ರಕ್ತಪಾತವಾದರೂ ಕೆಆರ್ ಎಸ್ ನಲ್ಲಿ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಿಸಲು ಬಿಡಲ್ಲ: ಮಾಜಿ ಮೇಯರ್ ಪುರುಷೋತ್ತಮ್

Update: 2020-06-06 18:02 GMT

ಮೈಸೂರು,ಜೂ.6: ಕೃಷ್ಣರಾಜಸಾಗರ ಅಣೆಕಟ್ಟೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಾಣದ ಪಕ್ಕದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ಮಾಡಲು ರಕ್ತಪಾತವಾದರೂ ಸರಿ ಬಿಡುವುದಿಲ್ಲ ಎಂದು ಮಾಜಿ ಮೇಯರ್ ದಲಿತ ಮುಖಂಡ ಪುರುಷೋತ್ತಮ್ ಎಚ್ಚರಿಕೆ ನೀಡಿದರು.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಶನಿವಾರ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಕ್ಕೆ ಮತ್ತು ದೇಶಕ್ಕೆ ಸರ್ ಎಂ.ವಿಶ್ವೇಶ್ವರಯ್ಯನವರ ಕೊಡುಗೆ ಏನೇನು ಇಲ್ಲ. ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಆಸ್ಥಾನದಲ್ಲಿ ದಿವಾನರಾಗಿದ್ದರು, ಕನ್ನಂಬಾಡಿ ಕಟ್ಟುವ ವೇಳೆ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರಷ್ಟೆ. ಅವರು ಮಾಡುತ್ತಿದ್ದ ಕೆಲಸಕ್ಕೆ ಸಂಬಳ ಪಡೆದಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಜೊತೆ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆ ಮಾಡೋದು ಬೇಡ ಎಂದು ಹೇಳಿದರು.

ಒಡೆಯರ್ ಪ್ರತಿಮೆ ಜೊತೆ ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆ ಮಾಡೋದು ಕೆಟ್ಟ ಸಂಪ್ರಾದಾಯ. ಇದು ರಾಜ ಮನೆತನಕ್ಕೆ ಮಸಿ ಬಳಿಯುವ ಕಾರ್ಯ. ವಿಶ್ವೇಶ್ವರಯ್ಯ ಹೆಸರು ಇಷ್ಟೊಂದು ಪ್ರಸಿದ್ಧಿ ಆಗಿರುವ ಬಗ್ಗೆ ಗೊಂದಲವಿದೆ. ಮಿರ್ಜಾ ಇಸ್ಮಾಯಿಲ್ ಇವರಿಗಿಂತ ಹೆಚ್ಚು ದಿನ ದಿವಾನರಾಗಿದ್ದರು. ಆದರೂ ಇವರ ಹೆಸರು ಹೆಚ್ಚು ಚಾಲ್ತಿಯಲ್ಲಿರೋದು ಗೊಂದಲ ಮೂಡಿಸಿದೆ. ಯಾವುದೇ ಕಾರಣಕ್ಕೂ ಕೆಆರ್ ಎಸ್ ನಲ್ಲಿ ನಾಲ್ವಡಿಯವರ ಪ್ರತಿಮೆ ಬಿಟ್ಟು ಬೇರೆ ಪ್ರತಿಮೆ ಸ್ಥಾಪನೆ ಮಾಡಿದರೆ ಪ್ರತಿಮೆಯನ್ನು ಒಡೆದು ಹಾಕುತ್ತೇವೆ. ನಮ್ಮ ಪ್ರಾಣ ಹೋದರೂ ಪರವಾಗಿಲ್ಲ, ನಾವು ಮಾತ್ರ ನಾಲ್ವಡಿಯವರ ಪ್ರತಿಮೆ ಜೊತೆ ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆ ಮಾಡಲು ಬಿಡಲ್ಲ ಎಂದು ಎಚ್ಚರಿಸಿದರು.

