ಕಿತ್ತು ತಿನ್ನುವ ಪ್ರವೃತ್ತಿಯನ್ನು ನಿಲ್ಲಿಸಿ: ಡೀಸೆಲ್, ಪೆಟ್ರೋಲ್ ದರ ಏರಿಕೆಗೆ ಡಿಕೆಶಿ ಆಕ್ರೋಶ

Update: 2020-06-12 16:35 GMT

ಬೆಂಗಳೂರು, ಜೂ.12: ಕಳೆದ ಆರು ದಿನಗಳಿಂದ ನಿರಂತರವಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರ ಗಣನೀಯವಾಗಿ ಏರುತ್ತಲೇ ಬಂದಿದೆ. ಕೋವಿಡ್-19 ಪಿಡುಗಿನ ಸಂಕಷ್ಟ ಪರಿಸ್ಥಿತಿಯಲ್ಲಿ ಸಿಲುಕಿ ನರಳುತ್ತಿರುವ ಜನಸಾಮಾನ್ಯರ ರಕ್ಷಣೆಗೆ ನಿಲ್ಲಬೇಕಾದ ಸರಕಾರವೇ ಅವರನ್ನು ಲೂಟಿ ಮಾಡಲು ಮುಂದಾಗಿರೋದು ಆತಂಕಕಾರಿ ಬೆಳವಣಿಗೆ. ಹೀಗೆ ಜನರನ್ನು ಕಿತ್ತು ತಿನ್ನುವ ಪ್ರವೃತ್ತಿಯನ್ನು ಕೇಂದ್ರ ಸರಕಾರ ನಿಲ್ಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ರವಿವಾರದಿಂದ ಇವತ್ತಿನವರೆಗೂ ನಿತ್ಯ ಇಂಧನ ಬೆಲೆ ಏರಿಕೆಯಾಗುತ್ತಲೇ ಇದೆ. ಈ ಆರು ದಿನಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 3.31 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರ್ ಗೆ 3.42 ರೂಪಾಯಿ ಹೆಚ್ಚಾಗಿದೆ. ತತ್ಪರಿಣಾಮವಾಗಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 76.57 ರೂಪಾಯಿ ಹಾಗೂ ಡೀಸೆಲ್ ದರ 69.22 ರೂಪಾಯಿ ಆಗಿದೆ ಎಂದು ಅವರು ಹೇಳಿದ್ದಾರೆ.

ಕೋವಿಡ್ ಪಿಡುಗು ಹಾಗೂ ಕೇಂದ್ರ ಸರಕಾರದ ಅವೈಜ್ಞಾನಿಕ ಲಾಕ್‍ಡೌನ್ ನಿಂದಾಗಿ ಭಾರತದ ಕೈಗಾರಿಕೆ, ವ್ಯಾಪಾರೋದ್ಯಮ, ಆರ್ಥಿಕ ವಲಯ ನೆಲಕಚ್ಚಿದೆ. ಇಂಥ ಸಂಕಷ್ಟದ ಸಮಯದಲ್ಲಿ ಅವುಗಳು ಮತ್ತೆ ಎದ್ದು ನಿಲ್ಲಲು ಸರಕಾರದಿಂದ ದೊಡ್ಡ ಮಟ್ಟದ ನೆರವಿನ ಅಗತ್ಯವಿದೆ. ಆದರೆ ಸರಕಾರ ಅದರ ಬದಲು ಇಂಧನ ಬೆಲೆ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಶಿವಕುಮಾರ್ ಟೀಕಿಸಿದ್ದಾರೆ.

2011ರಲ್ಲಿ ಯುಪಿಎ ಸರಕಾರ ಇದ್ದಾಗ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲಬೆಲೆ ಪ್ರತಿ ಬ್ಯಾರೆಲ್ ಗೆ 110 ಅಮೆರಿಕನ್ ಡಾಲರ್ ಇತ್ತು. ಈಗ ಪ್ರತಿ ಬ್ಯಾರೆಲ್ ಗೆ 30 ಡಾಲರ್ ಮಾತ್ರ. ಅಲ್ಲಿಗೆ ಪ್ರತಿ ಬ್ಯಾರೆಲ್ ಬೆಲೆ ಶೇ.70 ರಷ್ಟು ಅಂದರೆ 80 ಡಾಲರ್ ನಷ್ಟು ಇಳಿದಿದೆ. ಆದರೆ ಗ್ರಾಹನಿಗೆ ಸಿಗುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮಾತ್ರ ಇಳಿದಿಲ್ಲ. ಆಗಲೂ ಪೆಟ್ರೋಲ್ ಬೆಲೆ 70 ರೂ.ಆಸುಪಾಸಿನಲ್ಲಿತ್ತು. ಈಗಲೂ ಅಷ್ಟೇ ಇದೆ. ಕಚ್ಚಾತೈಲ ಬೆಲೆ ಕುಸಿತದ ನಯಾ ಪೈಸೆ ಲಾಭ ಗ್ರಾಹಕನಿಗೆ ಸಿಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಈ ವರ್ಷದ ಆರಂಭದಿಂದಲೇ ಕಚ್ಚಾ ತೈಲ ಬೆಲೆ ಇಳಿಕೆ ಪ್ರಮಾಣ ಪರಿಶೀಲಿಸಿದರೆ ಕೇಂದ್ರ ಸರಕಾರ ಜನರಿಗೆ ಮಾಡುತ್ತಿರುವ ಮೋಸದ ಅರಿವಾಗುತ್ತದೆ. ಜನವರಿಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲ ಬೆಲೆ 64.98 ಅಮೆರಿಕನ್ ಡಾಲರ್ ನಷ್ಟಿತ್ತು. ಮೇ 4ರಂದು ಪ್ರತಿ ಬ್ಯಾರೆಲ್ ಮೊತ್ತ 29.14 ಡಾಲರ್ ಗೆ ಇಳಿದಿತ್ತು. ಈ ವರ್ಷದ ಆರಂಭದ ದರ ಹಾಗೂ ಈಗಿನ ದರಕ್ಕೆ ಹೋಲಿಸಿದರೆ ಶೇ.50ರಷ್ಟು ಕುಸಿತವಾಗಿದೆ. ಈ ಬೆಲೆ ಕುಸಿತದ ಪ್ರಯೋಜನ ಜನ ಸಾಮಾನ್ಯರಿಗೆ ಸಿಕ್ಕಿದೆಯೇ ಎಂಬ ಪ್ರಶ್ನೆಗೆ ಸಿಗುವ ಉತ್ತರ ಮಾತ್ರ ನಕಾರಾತ್ಮಕವಾಗಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

