ಪಾಕ್ ಪ್ರಧಾನಿಯ ಸಾರ್ವಜನಿಕ ತಪ್ಪೊಪ್ಪಿಗೆಯ ಪುನರುಚ್ಚಾರ: ಭಾರತದ ಹೇಳಿಕೆ

Update: 2020-06-06 17:42 GMT

ಹೊಸದಿಲ್ಲಿ, ಜೂ.6: ಪಾಕಿಸ್ತಾನದಲ್ಲಿ ನೆಲೆಯಾಗಿರುವ ಉಗ್ರರ ಗುಂಪು ಸಾವಿರಾರು ಭಯೋತ್ಪಾದಕರನ್ನು ಅಪಘಾನಿಸ್ತಾನಕ್ಕೆ ಕಳುಹಿಸುತ್ತಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿ ಇತ್ತೀಚೆಗೆ ವರದಿ ಮಾಡಿರುವುದು, ಈ ಹಿಂದೆ ಪಾಕ್ ಪ್ರಧಾನಿ ಇಮ್ರಾನ್ ಖಾನ್‌ರ ಸಾರ್ವಜನಿಕ ತಪ್ಪೊಪ್ಪಿಗೆಯ ಪುನರುಚ್ಚಾರವಾಗಿದೆ ಎಂದು ಭಾರತ ಹೇಳಿದೆ.

ಅಪಘಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ವಿದೇಶಿ ಭಯೋತ್ಪಾದಕರಲ್ಲಿ ಸುಮಾರು 6,500 ಪಾಕಿಸ್ತಾನಿ ಪ್ರಜೆಗಳಿದ್ದಾರೆ. ಪಾಕ್ ಮೂಲದ ಜೈಷೆ ಮುಹಮ್ಮದ್ ಮತ್ತು ಲಷ್ಕರೆ ತಯ್ಯಬ ಉಗ್ರ ಸಂಘಟನೆಗಳು ಅಪಘಾನಿಸ್ತಾನಕ್ಕೆ ಹೋರಾಟಗಾರರನ್ನು ರವಾನಿಸುತ್ತಿವೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.

ಪಾಕಿಸ್ತಾನದಲ್ಲಿ ಇನ್ನೂ 30ರಿಂದ 40 ಸಾವಿರದಷ್ಟು ಉಗ್ರರು ಸಕ್ರಿಯರಾಗಿದ್ದಾರೆ ಎಂದು ಕಳೆದ ವರ್ಷ ಅವರ ಪ್ರಧಾನಿಯೇ ಒಪ್ಪಿಕೊಂಡಿರುವುದನ್ನು ಪಾಕಿಸ್ತಾನದ ವಿದೇಶ ವ್ಯವಹಾರ ಇಲಾಖೆ ನೆನಪಿಸಿಕೊಳ್ಳುವುದು ಒಳ್ಳೆಯದು. ಪಾಕಿಸ್ತಾನ ಭಯೋತ್ಪಾದನೆಯ ನಿಯಂತ್ರಣ ಕೇಂದ್ರವಾಗಿದೆ ಎಂಬ ವಾಸ್ತವತೆಯನ್ನು ಅಂತರಾಷ್ಟ್ರೀಯ ಸಮುದಾಯ ಚೆನ್ನಾಗಿ ಅರಿತುಕೊಂಡಿದೆ ಎಂದು ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

ಅಲ್ಲದೆ ಇತರ ದೇಶಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಉಗ್ರರು ಈ ಹಿಂದೆಯೂ ತಮ್ಮ ನೆಲವನ್ನು ಬಳಸಿಕೊಂಡಿದ್ದರು ಎಂದು ಪಾಕಿಸ್ತಾನದ ನಾಯಕರು ಒಪ್ಪಿಕೊಂಡಿರುವುದಕ್ಕೆ ದಾಖಲೆಯಿದೆ ಎಂದ ಅವರು, ಭಾರತ ಮತ್ತು ಅಪಘಾನಿಸ್ತಾನದ ಜನರ ನಡುವಿನ ಸ್ನೇಹಮಯ ಮತ್ತು ಸಾಂಪ್ರದಾಯಿಕ ಸಂಬಂಧವನ್ನು ವಿಭಜಿಸಲು ಪಾಕಿಸ್ತಾನ ನಡೆಸುತ್ತಿರುವ ಪ್ರಯತ್ನ ಯಶಸ್ವಿಯಾಗದು ಎಂದರು.

  ತರಬೇತಿ ಪಡೆದು ಜಮ್ಮು ಮತ್ತು ಕಾಶ್ಮೀರ ಹಾಗೂ ಅಪಘಾನಿಸ್ತಾನದಲ್ಲಿ ಹೋರಾಡಿರುವ ಸುಮಾರು 30ರಿಂದ 40 ಸಾವಿರ ಸಶಸ್ತ್ರ ಜನರು ಪಾಕಿಸ್ತಾನದಲ್ಲಿ ಇದ್ದಾರೆ ಎಂದು ಕಳೆದ ಜುಲೈಯಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರು.

   ವಿಶ್ವಸಂಸ್ಥೆ ಹೆಸರಿಸಿರುವ ಭಯೋತ್ಪಾದಕರ ಪಟ್ಟಿಯಲ್ಲಿರುವ ಹಲವರಿಗೆ ಹಾಗೂ ಹಲವು ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನ ಆಶ್ರಯ ನೀಡಿದೆ. ಈ ವಿಷಯದಿಂದ ಬೇರೆಡೆ ಗಮನ ಸೆಳೆಯಲು ಆ ರಾಷ್ಟ್ರ ಹತಾಶ ಪ್ರಯತ್ನ ಮಾಡುತ್ತಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News