ರಾಜ್ಯಸಭಾ ಸ್ಥಾನಗಳಿಗೆ ಆಯ್ಕೆ ಕುರಿತು ಅಳಿದುಳಿದ ಪ್ರಶ್ನೆಗಳು

Update: 2020-06-16 06:04 GMT

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳ ದ್ವೈವಾರ್ಷಿಕ ಚುನಾವಣೆಯಲ್ಲಿ ಅವಿರೋಧ ಆಯ್ಕೆಗಳಾಗಿವೆ. ಸಮಾಧಾನಕರವಾದ ಅಂಶವೆಂದರೆ, ರಾಜ್ಯಸಭೆಗೆ ರಾಜ್ಯವನ್ನು ಪ್ರತಿನಿಧಿಸಿದ ಎಲ್ಲರೂ ಕನ್ನಡಿಗರೇ ಆಗಿರುವುದು. ಲೋಕಸಭೆಯಲ್ಲಿ ಗೆಲ್ಲುವುದಕ್ಕೆ ಅಸಾಧ್ಯವಾದವರನ್ನು ಹಿಂಬಾಗಿಲ ಮೂಲಕ ಸಂಸದರಾಗಿಸುವ ಉದ್ದೇಶಕ್ಕಾಗಿ ರಾಜ್ಯ ಸಭಾ ಚುನಾವಣೆಯನ್ನು ವಿವಿಧ ಪಕ್ಷಗಳು ಬಳಸಿಕೊಂಡು ಬಂದಿವೆ. ಕರ್ನಾಟಕವನ್ನು ಪ್ರತಿನಿಧಿಸುವ ರಾಜ್ಯಸಭಾ ಸದಸ್ಯರು ಕನ್ನಡಿಗರೇ ಆಗಿರಬೇಕು ಎಂದೇನಿಲ್ಲ ಎನ್ನುವ ಮನಸ್ಥಿತಿಯ ಮೇಲೆ, ಈ ಹಿಂದೆ ಹಲವು ಕನ್ನಡೇತರ ನಾಯಕರು ಕರ್ನಾಟಕದಿಂದ ಆಯ್ಕೆಯಾಗಿ ರಾಜ್ಯಸಭೆ ಪ್ರವೇಶಿಸಿದ್ದಿದೆ. ಅವರಿಂದ ಕನ್ನಡ ನಾಡು ನುಡಿಗೆ ಸಿಕ್ಕಿದ ಕೊಡುಗೆ ಶೂನ್ಯ. ಕರ್ನಾಟಕದಿಂದ ಆಯ್ಕೆಯಾಗಿ ಆಂಧ್ರ, ತಮಿಳುನಾಡು ಅಥವಾ ಇನ್ನಿತರ ಯಾವುದೋ ರಾಜ್ಯಗಳ ಪರವಾಗಿ ಧ್ವನಿಯೆತ್ತುತ್ತಿದ್ದ ಹಲವು ನಾಯಕರು ಈಗಾಗಲೇ ಆಗಿ ಹೋಗಿದ್ದಾರೆ. ಇದರ ವಿರುದ್ಧ ಕನ್ನಡ ಸಂಘಟನೆಗಳು ತೀವ್ರವಾಗಿ ಧ್ವನಿಯೆತ್ತಿರುವುದರ ಫಲವಾಗಿ, ಇತ್ತೀಚೆಗೆ ರಾಷ್ಟ್ರೀಯ ಪಕ್ಷಗಳು ರಾಜ್ಯಸಭಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವಂತಾಗಿದೆ. ಈ ಬಾರಿ ಅವಿರೋಧವಾಗಿ ಆಯ್ಕೆಯಾದವರಲ್ಲಿ ನಾಲ್ವರೂ ಅಪ್ಪಟ ಕನ್ನಡಿಗರು ಎನ್ನುವುದು ನೆಮ್ಮದಿ ತರುವ ಅಂಶ. ಆಯ್ಕೆಯಾದವರಲ್ಲಿ ಇಬ್ಬರು ಈ ದೇಶದ ಮುತ್ಸದ್ದಿ ನಾಯಕರಾಗಿದ್ದರೆ, ಬಿಜೆಪಿಯನ್ನು ಪ್ರತಿನಿಧಿಸಿರುವ ಇನ್ನಿಬ್ಬರು ರಾಜ್ಯಮಟ್ಟದ ರಾಜಕೀಯಕ್ಕೆ ಅಪರಿಚಿತರು ಮತ್ತು ಬಿಜೆಪಿ ಇದನ್ನೇ ತನ್ನ ಹೆಗ್ಗಳಿಕೆಯಾಗಿ ಘೋಷಿಸಿಕೊಂಡಿದೆ. ಬಿಜೆಪಿ ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಿ ರಾಜ್ಯಸಭೆಗೆ ಕಳುಹಿಸಿದೆ ಎಂದು ಅದು ಹೇಳುತ್ತಿದೆ. ಇದೇ ಸಂದರ್ಭದಲ್ಲಿ ಬಿಜೆಪಿಯ ಈ ಹೇಳಿಕೆಗೆ ಪ್ರತಿ ಹೇಳಿಕೆ ನೀಡಿರುವ ಜೆಡಿಎಸ್ ನಾಯಕರು, ತಳಮಟ್ಟದ ಕಾರ್ಯಕರ್ತರನ್ನು ಆಯ್ಕೆ ಮಾಡುವುದರಿಂದ ಉದ್ದೇಶ ಪೂರ್ತಿಯಾಗುವುದಿಲ್ಲ, ಆಯ್ಕೆಯಾದವರು ಈ ನಾಡು ನುಡಿಯ ಕುರಿತಂತೆ ಧ್ವನಿಯೆತ್ತುವ ಮುತ್ಸದ್ದಿಗಳಾಗಿರಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಈ ಎರಡೂ ಪಕ್ಷಗಳ ನಾಯಕರ ಹೇಳಿಕೆಗಳಲ್ಲಿ ಕೆಲವು ಸತ್ಯಗಳೂ ಇವೆ. ಹಾಗೆಯೇ, ಕೆಲವು ಪೊಳ್ಳುಗಳೂ ಇವೆ.

ಲೋಕಸಭೆಯನ್ನು ಕೆಳಮನೆ ಎಂದು ಕರೆದರೆ ರಾಜ್ಯಸಭೆಯನ್ನು ನಾವು ಮೇಲ್ಮನೆ ಎಂದು ಕರೆಯುತ್ತೇವೆ. ಈ ಮೇಲ್ಮನೆ ಮತ್ತು ಕೆಳಮನೆಗಳೆಂಬ ಪದಗಳೇ ಆಯಾ ಮನೆಗಳ ಹಿರಿತನವನ್ನು ಹೇಳುತ್ತವೆೆ. ಈ ದೇಶದ ಆಡಳಿತದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವುದು ಕೆಳಮನೆಯೇ ಆಗಿದ್ದರೂ, ಮೇಲ್ಮನೆಯನ್ನು ಸಂಪೂರ್ಣ ನಿರ್ಲಕ್ಷಿಸುವಂತಿಲ್ಲ. ಮೇಲ್ಮನೆಯಿರುವುದೇ ಕೆಳಮನೆಯಲ್ಲಿರುವ ಕಿರಿಯರಿಗೆ ಆಡಳಿತಕ್ಕೆ ಸಂಬಂಧಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುವುದಕ್ಕಾಗಿ. ಆದುದರಿಂದ, ರಾಜ್ಯಸಭೆಗೆ ಆಯ್ಕೆಯಾಗುವ ಪ್ರತಿನಿಧಿಗಳು ಅನುಭವಿಗಳಾಗಿರಬೇಕಾದುದು ಅತ್ಯಗತ್ಯ. ಲೋಕಸಭೆ ಸರಿಯಾದ ದಾರಿಯಲ್ಲಿ ಮುನ್ನಡೆಯಬೇಕಾದರೆ ರಾಜ್ಯಸಭೆಯಲ್ಲಿ ಅವರಿಗೆ ಸಲಹೆ, ಮಾರ್ಗದರ್ಶನ ನೀಡಲು ವಿವಿಧ ಕ್ಷೇತ್ರಗಳಲ್ಲಿ ಅನುಭವಿಗಳಾಗಿರುವ ಚಿಂತಕರು, ತಜ್ಞರು, ಪ್ರತಿಭಾವಂತರು ಆಸೀನರಾಗಿರಬೇಕು. ಆಗ ಮಾತ್ರ ‘ರಾಜ್ಯಸಭೆ’ಯ ಉದ್ದೇಶ ಈಡೇರುತ್ತದೆ. ಆದರೆ, ರಾಜಕೀಯ ಪಕ್ಷಗಳು ಲೋಕಸಭೆಯಲ್ಲಿ ಸ್ಪರ್ಧಿಸಿ ಗೆಲ್ಲಲು ಸಾಧ್ಯವಾಗದ ವರಿಷ್ಠರನ್ನು ಹಿಂಬಾಗಿಲ ಮೂಲಕ ಸರಕಾರದಲ್ಲಿ ಸೇರಿಸಿಕೊಳ್ಳುವ ಉದ್ದೇಶಕ್ಕಾಗಿ ಮೇಲ್ಮನೆಯನ್ನು ಬಳಸಿಕೊಂಡು ಬಂದಿವೆೆ. ಈ ಬಾರಿ ರಾಜ್ಯದಿಂದ ಆಯ್ಕೆಯಾದ ಖರ್ಗೆ, ದೇವೇಗೌಡರು ಚುನಾವಣೆಯಲ್ಲಿ ಸೋಲನ್ನನುಭವಿಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಆದರೆ ಇಂತಹ ಹಿರಿಯ ಅನುಭವಿ ನಾಯಕರು ಸರಕಾರದ ಜೊತೆಗಿರಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೇ ಸಂದರ್ಭದಲ್ಲಿ, ಹೊಸಬರನ್ನು ಗುರುತಿಸಿ ಅವರನ್ನು ರಾಜ್ಯಸಭೆಗೆ ಕಳುಹಿಸಿದ ಬಿಜೆಪಿಯ ನಾಯಕರ ನಿರ್ಧಾರವನ್ನೂ ಶ್ಲಾಘಿಸಬೇಕಾಗಿದೆ. ಅಧಿಕಾರ ಅನುಭವಿಸಿದ ಹಿರಿಯರೇ ಮತ್ತೆ ಮತ್ತೆ ಅಧಿಕಾರಕ್ಕಾಗಿ ಲಾಬಿ ನಡೆಸಿ, ಹೊಸಬರನ್ನು ತುಳಿಯುವ ಪ್ರವೃತ್ತಿಗೆ ಈ ನಿರ್ಧಾರ ಲಗಾಮು ಹಾಕಬಹುದು. ಆದರೆ ರಾಜ್ಯಸಭೆಯ ಹಿರಿಮೆಯನ್ನು ಪರಿಗಣಿಸಿದರೆ, ಈ ಆಯ್ಕೆ ಎಷ್ಟು ಸರಿ ಎಂಬ ಪ್ರಶ್ನೆಯೂ ನಮ್ಮ ಮುಂದೇಳುತ್ತದೆ.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ವರಿಷ್ಠರು ತಮ್ಮ ಕಾರ್ಯಕರ್ತರಿಗೆ ಸ್ಪರ್ಧಿಸಲು ಅವಕಾಶಗಳನ್ನು ನೀಡಿದ್ದಿದ್ದರೆ ಅದನ್ನು ಶ್ಲಾಘಿಸಬಹುದಿತ್ತು. ಆದರೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ‘ಗೆಲ್ಲುವ ಅಭ್ಯರ್ಥಿಗೆ ಆದ್ಯತೆ’ ಎಂದು ಮೊದಲೇ ಘೋಷಿಸುವ ವರಿಷ್ಠರು, ರಾಜ್ಯಸಭೆಯ ಆಯ್ಕೆಯ ಸಂದರ್ಭದಲ್ಲಿ ‘ಕಾರ್ಯಕರ್ತರಿಗೆ ಮಣೆ ಹಾಕಿದ್ದೇವೆ’ ಎನ್ನುವುದು ಎಷ್ಟು ಸರಿ? ಮುತ್ಸದ್ದಿಗಳಿಗೆ, ಅನುಭವಿಗಳಿಗಾಗಿಯೇ ಇರುವ ರಾಜ್ಯಸಭೆಗೆ ಅನನುಭವಿಗಳನ್ನು ಕಳುಹಿಸಿಕೊಟ್ಟರೆ ಅದು ಮೇಲ್ಮನೆಯ ಉದ್ದೇಶಕ್ಕೆ ಧಕ್ಕೆ ತರುವುದಿಲ್ಲವೇ? ಈ ಕಿರಿಯರು, ಲೋಕಸಭೆಯಲ್ಲಿರುವ ಜನಪ್ರತಿನಿಧಿಗಳನ್ನು ತಿದ್ದುವುದಕ್ಕೆ, ಅವರಿಗೆ ಮಾರ್ಗದರ್ಶನ ನೀಡುವುದಕ್ಕೆ ಎಷ್ಟರಮಟ್ಟಿಗೆ ಯಶಸ್ವಿಯಾಗಬಲ್ಲರು? ಎನ್ನುವ ಪ್ರಶ್ನೆಗಳು ಎದುರಾಗುತ್ತವೆ. ಇದೇ ಸಂದರ್ಭದಲ್ಲಿ ಜೆಡಿಎಸ್ ನಾಯಕರ ‘ಅನುಭವಿಗಳನ್ನು, ನಾಡಿನ ಸಮಸ್ಯೆಗಳಿಗಾಗಿ ಧ್ವನಿಯೆತ್ತುವವರನ್ನು ಆರಿಸಿದ್ದೇವೆ’ ಎಂಬ ಪ್ರತಿ ಹೇಳಿಕೆಯಲ್ಲಿ ವಾಸ್ತವವೆಷ್ಟು ಎಂದೂ ಕೇಳಬೇಕಾಗಿದೆ. ದೇವೇಗೌಡರು ಮಾಜಿ ಪ್ರಧಾನಿಗಳು ಮತ್ತು ಕಾವೇರಿಗಾಗಿ ಈ ಹಿಂದೆ ಬಹಳಷ್ಟು ಶಕ್ತಿಯುತವಾಗಿ ಧ್ವನಿಯೆತ್ತಿದವರು ಎನ್ನುವುದರಲ್ಲಿ ಎರಡು ಮಾತಿಲ್ಲ.

ಆದರೆ ಈಗ ದೇವೇಗೌಡರ ವಯಸ್ಸು 87. ಈ ಇಳಿ ವಯಸ್ಸಿನಲ್ಲಿ ಅವರನ್ನೇ ಮತ್ತೆ ರಾಜ್ಯಸಭೆಗೆ ಕಳುಹಿಸುವಂತಹ ಅನಿವಾರ್ಯ ಜೆಡಿಎಸ್‌ಗೆ ಯಾಕೆ ಸೃಷ್ಟಿಯಾಯಿತು? ಹೊಸ ಮುತ್ಸದ್ದಿ ನಾಯಕರು ಜೆಡಿಎಸ್‌ನಲ್ಲಿ ಇಲ್ಲವೇ ಇಲ್ಲ ಎನ್ನುವುದನ್ನು ಆ ಪಕ್ಷ ಪರೋಕ್ಷವಾಗಿ ಘೋಷಿಸಿಕೊಂಡಂತಾಗಲಿಲ್ಲವೇ? ಕೊರೋನ ಇಂದು ದೇಶಾದ್ಯಂತ ಅಬ್ಬರಿಸುತ್ತಿದೆ. ತೀರಾ ಇಳಿ ವಯಸ್ಸಿನವರು ಸಾರ್ವಜನಿಕವಾಗಿ ಚಟುವಟಿಕೆಯಲ್ಲಿರುವುದು ಅಪಾಯಕಾರಿ ಎನ್ನುವುದನ್ನು ವೈದ್ಯಕೀಯ ತಜ್ಞರೇ ಘೋಷಿಸಿದ್ದಾರೆ. ಇಂತಹ ವಾತಾವರಣದಲ್ಲಿ ದೇವೇಗೌಡರ ಆರೋಗ್ಯವನ್ನು ಅಪಾಯಕ್ಕೆ ಒಡ್ಡಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿರುವುದು ಎಷ್ಟು ಸರಿ? ಕಾಂಗ್ರೆಸ್, ಜೆಡಿಎಸ್‌ನಂತಹ ಪಕ್ಷಗಳು ಹೊಸ ಮುಖಗಳನ್ನು ಬೆಳೆಸಿದ್ದಿದ್ದರೆ ಇಂದು ರಾಜ್ಯಸಭೆಗೆ ಮತ್ತೆ ಇಳಿವಯಸ್ಸಿನ, ಅನಾರೋಗ್ಯಗಳನ್ನು ಎದುರಿಸುತ್ತಿರುವ ಹಿರಿಯರನ್ನೇ ಕಳುಹಿಸುವ ಅನಿವಾರ್ಯ ಸೃಷ್ಟಿಯಾಗುತ್ತಿತ್ತೇ? ದೇವೇಗೌಡರು ಆಯ್ಕೆಯಾಗಿದ್ದಾರೆ ನಿಜ, ಆದರೆ ಕೋರೋನ ಸೋಂಕು ದೇಶಾದ್ಯಂತ ವಿಸ್ತರಿಸಿರುವಾಗ ಸಾರ್ವಜನಿಕವಾಗಿ ಈ ಹಿಂದಿನಂತೆ ಮುಕ್ತವಾಗಿ ಕಾಣಿಸಿಕೊಳ್ಳುವುದು ಅವರಿಗೆ ಸಾಧ್ಯವಾದೀತೇ? ಎನ್ನುವ ಪ್ರಶ್ನೆಗಳು ಎದುರಾಗುತ್ತವೆ.