ಕೋವಿಡ್ ವಿರುದ್ಧ ಜನ ಹೋರಾಡುತ್ತಿರುವ ಸಂದರ್ಭದ ಮೇ ತಿಂಗಳಲ್ಲಿ ಕೇಂದ್ರ ಸರಕಾರ ಪೆಟ್ರೋಲ್ ಮೇಲಿನ ಸುಂಕವನ್ನು 10 ರೂ.ಗೆ (ಅಬಕಾರಿ ಸುಂಕ 2 ರೂ, ರಸ್ತೆ ಸೆಸ್ 8 ರೂ.)  ಹಾಗೂ ಡೀಸೇಲ್ ಮೇಲಿನ ಸುಂಕವನ್ನು 13 ರೂ.ಗೆ (ಅಬಕಾರಿ ಸುಂಕ 5 ರೂ, ರಸ್ತೆ ಸೆಸ್ 8 ರೂ.) ಹೆಚ್ಚಿಸಿದೆ. ಹೀಗಾಗಿ ತೈಲಬೆಲೆ ಇಳಿದರೂ ಗ್ರಾಹಕರಿಗೆ ಅದರ ಲಾಭ ಸಿಗದಂತಾಯಿತು ಎಂದು ಅವರು ಆರೋಪಿಸಿದ್ದಾರೆ.

ಈಗ ಕಳೆದ ಆರು ದಿನಗಳಲ್ಲಿ ಪ್ರತಿ ಲೀಟರ್ ಗೆ 3 ರೂಪಾಯಿಗೂ ಹೆಚ್ಚು ಬೆಲೆ ಏರಿಸಿದೆ. ಕೇಂದ್ರ ಸರಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಶೇ.275 ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ವಿಧಿಸಿದ್ದು, ಇಡೀ ಪ್ರಪಂಚದಲ್ಲಿ ಇಂಧನ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸಿರುವ ದೇಶ ಭಾರತವಾಗಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರಕಾರದ ಈ ಅಮಾನವೀಯ ಧೋರಣೆಯಿಂದ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗದೇ ಮತ್ತಷ್ಟು ಏರಿಕೆಯಾಗುತ್ತಿದ್ದು, ಸಂಕಷ್ಟದಲ್ಲಿರುವ ಜನ ಸಾಮಾನ್ಯರು ತಮಗೆ ಬೇಕಾದ ದಿನಬಳಕೆ ವಸ್ತುಗಳನ್ನು ಖರೀದಿಸಲು ಪರದಾಡುವಂತಾಗಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

ಇಂಧನ ಬೆಲೆ ಏರಿಕೆ, ಕೈಗಾರಿಕೆ, ಸಣ್ಣ ಹಾಗೂ ಮಧ್ಯಮ ಹಂತದ ಉದ್ದಿಮೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕ್ಯಾಮೆರಾ ಮುಂದೆ ಆತ್ಮನಿರ್ಭರ ಭಾರತ, ಸ್ವಾವಲಂಬನೆ, ಸವಾಲು ಮೆಟ್ಟಿ ನಿಲ್ಲುವ ವಿಚಾರವಾಗಿ ಬಣ್ಣ ಬಣ್ಣದ ಮಾತುಗಳನ್ನಾಡುವ ಪ್ರಧಾನಿ ಮೋದಿ ಅವರು ಕ್ಯಾಮೆರಾ ಹಿಂದೆ ಜನರ ರಕ್ತ ಹೀರುತ್ತಿದ್ದಾರೆ. ತಕ್ಷಣವೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಅಂತಾರಾಷ್ಟ್ರೀಯ ತೈಲಬೆಲೆ ಇಳಿಕೆ ಪ್ರಮಾಣಕ್ಕೆ ಅನುಗುಣವಾಗಿ ಕಡಿಮೆ ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News