ಅಧಿಕಾರಿಯೊಬ್ಬ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲೆ ಮೊಣಕಾಲೂರಿದಂತೆ, ಆರೋಪಿಗಳ ಕುತ್ತಿಗೆಯ ಚಲನವಲನಗಳನ್ನು ನಿರ್ಬಂಧಿಸುವ ಪಟ್ಟುಗಳನ್ನು ಪೊಲೀಸರು ಬಳಸುವುದನ್ನು ನಿಷೇಧಿಸುವ ಪ್ರಸ್ತಾವದ ಪರವಾಗಿ ಮಿನಪೊಲಿಸ್ ನಗರ ಸಭೆ ಶುಕ್ರವಾರ ಮತಹಾಕಿದೆ.

ಬಳಿಕ ಜಾರ್ಜ್ ಫ್ಲಾಯ್ಡ್ ಉಸಿರುಗಟ್ಟಿ ಸಾವನ್ನಪ್ಪಿದ್ದು, ದೇಶಾದ್ಯಂತ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.

ಅದೇ ವೇಳೆ, ಅಮಾನತುಗೊಂಡಿರುವ ಮಿನಪೊಲಿಸ್ ಪೊಲೀಸ್ ಅಧಿಕಾರಿ ಡೆರೆಕ್ ಶಾವಿನ್ ಬಳಸಿದ ಪಟ್ಟಿನಂಥ ತಂತ್ರಗಳಲ್ಲಿ ಪೊಲೀಸರಿಗೆ ತರಬೇತಿ ನೀಡುವುದನ್ನು ಕೊನೆಗೊಳಿಸುವುದಾಗಿ ಕ್ಯಾಲಿಫೋರ್ನಿಯ ಗವರ್ನರ್ ಗ್ಯಾವಿನ್ ನ್ಯೂಸಮ್ ಹೇಳಿದ್ದಾರೆ.

ಮಿನಪೊಲಿಸ್ ನಗರದ ವಿರುದ್ಧ ಮಿನಸೋಟ ರಾಜ್ಯ ಮಾನವಹಕ್ಕುಗಳ ಆಯೋಗ ದಾಖಲಿಸಿಕೊಂಡ ದೂರಿನ ಹಿನ್ನೆಲೆಯಲ್ಲಿ, ಮಿನಪೊಲಿಸ್ ನಗರ ಈ ಕ್ರಮ ತೆಗೆದುಕೊಂಡಿದೆ. ಉಸಿರುಗಟ್ಟಿಸುವ ಹಾಗೂ ಕುತ್ತಿಗೆಯನ್ನು ಬಿಗಿಯುವ ಎಲ್ಲ ಪಟ್ಟುಗಳ ಬಳಕೆಯನ್ನು ನಿಷೇಧಿಸುವುದಾಗಿ ಮಿನಪೊಲಿಸ್ ಸಿಟಿ ಕೌನ್ಸಿಲ್ ತಿಳಿಸಿದೆ. ಇದಕ್ಕೆ ಸಂಬಂಧಿಸಿದ ನ್ಯಾಯಾಲಯದ ಆದೇಶಕ್ಕೆ ನ್ಯಾಯಾಧೀಶರು ಸಹಿ ಹಾಕಬೇಕಾಗಿದೆ. ಯಾವುದೇ ಪೊಲೀಸ್ ಅಧಿಕಾರಿ ಅನಧಿಕೃತ ಬಲಪ್ರಯೋಗವನ್ನು ಮಾಡಿದರೆ ಪೊಲೀಸ್ ಇಲಾಖೆಯ ಯಾವುದೇ ಸದಸ್ಯರು ತಕ್ಷಣ ಅದನ್ನು ವರದಿ ಮಾಡಬೇಕಾಗಿದೆ.

ಕಪ್ಪು ವರ್ಣೀಯರು, ಮೂಲನಿವಾಸಿಗಳು ಮತ್ತು ಬಿಳಿಯೇತರರು ವ್ಯವಸ್ಥಿತ ಹಾಗೂ ಸಾಂಸ್ಥಿಕ ಜನಾಂಗೀಯ ತಾರತಮ್ಯ ಧೋರಣೆ ಹಾಗೂ ಪೊಲೀಸ್ ಕಾರ್ಯವಿಧಾನದಲ್ಲಿನ ದೀರ್ಘಾವಧಿ ಸಮಸ್ಯೆಗಳಿಂದಾಗಿ ತಲೆತಲಾಂತರದಿಂದ ನೋವು ಅನುಭವಿಸಿಕೊಂಡು ಬರುತ್ತಿದ್ದಾರೆ ಎಂದು ಪ್ರಸ್ತಾಪಿತ ಆದೇಶ ತಿಳಿಸಿದೆ. ಈ ಆದೇಶವನ್ನು ನಗರ ಸಭೆಯು ಸರ್ವಾನುಮತದಿಂದ ಅಂಗೀಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News