ರಾಜ್ಯಸಭೆಯ ಆಯ್ಕೆಯಲ್ಲಿ ಬಿಜೆಪಿ, ಜೆಡಿಎಸ್ ಎರಡೂ ಪಕ್ಷಗಳು ಎಡವಿವೆ. ಬಿಜೆಪಿಯಲ್ಲೂ ದೇಶದ ಆಗು ಹೋಗುಗಳನ್ನು ಅರಿತಿರುವ, ದೂರದೃಷ್ಟಿಯನ್ನು ಹೊಂದಿರುವ ಅನುಭವಿ ಚಿಂತಕರಿದ್ದಾರೆ. ಕಾರ್ಯಕರ್ತರಿಗೆ ಮುಂದಿನ ಲೋಕಸಭೆ ಅಥವಾ ವಿಧಾನಸಭೆು ಚುನಾವಣೆಯಲ್ಲಿ ಅವಕಾಶ ಕೊಟ್ಟು, ಈಗ ಮುತ್ಸದ್ದಿಗಳನ್ನು ರಾಜ್ಯಸಭೆಗೆ ಕಳುಹಿಸಬಹುದಿತ್ತು. ಇದೇ ಸಂದರ್ಭದಲ್ಲಿ, ಜೆಡಿಎಸ್ ಕೂಡ ಮತ್ತೆ ಮತ್ತೆ ದೇವೇಗೌಡರಿಗೆ ಅನಗತ್ಯ ಒತ್ತಡಗಳನ್ನು ಹೇರುವ ಬದಲು ಪಕ್ಷದೊಳಗೇ ಇರುವ ದತ್ತಾರಂತಹ ನಾಯಕರನ್ನು ರಾಜ್ಯಸಭೆಗೆ ಕಳುಹಿಸಬಹುದಿತ್ತು. ಇದ್ದುದರಲ್ಲಿ ಖರ್ಗೆಯ ಆಯ್ಕೆ ಪರವಾಗಿಲ್ಲ. ಆದರೆ ಅವರೂ 77 ದಾಟುತ್ತಿದ್ದಾರೆ. ಅವರಿಗೆ ಪರ್ಯಾಯವಾಗಿ ಹೊಸ ಮುತ್ಸದ್ದಿ ನಾಯಕರನ್ನು ಕಂಡುಕೊಳ್ಳುವಲ್ಲಿ ಕಾಂಗ್ರೆಸ್ ಪಕ್ಷವೂ ಚಿಂತನೆಯನ್ನು ನಡೆಸಬೇಕಾಗಿದೆ. ಹಣದ ಬಲದಿಂದ ದಾರಿ ತಪ್ಪುತ್ತಿರುವ ಲೋಕಸಭೆಯನ್ನು ತಿದ್ದುವುದಕ್ಕಾಗಿ ರಾಜ್ಯಸಭೆಯಲ್ಲಿ ಅನುಭವಿ ಮುತ್ಸದ್ದಿಗಳ ಅಗತ್ಯ ಈ ಹಿಂದಿಗಿಂತ ಹೆಚ್ಚಿದೆ. ಈ ನಿಟ್ಟಿನಲ್ಲಿ, ರಾಜ್ಯದಿಂದ ಆಯ್ಕೆಯಾಗಿರುವ ಪ್ರತಿನಿಧಿಗಳನ್ನು ಪೂರ್ತಿಯಾಗಿ ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News