ಭಾರತದಲ್ಲಿ ಒಂದೇ ದಿನ 9,971 ಕೊರೋನ ವೈರಸ್ ಪ್ರಕರಣ ಪತ್ತೆ

Update: 2020-06-07 14:32 GMT

    ಹೊಸದಿಲ್ಲಿ, ಜೂ.7: ದೇಶದಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 9,971 ಹೊಸ ಕೊರೋನ ವೈರಸ್ ಪ್ರಕರಣ ಪತ್ತೆಯಾಗಿದ್ದು, 287 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ರವಿವಾರ ಬೆಳಗ್ಗೆ ತಿಳಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಬೆಳಗ್ಗೆ ದೇಶದಲ್ಲಿ ಒಟ್ಟು 2,46,628 ಕೊರೋನ ವೈರಸ್ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದು, ವಿಶ್ವದಲ್ಲಿ ಗರಿಷ್ಠ ಕೋವಿಡ್-19 ಪ್ರಕರಣಗಳನ್ನು ಹೊಂದಿರುವ ದೇಶಗಳ ಪೈಕಿ ಭಾರತವು ಸ್ಪೇನ್ ದೇಶವನ್ನು ಹಿಂದಿಕ್ಕಿ 5ನೇ ಸ್ಥಾನದಲ್ಲಿದೆ. ದೇಶದಲ್ಲಿ ಕೊರೋನಕ್ಕೆ ಸತ್ತವರ ಸಂಖ್ಯೆ 6,972. ಸಕ್ರಿಯ ಪ್ರಕರಣಗಳು 1.2 ಲಕ್ಷ, ಒಟ್ಟು 1.19 ಲಕ್ಷ ಮಂದಿ ಕೊರೋನದಿಂದ ಚೇತರಿಸಿಕೊಂಡಿದ್ದಾರೆ.

ಕೊರೋನ ವೈರಸ್‌ನ ದೃಢಪಟ್ಟ ಪ್ರಕರಣ, ಸಕ್ರಿಯ ಪ್ರಕರಣ,ಚೇತರಿಕೆ ಹಾಗೂ ಸಾವಿನಲ್ಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಈ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 2,739 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 82,958 ಕ್ಕೆ ಏರಿಕೆಯಾಗಿದೆ.

ಶನಿವಾರ ಬೆಳಿಗ್ಗೆಯಿಂದ 24 ಗಂಟೆಗಳ ಅವಧಿಯಲ್ಲಿ 1,42,069 ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು,ಇದರೊಂದಿಗೆ ಈವರೆಗೆ ಪರೀಕ್ಷಿಸಲಾದ ಸ್ಯಾಂಪಲ್‌ಗಳ ಸಂಖ್ಯೆ 46,66,386ಕ್ಕೇರಿದೆ.

ಆರೋಗ್ಯ ಸಚಿವಾಲಯವು ಉಲ್ಲೇಖಿಸಿರುವ ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ಭಾರತದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 0.49 ಸಾವುಗಳು ಸಂಭವಿಸಿದ್ದು,ಇದು ವಿಶ್ವದ ಸರಾಸರಿ ಪ್ರಮಾಣ 5.17ಕ್ಕಿಂತ ತುಂಬ ಕಡಿಮೆಯಿದೆ ಮತ್ತು ಜರ್ಮನಿ(10.35), ಇಟಲಿ(55.78),ಬ್ರಿಟನ್(59.62) ಮತ್ತು ಸ್ಪೇನ್(58.06)ಗಳಂತಹ ಲಾಕ್‌ಡೌನ್ ಸಡಿಲಗೊಳಿಸಿರುವ ರಾಷ್ಟ್ರಗಳ ಪೈಕಿ ಕನಿಷ್ಠ ಪ್ರಮಾಣವಾಗಿದೆ.

ಭಾರತದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 17.32 ಪ್ರಕರಣಗಳು ವರದಿಯಾಗಿದ್ದು,ಇದು ವಿಶ್ವದ ಸರಾಸರಿ 87.74ಕ್ಕಿಂತ ತುಂಬ ಕಡಿಮೆಯಿದೆ ಮತ್ತು ಜರ್ಮನಿ(219.93),ಇಟಲಿ(387.33),ಬ್ರಿಟನ್(419.54) ಮತ್ತು ಸ್ಪೇನ್(515.61)ಗಳಂತಹ ಲಾಕ್‌ಡೌನ್ ಸಡಿಲಗೊಳಿಸಿರುವ ರಾಷ್ಟ್ರಗಳ ಪೈಕಿ ಕನಿಷ್ಠ ಪ್ರಮಾಣವಾಗಿದೆ.

