‘ಕೆಪಿಎಸ್ಸಿ’ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ: ಮುಖ್ಯ ಪರೀಕ್ಷೆಯ ಅಂಕಗಳು 1250ಕ್ಕೆ ಇಳಿಸಿದ ಸರಕಾರ

Update: 2020-06-06 17:47 GMT

ಬೆಂಗಳೂರು, ಜೂ.6: ರಾಜ್ಯ ಲೋಕಸೇವಾ ಆಯೋಗ(ಕೆಪಿಎಸ್ಸಿ)ವು ನಡೆಸುವ ಗೆಜೆಟೆಡ್ ಪ್ರೊಬೇಷನರಿ ಹುದ್ದೆ(ಗ್ರೂಪ್ ಎ ಮತ್ತು ಬಿ)ಗಳಿಗೆ ನಡೆಸುವ ಮುಖ್ಯ ಪರೀಕ್ಷೆಯ ಅಂಕಗಳನ್ನು 1750 ರಿಂದ 1250ಕ್ಕೆ ಇಳಿಸಿ ರಾಜ್ಯ ಸರಕಾರವು ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಗೆಜೆಟ್ ಪ್ರೊಬೇಷನರಿ ಹುದ್ದೆಗಳಿಗೆ ಈವರೆಗೆ ಎರಡು ಐಚ್ಛಿಕ ವಿಷಯಗಳು(ಪತ್ರಿಕೆ 6 ಮತ್ತು ಪತ್ರಿಕೆ 7) ಸೇರಿ ಒಟ್ಟು ಏಳು ವಿಷಯಗಳಲ್ಲಿ ಮುಖ್ಯ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ಇದೀಗ ಎರಡು ಐಚ್ಛಿಕ ವಿಷಯಗಳನ್ನು(ತಲಾ 250 ಅಂಕಗಳನ್ನು ಒಳಗೊಂಡ ಎರಡು ಪತ್ರಿಕೆ) ಕೈಬಿಡಲು ನಿರ್ಧರಿಸಿರುವುದರಿಂದ, ಮುಖ್ಯ ಪರೀಕ್ಷೆಯ ಅಂಕಗಳು 1750 ರಿಂದ 1250ಕ್ಕೆ ಇಳಿಕೆಯಾಗಿದೆ.

ವ್ಯಕ್ತಿತ್ವ ಪರೀಕ್ಷೆ(ಸಂದರ್ಶನ)ಯನ್ನು 200 ಅಂಕಗಳಿಗೆ ನಡೆಸಲಾಗುತ್ತಿತ್ತು. ಇದೀಗ ಹೊಸ ನಿಯಮಾವಳಿಗಳ ಪ್ರಕಾರ ವ್ಯಕಿತ್ವ ಪರೀಕ್ಷೆಯ ಅಂಕಗಳನ್ನು 50ಕ್ಕೆ ಇಳಿಸಲಾಗಿದೆ. ಅಲ್ಲದೆ, ವ್ಯಕ್ತಿತ್ವ ಪರೀಕ್ಷೆಯಲ್ಲಿ ಅಭ್ಯರ್ಥಿಯು ಶೇ.80ಕ್ಕಿಂತ ಅಧಿಕ ಅಥವಾ ಶೇ.40ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿದರೆ, ಸಂದರ್ಶನ ಮಂಡಳಿಯ ಸದಸ್ಯರು ಇದಕ್ಕೆ ಕಾರಣವನ್ನು ದಾಖಲಿಸಬೇಕು ಎಂದು ನಿಯಮ ಜಾರಿಗೆ ತರಲಾಗಿದೆ.

ಕರ್ನಾಟಕ ಗೆಜೆಟ್ ಪ್ರೊಬೇಷನರಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ತಿದ್ದುಪಡಿ ನಿಯಮಗಳು-2020 ಅನ್ನು ಮಾಡಿ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News