ಕೊರೋನ ಪರೀಕ್ಷೆಯ ನಿಯಮ ಉಲ್ಲಂಘನೆ: ಗಂಗಾರಾಮ್ ಆಸ್ಪತ್ರೆಯ ವಿರುದ್ಧ ದೂರು ದಾಖಲು

Update: 2020-06-06 17:47 GMT

ಹೊಸದಿಲ್ಲಿ, ಜೂ.6: ಕೊರೋನ ಸೋಂಕು ಪರೀಕ್ಷೆಯ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕೆ ದಿಲ್ಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ವಿರುದ್ಧ ಶನಿವಾರ ಪೊಲೀಸ್ ದೂರು ದಾಖಲಿಸಿರುವುದಾಗಿ ದಿಲ್ಲಿ ಸರಕಾರ ಹೇಳಿದೆ.

ದಿಲ್ಲಿ ಸರಕಾರದ ಆರೋಗ್ಯ ಇಲಾಖೆಯ ಸಹಾಯಕ ಕಾರ್ಯದರ್ಶಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಆಸ್ಪತ್ರೆಯ ಅಪರಿಚಿತ ಶಂಕಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕೊರೋನ ವೈರಸ್ ಪರೀಕ್ಷೆಯನ್ನು ಸರಕಾರದ ಸಾಫ್ಟ್‌ವೇರ್‌ನಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದರೂ ಗಂಗಾರಾಮ್ ಆಸ್ಪತ್ರೆಯ ಅಧಿಕಾರಿಗಳು ಹೀಗೆ ಮಾಡಿಲ್ಲ. ಕೇಂದ್ರ ಸರಕಾರ ರೂಪಿಸಿರುವ ಆರ್‌ಟಿ-ಪಿಸಿಆರ್ ಆ್ಯಪ್ ಜೂನ್ 3ರಂದು ಗಂಗಾರಾಮ್ ಆಸ್ಪತ್ರೆಯಲ್ಲಿ ಬಳಸಲಾಗಿಲ್ಲ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಕೊರೋನ ವೈರಸ್ ರೋಗಿಗಳ ಮಾಹಿತಿಯು ಸರಕಾರದ ಅಂಕಿಅಂಶದಲ್ಲಿ ನೈಜ ಸಮಯದಲ್ಲಿ ಪ್ರತಿಬಿಂಬಿಸಲು ಕೋವಿಡ್-19 ಪರೀಕ್ಷೆಗಳನ್ನು ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. ಕೊರೋನ ಸೋಂಕಿತ ರೋಗಿಗಳನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಗಳು ನಿರಾಕರಿಸುತ್ತಿವೆ ಎಂಬ ಬಗ್ಗೆ ಹಲವು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದಿಲ್ಲಿ ಸರಕಾರ ರಾಜಧಾನಿಯಲ್ಲಿರುವ ಆಸ್ಪತ್ರೆಗಳ ತನಿಖೆ ನಡೆಸಲು ನಿರ್ಧರಿಸಿದೆ.

ಕೊರೋನ ಸೋಂಕಿತ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆಯಿಲ್ಲ ಮತ್ತು ರೋಗ ಲಕ್ಷಣ ಹೊಂದಿರುವ ಯಾರನ್ನೂ ವಾಪಸು ಕಳಿಸಬಾರದು ಎಂದು ಶನಿವಾರ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಹೇಳಿದ್ದಾರೆ.

ಕೆಲವು ಆಸ್ಪತ್ರೆಗಳು ಕೊರೋನ ಸೋಂಕಿತ ರೋಗಿಗಳಿಗೆ ಪ್ರವೇಶ ನಿರಾಕರಿಸುತ್ತಿವೆ. ಇತರ ಪಕ್ಷಗಳಲ್ಲಿರುವ ತಮ್ಮ ರಕ್ಷಕರ ಪ್ರಭಾವ ಬಳಸಿಕೊಂಡು ಬೆಡ್‌ಗಳ ಕಾಳದಂಧೆ ನಡೆಸಬಹುದು ಎಂದು ಕೆಲವರು ಭಾವಿಸಿರಬಹುದು. ಆದರೆ ಇವರನ್ನು ಸುಮ್ಮನೆ ಬಿಡುವುದಿಲ್ಲ. ಕೆಲ ದಿನಗಳಲ್ಲೇ ಈ ಸಮಸ್ಯೆಯನ್ನು ಪರಿಹರಿಸುತ್ತೇವೆ. ತನಿಖೆ ನಡೆಸಿ, ಬೆಡ್ ಇದ್ದರೂ ರೋಗಿಗಳಿಗೆ ಪ್ರವೇಶ ನಿರಾಕರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಜ್ರೀವಾಲ್ ಹೇಳಿದ್ದಾರೆ.

ದಿಲ್ಲಿಯಲ್ಲಿ ಶುಕ್ರವಾರ 1,330 ಹೊಸ ಕೊರೋನ ಸೋಂಕು ಪ್ರಕರಣ ದೃಢಪಟ್ಟಿದ್ದು ರಾಜ್ಯದಲ್ಲಿ ಸೋಂಕಿತರ ಪ್ರಮಾಣ 26000ದ ಗಡಿ ದಾಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News