ಕೊರೋನ ಸಂಕಷ್ಟ: ರಾಜ್ಯಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ಕೆಲ ಮಾರ್ಪಾಡು- ಚುನಾವಣಾಧಿಕಾರಿ ವಿಶಾಲಾಕ್ಷಿ

Update: 2020-06-06 18:08 GMT

ಬೆಂಗಳೂರು, ಜೂ. 6: ಮಾರಕ ಕೊರೋನ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಜೂ.19ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆ ಪ್ರಕ್ರಿಯೆಯಲ್ಲಿ ಕೆಲ ಮಾರ್ಪಾಡು ಮಾಡಲಾಗಿದೆ. ಅಲ್ಲದೆ, ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಲು ಆರೋಗ್ಯ ಇಲಾಖೆಗೆ ಕೋರಲಾಗಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭಾ ಕಾರ್ಯದರ್ಶಿ ವಿಶಾಲಾಕ್ಷಿ ತಿಳಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಆರೋಗ್ಯ ಇಲಾಖೆಗೆ ಪತ್ರ ಬರೆಯಲಾಗಿದೆ. ಜೂ.2ಕ್ಕೆ ಚುನಾವಣಾ ಅಧಿಸೂಚನೆ ಹೊರಡಿಸಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ನಾಮಪತ್ರ ಸಲ್ಲಿಕೆಗೆ ಕೇವಲ ನಾಲ್ಕು ಮಂದಿಗೆ ಅವಕಾಶ ನೀಡಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಹೆಚ್ಚಿನ ಜನದಟ್ಟಣೆಗೆ ನಿರ್ಬಂಧ ಹೇರಲಾಗಿದೆ ಎಂದರು.

ಮಾಧ್ಯಮಗಳಿಗೂ ನಿರ್ಬಂಧ ಹೇರಲಾಗಿದ್ದು, ಪೋಟೋ, ವಿಡಿಯೋ ಮತ್ತು ಸುದ್ದಿಗಳನ್ನು ವಾರ್ತಾ ಇಲಾಖೆ ಮೂಲಕ ಒದಗಿಸಲು ನಿರ್ಧರಿಸಲಾಗಿದೆ. ಈವರೆಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ನಾಮಪತ್ರ ಸಲ್ಲಿಕೆಗೆ ಜೂ.9ಕ್ಕೆ ಕೊನೆಯ ದಿನವಾಗಿದೆ. ರಾಜ್ಯಸಭಾ ಚುನಾವಣೆಗೆ ಪ್ರಮುಖ ರಾಜಕೀಯ ಪಕ್ಷಗಳಿಗೆ ಕೊರೋನ ನಿರ್ಬಂಧ ಹೇರಿರುವ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.

ನಾಮಪತ್ರ ಸಲ್ಲಿಕೆಗೆ ಆಗಮಿಸುವ ಅಭ್ಯರ್ಥಿ ಹಾಗೂ ಇತರರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಸ್ಯಾನಿಟೈಸರ್ ಬಳಕೆ ಮಾಡಲು ಸೂಚಿಸಲಾಗಿದೆ ಎಂದ ಅವರು, ಮತದಾನದ ವೇಳೆ ಕಡ್ಡಾಯವಾಗಿ ಎಲ್ಲರೂ ಮತದಾನ ಚಲಾವಣೆಗೆ ಬರುವುದರಿಂದ ಯಾವ ರೀತಿಯ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂಬುದರ ಕುರಿತು ಮಾಹಿತಿ ನೀಡುವಂತೆ ಆರೋಗ್ಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ರಾಜ್ಯಸಭಾ ಚುನಾವಣೆಗೆ ಕಂಟೈನ್ಮೆಂಟ್ ವಲಯ, ಸೀಲ್‍ಡೌನ್ ಪ್ರದೇಶದಲ್ಲಿನ ವ್ಯಕ್ತಿಗಳಿಗೆ, 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಯಾವ ರೀತಿಯಲ್ಲಿ ಮತದಾನಕ್ಕೆ ಅನುವು ಮಾಡಿಕೊಡಬೇಕು. ಮಹಾರಾಷ್ಟ್ರದಲ್ಲಿ ಚುನಾವಣೆ ವೇಳೆ ಕೆಲವೊಂದು ಸಡಿಲಿಕೆ ಮಾಡಿಕೊಡಲಾಗಿತ್ತು. ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಸಡಿಲಿಕೆ ಮಾಡಿಕೊಡಲು ಸಾಧ್ಯವೇ ಎಂಬುದರ ಬಗ್ಗೆ ವಿವರ ಕೋರಲಾಗಿದೆ ಎಂದರು.

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಮಾಧ್ಯಮದವರಿಗೆ ಚುನಾವಣಾಧಿಕಾರಿ ಕೊಠಡಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ, ವಿಡಿಯೋ ಮತ್ತು ಪೋಟೋಗಳನ್ನು ವಾರ್ತಾ ಇಲಾಖೆ ಮೂಲಕ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು. ಇದಕ್ಕೆ ಪ್ರತ್ಯೇಕವಾಗಿ ನೋಡಲ್ ಅಧಿಕಾರಿಯೊಬ್ಬರನ್ನು ನೇಮಕ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು. ವಿಪತ್ತು ನಿರ್ವಹಣೆ ಪ್ರಾಧಿಕಾರದ ನಿಯಮದಡಿಯಲ್ಲಿಯೇ ಚುನಾವಣಾ ಪ್ರಕ್ರಿಯೆಗಳು ನಡೆಯಲಿವೆ ಎಂದು ಹೇಳಿದರು.

ಜೂ.19ಕ್ಕೆ ಮತದಾನ

ಜೂ.9ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಜೂ.10ಕ್ಕೆ ನಾಮಪತ್ರಗಳ ಪರಿಶೀಲನೆ. ಜೂ.12ಕ್ಕೆ ಉಮೇದುವಾರಿಕೆ ಹಿಂಪಡೆಯಲು ಕೊನೆ ದಿನ. ಜೂ.19ರ ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ನಾಲ್ಕು ಸ್ಥಾನಗಳಿಗೆ ಮತದಾನ ನಡೆಯಲಿದ್ದು, ನಾಲ್ಕು ಅಭ್ಯರ್ಥಿಗಳಷ್ಟೇ ಕಣದಲ್ಲಿದ್ದರೆ, ಚುನಾವಣೆ ಅಗತ್ಯವಿರುವುದಿಲ್ಲ. ಹೆಚ್ಚು ಮಂದಿ ಅಭ್ಯರ್ಥಿಗಳಿದ್ದರೆ ಚುನಾವಣೆ ನಡೆಸಲಾಗುವುದು

-ವಿಶಾಲಾಕ್ಷಿ ಚುನಾವಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News