ರಾಜ್ಯಸಭೆಗೆ ಅಚ್ಚರಿಯ ಅಭ್ಯರ್ಥಿಗಳು: ರಾಜ್ಯ ಬಿಜೆಪಿ ಈಗ ಬೂದಿ ಮುಚ್ಚಿದ ಕೆಂಡ

Update: 2020-06-10 16:10 GMT

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಅನಿರೀಕ್ಷಿತವಾಗಿ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಅವರಿಗೆ ಟಿಕೆಟ್ ನೀಡಿದ ಬಿಜೆಪಿಯಲ್ಲಿ ಇದೀಗ ಅಸಮಾಧಾನ ಭುಗಿಲೆದ್ದಿದೆ. ಪಕ್ಷದ ಹಲವು ಹಿರಿಯ ನಾಯಕರು ವರಿಷ್ಠರ ತೀರ್ಮಾನದಿಂದ ತೃಪ್ತರಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿರುವ ನಡುವೆಯೇ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ನೇತೃತ್ವದಲ್ಲಿ ಕೆಲ ನಾಯಕರು ಚರ್ಚೆ ನಡೆಸಿ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ.

ಹೈಕಮಾಂಡ್ ಪಕ್ಷದ ಹಿರಿಯ ನಾಯಕರನ್ನು ಕಡೆಗಣಿಸಿದ ಹಲವು ನಿದರ್ಶನಗಳನ್ನು ಉಮೇಶ್ ಕತ್ತಿ ನೇತೃತ್ವದ ನಾಯಕರು ಸಲ್ಲಿಸುವ ಒಂದು ಪಟ್ಟಿ ಉಲ್ಲೇಖಿಸಲಿದ್ದರೆ ಇನ್ನೊಂದರಲ್ಲಿ ಅವರಿಗೆ ಪಕ್ಷ ಹಾಗೂ ಸರಕಾರದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯಿದೆ. ಈ ಹೋರಾಟವನ್ನು ದಿಲ್ಲಿಗೆ ಕೊಂಡೊಯ್ಯಬೇಕೆಂಬುದೂ ನಾಯಕರ ಆಗ್ರಹವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಬಿಜೆಪಿಯಿಂದ ರಾಜ್ಯಸಭೆಯ ಟಿಕೆಟ್ ನಿರೀಕ್ಷೆಯಲ್ಲಿ ರಾಜ್ಯದ ಹಲವು ಹಿರಿಯ ನಾಯಕರಿದ್ದರು. ಉದ್ಯಮಿ ಪ್ರಕಾಶ್ ಶೆಟ್ಟಿ, ಮಾಜಿ ಸಂಸದ ರಮೇಶ್ ಕತ್ತಿ ಹಾಗೂ ಪ್ರಭಾಕರ್ ಕೋರೆ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿತ್ತು. ಆದರೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿಜೆಪಿಯು ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಅವರಿಗೆ ಟಿಕೆಟ್ ನೀಡಿತು. ಇದು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮತ್ತು ಪಕ್ಷದಲ್ಲಿ ಹಿರಿಯ ನಾಯಕರ, ವಿಶೇಷವಾಗಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ರಾಜ್ಯಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನಾಗಿ ಯಾರನ್ನು ಮಾಡಬೇಕೆಂಬ ಚರ್ಚೆ ಬಹಳ ದಿನಗಳಿಂದ ನಡೆದು ಕೊನೆಗೆ ಶನಿವಾರ ರಾಜ್ಯ ಬಿಜೆಪಿ  ಕೋರ್ ಸಮಿತಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಸೇರಿ ಹಾಲಿ ರಾಜ್ಯಸಭಾ ಸದಸ್ಯ, ಜೂನ್ 25ರಂದು ಅವಧಿ ಪೂರ್ಣಗೊಳಿಸಲಿರುವ ಪ್ರಭಾಕರ್ ಕೋರೆ, ಹುಕ್ಕೇರಿ ಬಿಜೆಪಿ ಶಾಸಕ ಉಮೇಶ್ ಕತ್ತಿಯ ಸೋದರ ರಮೇಶ್ ಕತ್ತಿ ಹಾಗೂ ಉದ್ಯಮಿ ಪ್ರಕಾಶ್ ಶೆಟ್ಟಿ ಅವರ ಹೆಸರುಗಳನ್ನು ಶಿಫಾರಸು ಮಾಡಿತ್ತು. 

ಆದರೆ ಜೂ.8ರಂದು ಸೋಮವಾರ ಬಿಜೆಪಿ ಕೇಂದ್ರ ನಾಯಕತ್ವ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದಾಗ ಈ ಮೂವರ ಹೆಸರುಗಳೇ ಇರಲಿಲ್ಲ. ಬದಲಾಗಿ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಅವರನ್ನು ಆಯ್ಕೆ ಮಾಡಲಾಗಿತ್ತು. ಇವರ್ಯಾರು ಎಂಬ ಪ್ರಶ್ನೆಯನ್ನು ಹಲವು ಬಿಜೆಪಿಗರೇ ಕೇಳಲಾರಂಭಿಸಿದಾಗ 'ತಳಮಟ್ಟದ ಕಾರ್ಯಕರ್ತರಿಗೆ ಪ್ರಾಶಸ್ತ್ಯ' ನೀಡಲಾಗಿದೆ ಎಂಬ ಉತ್ತರ ದೊರಕಿತ್ತು. ಇವರಿಬ್ಬರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ನಿಟ್ಟಿನಲ್ಲಿ ಪತ್ರಕರ್ತರು ಮಾತ್ರವಲ್ಲ ಸ್ವತಃ ಬಿಜೆಪಿಗರೇ ತಲೆಕೆರೆದುಕೊಳ್ಳುವಂತಾಗಿತ್ತು. ಇಂತಹ ಪರಿಸ್ಥಿತಿಗೆ ಪಕ್ಷದ ರಾಜ್ಯ ನಾಯಕರು ಈಗ ಪಕ್ಷದ  ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನೇ ದೂರಲಾರಂಭಿಸಿದ್ದಾರೆ. ಸ್ವತಃ ಸಂತೋಷ್ ಬೆಂಬಲಿಗರೂ ಖುಷಿಯಾಗಿಲ್ಲ ಎನ್ನಲಾಗುತ್ತಿದೆ. 