   ಶನಿವಾರ ಬೆಳಿಗ್ಗೆಯಿಂದೀಚಿಗೆ ವರದಿಯಾಗಿರುವ 287 ಸಾವುಗಳ ಪೈಕಿ 120 ಮಹಾರಾಷ್ಟ್ರದಲ್ಲಿ,53 ದಿಲ್ಲಿಯಲ್ಲಿ,29 ಗುಜರಾತಿನಲ್ಲಿ,19 ತಮಿಳುನಾಡಿನಲ್ಲಿ,17 ಪ.ಬಂಗಾಳದಲ್ಲಿ,15 ಮಧ್ಯಪ್ರದೇಶದಲ್ಲಿ,13 ರಾಜಸ್ಥಾನದಲ್ಲಿ,10 ತೆಲಂಗಾಣದಲ್ಲಿ,ಮೂರು ಜಮ್ಮು-ಕಾಶ್ಮೀರದಲ್ಲಿ,ತಲಾ ಎರಡು ಕರ್ನಾಟಕ,ಛತ್ತೀಸ್‌ಗಡ ಮತ್ತು ಪಂಜಾಬಿನಲ್ಲಿ ಹಾಗೂ ತಲಾ ಒಂದು ಸಾವು ಕೇರಳ ಮತ್ತು ಬಿಹಾರಗಳಲ್ಲಿ ಸಂಭವಿಸಿವೆ.

ಒಟ್ಟು 6,929 ಸಾವುಗಳ ಪಟ್ಟಿಯಲ್ಲಿ ಮಹಾರಾಷ್ಟ್ರ (2,969) ಅಗ್ರಸ್ಥಾನದಲ್ಲಿದ್ದರೆ ಗುಜರಾತ (1219),ದಿಲ್ಲಿ(761),ಮಧ್ಯಪ್ರದೇಶ (399),ಪ.ಬಂಗಾಳ (383),ಉತ್ತರ ಪ್ರದೇಶ (257),ತಮಿಳುನಾಡು (251),ರಾಜಸ್ಥಾನ (231),ತೆಲಂಗಾಣ (123),ಆಂಧ್ರಪ್ರದೇಶ (73),ಕರ್ನಾಟಕ (59), ಪಂಜಾಬ್ (50),ಜಮ್ಮು-ಕಾಶ್ಮೀರ (39), ಬಿಹಾರ (30), ಹರ್ಯಾಣ (24), ಕೇರಳ (15), ಉತ್ತರಾಖಂಡ (11),ಒಡಿಶಾ (8), ಜಾರ್ಖಂಡ್(7), ಚಂಡಿಗಡ ಮತ್ತು ಹಿಮಾಚಲ ಪ್ರದೇಶ (ತಲಾ 5),ಅಸ್ಸಾಂ ಮತ್ತು ಛತ್ತೀಸ್‌ಗಡ(ತಲಾ 4) ಮೇಘಾಲಯ ಮತ್ತು ಲಡಾಖ್(ತಲಾ 1) ನಂತರದ ಸ್ಥಾನಗಳಲ್ಲಿವೆ.

 ಶೇ.70ಕ್ಕೂ ಅಧಿಕ ಸಾವುಗಳ ಪ್ರಕರಣಗಳಲ್ಲಿ ರೋಗಿಗಳು ಇತರ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಸಚಿವಾಲಯವು ತಿಳಿಸಿದೆ.

ದೇಶದಲ್ಲಿ ಅತ್ಯಧಿಕ ದೃಢೀಕೃತ ಪ್ರಕರಣಗಳು ದಾಖಲಾಗಿರುವ ಐದು ಅಗ್ರ ರಾಜ್ಯಗಳಲ್ಲಿ ಮಹಾರಾಷ್ಟ್ರ (82,968), ತಮಿಳುನಾಡು(30,152),ದಿಲ್ಲಿ(27,654),ಗುಜರಾತ್(19,592) ಮತ್ತು ರಾಜಸ್ಥಾನ (10,331) ಸೇರಿವೆ. ದೇಶದಲ್ಲಿಯೇ ಕನಿಷ್ಠ (ಏಳು) ಪ್ರಕರಣಗಳು ಸಿಕ್ಕಿಮ್‌ನಲ್ಲಿ ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News