ನಮ್ಮ ಮನೆಗೆ ನಮ್ಮ ಹೆಸರು ಹಾಕಿಕೊಳ್ಳುತ್ತೇವೆ. ಮೇಸ್ತ್ರಿ ಅಥವಾ ಗಾರೆ ಕೆಲಸದವರ ಹೆಸರು ಹಾಕುತ್ತೇವ ಎಂದು ಪ್ರಶ್ನಿಸಿದ ಅವರು ಯಾವುದೇ ಕಾರಣಕ್ಕೂ ಪ್ರತಿಮೆ ಸ್ಥಾಪನೆಗೆ ಅವಕಾಶ ನೀಡಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ. ತುಂಬಾ ಜನಕ್ಕೆ ಕೆಆರ್ ಎಸ್ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲದೆ ವಿಶ್ವೇಶ್ವರಯ್ಯರನ್ನೇ ಒಪ್ಪಿಕೊಂಡಿದ್ದರು. ಈಗ ಎಲ್ಲರಿಗೂ ಸತ್ಯ ತಿಳಿದಿದೆ, ವಿಶ್ವೇಶ್ವರಯ್ಯರನ್ನು ದೂರ ತಳ್ಳಿ ನಾಲ್ವಡಿಯವರನ್ನು ಒಪ್ಪಿಕೊಂಡಿದ್ದಾರೆ. ಪ್ರತಿಮೆ ಸ್ಥಾಪನೆ ವಿಚಾರವಾಗಿ ಒಕ್ಕಲಿಗರು, ಲಿಂಗಾಯಿತರು,ಮುಸ್ಲಿಮ್ ಸಂಘಗಳು ಹೋರಾಟ ಮಾಡಬೇಕು. ಶೋಷಿತರ ವರ್ಗಕ್ಕೆ ಶಿಕ್ಷಣ ಕೊಡುವುದನ್ನು ತಡೆದ ವ್ಯಕ್ತಿ ವಿಶ್ವೇಶ್ವರಯ್ಯ. ಅಂತವರ ಪ್ರತಿಮೆ ಮಾಡೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಪ್ರಮೋದಾದೇವಿ ಬಿಜೆಪಿ ತಾಳಕ್ಕೆ ಕುಣಿಯುತಿದ್ದಾರೆ
ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ರಿಗೆ ರಾಜಕೀಯ ಇಚ್ಛಾಶಕ್ತಿ. ಹಾಗಾಗಿ ಅವರು ಬಿಜೆಪಿಯವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಪುರುಷೋತ್ತಮ್ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಂಬಾಡಿ ಕಟ್ಟೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಾಣದ ಪಕ್ಕದಲ್ಲಿ ಸರ್ ಎಂ.ವಿ.ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ಮಾಡುವುದಕ್ಕೆ ಪ್ರಮೋದಾದೇವಿ ಅವರು ಸಮ್ಮತಿ ಸೂಚಿಸಿದ್ದಾರೆ. ಸರ್ಕಾರದ ನಿರ್ಧಾರಕ್ಕೆ ಬದ್ದ ಎಂದು ಹೇಳಿಕೆ ನೀಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮುಂದೆ ವಿಶ್ವೇಶ್ವರಯ್ಯ ಏನೇನೂ ಅಲ್ಲ, ಅಂತಹದರಲ್ಲಿ ವಿರೋಧ ಮಾಡಬೇಕಿದ್ದ ಪ್ರಮೋದಾದೇವಿ ಮೌನವಾಗಿದ್ದಾರೆ. ಕಾರಣ ಅವರು ರಾಜ್ಯಸಭೆಗೆ ಹೋಗುವ ಕನಸು ಕಾಣುತ್ತಿದ್ದಾರೆ ಎಂದು ಹರಿಹಾಯ್ದರು.

ಯದುವೀರ್ ಇನ್ನೂ ಬಾಲಕ, ಹಾಗಾಗಿ ತಾಯಿ ಹೇಳಿದ ಮಾತಿಗೆ ತಲೆ ಅಲ್ಲಾಡಿಸುತ್ತಾನೆ. ರಾಜವಂಶಸ್ಥರು ಮೊದಲು ತಮ್ಮ ಪೂರ್ವಜರ ಇತಿಹಾಸ ತಿಳಿಯಬೇಕು. ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯಬಾರದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘಟನೆಯ ಅಶ್ವತ್ಥನಾರಾಣ ರಾಜೇ ಅರಸ್, ಹೊಸಕೋಟೆ ಬಸವರಾಜು, ಬಿವಿಎಸ್ ಸಿದ್ದರಾಜು, ಯುಮುನ, ಅಸರು ಫೌಂಡೇಶನ್‍ನ ಪಿ.ಕಾಂತರಾಜ ಅರಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News