ಇದು ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಬಳಸಿಕೊಂಡು ಆಡಿದ ಆಟವೆಂದೇ ಯಡಿಯೂರಪ್ಪ ಪಾಳಯ ದೂರುತ್ತಿದೆ. "ಅಮಿತ್ ಶಾ ಅವರಷ್ಟು ಚಾಣಾಕ್ಷರು ನಡ್ಡ ಆಗಿಲ್ಲದೇ ಇರುವುದರಿಂದ ಬಿ.ಎಲ್.ಸಂತೋಷ್ ಅವರನ್ನು ನಂಬಿ ಇತರರ ಅಭಿಪ್ರಾಯ ಕೇಳದೆ ಹೆಸರುಗಳನ್ನು ಅಂತಿಮಗೊಳಿಸಿರಬಹುದು" ಎಂದು ಬಿಜೆಪಿ ವಲಯದಲ್ಲೇ ಮಾತು ಕೇಳಿಬಂದಿದೆ. 

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ನಡುವಿನ ಸಂಬಂಧ ಅಷ್ಟೇನೂ ಉತ್ತಮವಾಗಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಯಡಿಯೂರಪ್ಪ ಒಬ್ಬ ಜನನಾಯಕ ಹಾಗೂ ಆಡಳಿತದ ಮೇಲೆ ಅವರಿಗೆ ಸಂಪೂರ್ಣ ಹಿಡಿತವಿದೆ. ಅತ್ತ ಬಿ.ಎಲ್ ಸಂತೋಷ್ ಅವರು ಸಂಘಟನಾ ಚತುರ ಹಾಗೂ ಪಕ್ಷದ ಕೇಂದ್ರ ನಾಯಕತ್ವಕ್ಕೆ ಹತ್ತಿರದವರು. ಆದರೆ ಅವರು ಇದುವರೆಗೂ ಚುನಾವಣೆ ಸ್ಪರ್ಧಿಸಿಲ್ಲ. ಪಕ್ಷದಲ್ಲಿ ಇಬ್ಬರ ಪಾಳಯವೂ ಭಿನ್ನವಾಗಿದೆ. ಆದರೆ ಇತ್ತೀಚೆಗೆ ರಾಜ್ಯಸಭೆಗೆ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ರೀತಿಯಿಂದ ಪಕ್ಷದ ಹಲವರು ಸಂತೋಷ್ ಅವರ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಯಡಿಯೂರಪ್ಪ ಮತ್ತು ಬಿ.ಎಲ್ ಸಂತೋಷ್ ನಡುವಿನ ಚದುರಂಗದಾಟ ಯಾವ ಹಂತದ ತನಕ ಮುಂದುವರಿಯಬಹುದೆಂದು ತಿಳಿದಿಲ್ಲ. ಕೋವಿಡ್-19 ಹರಡುವಿಕೆಗೆ ಯಾರನ್ನೂ ದೂರಬಾರದು ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದರೆ ಸಂತೋಷ್ ಮಾತ್ರ ತಬ್ಲೀಗಿಗಳನ್ನು ದೂರುವುದನ್ನು ಮುಂದುವರಿಸಿದ್ದರು. ಯಡಿಯೂರಪ್ಪ ಅವರ ಸ್ಥಾನವನ್ನು ಮುಂದೆ ಯಾರು ತುಂಬಲಿದ್ದಾರೆಂಬ ಪ್ರಶ್ನೆಯನ್ನು ಈಗಿನ ಚದುರಂಗದಾಟ ಅಂತಿಮವಾಗಿ ನಮ್ಮ ಮುಂದಿಡಬಹುದು. ರಾಜ್ಯ ರಾಜಕಾರಣಕ್ಕೆ ಪ್ರತಾಪ್ ಸಿಂಹ ಹಾಗೂ ತೇಜಸ್ವಿ ಸೂರ್ಯ ರಂತಹವರನ್ನು ಪರಿಚಯಿಸಿದವರು ಎಂದು ತಿಳಿಯಲ್ಪಟ್ಟಿರುವ ಸಂತೋಷ್‍ಗೆ ರಾಜ್ಯದಲ್ಲಿ ಹಲವು ಬೆಂಬಲಿಗರಿದ್ದರೂ ರಾಜ್ಯಸಭೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಅವರು ವಹಿಸಿರಬಹುದಾದ ಪಾತ್ರ ಮಾತ್ರ ಇಲ್ಲಿನ ಯಾವುದೇ ನಾಯಕರಿಗೆ ಹಿಡಿಸಿದಂತಿಲ್ಲ. ಸಂತೋಷ್ ಅವರ ಲೆಕ್ಕಾಚಾರ ಇಲ್ಲಿ ತಪ್ಪಾಗಿರುವುದು ಸ್ಪಷ್ಟ ಎಂಬ ಮಾತುಗಳು ಇದೀಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News