ಇಂಧನ ಬೆಲೆ ಏರಿಕೆ ಬಡ, ಮಧ್ಯಮ ವರ್ಗಕ್ಕೆ ಭಾರೀ ಹೊಡೆತ: ಕೇಂದ್ರದ ವಿರುದ್ಧ ಖರ್ಗೆ ಆಕ್ರೋಶ

Update: 2020-06-16 12:19 GMT

ಬೆಂಗಳೂರು, ಜೂ. 16: ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡಿರುವ ಕೇಂದ್ರ ಸರಕಾರದ ನಿರ್ಧಾರ ದೇಶದ ಬಡ ಹಾಗೂ ಮಧ್ಯಮ ವರ್ಗಕ್ಕೆ ಭಾರೀ ಹೊಡೆತ ನೀಡಲಿದೆ. ಸರಕಾರ ಕೂಡಲೇ ತನ್ನ ಈ ತೀರ್ಮಾನದಿಂದ ಹಿಂದೆ ಸರಿಯಬೇಕು. ಅಬಕಾರಿ ಸುಂಕ ಕಡಿತಗೊಳಿಸಿ, ಜನಸಾಮಾನ್ಯರ ಮೇಲಿನ ಹೊರೆಯನ್ನು ಇಳಿಸಬೇಕು ಎಂದು ರಾಜ್ಯಸಭಾ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಈಗಾಗಲೇ ಲಾಕ್‍ಡೌನ್‍ನಿಂದಾಗಿ ಕೆಲಸವಿಲ್ಲದೆ, ಆದಾಯವಿಲ್ಲದೇ ಪರದಾಡುತ್ತಿರುವ ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರನ್ನು ಪೆಟ್ರೋಲ್ ಬೆಲೆ ಏರಿಕೆ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ದೈನಂದಿನ ಚಟುವಟಿಕೆಗಳಿಗೂ ಬೆಲೆ ಏರಿಕೆಯು ಬಲವಾದ ಹೊಡೆತ ನೀಡಲಿದೆ ಎಂದು ಖರ್ಗೆ ಎಚ್ಚರಿಸಿದ್ದಾರೆ.

ಡೀಸೆಲ್ ಬೆಲೆ ಏರಿಕೆ ಪರಿಣಾಮದಿಂದ ಬಸ್, ರೈಲ್ವೆ ಪ್ರಯಾಣ ದರವೂ ಏರಿಕೆಯಾಗಲಿದ್ದು, ಸಾರ್ವಜನಿಕ ಸಾರಿಗೆಯನ್ನೇ ನಂಬಿ ನಿತ್ಯವೂ ತಮ್ಮ ಕೆಲಸ ಕಾರ್ಯಗಳಿಗೆ ಓಡಾಡುವ ದೇಶದ ಕೋಟ್ಯಂತರ ಬಡ-ಮಧ್ಯಮ ವರ್ಗಕ್ಕೆ ಇದು ಮತ್ತಷ್ಟು ಹೊರೆಯಾಗಲಿದೆ. ಹೀಗಾದರೆ ಬಡ ಜನರ ಬದುಕು ನಡೆಸುವುದಾದರೂ ಹೇಗೇ? ಎಂದು ಅವರು ಪ್ರಶ್ನಿಸಿದ್ದಾರೆ.

ಸಂಕಷ್ಟದ ಪರಿಸ್ಥಿತಿಯಲ್ಲಿ ಉದ್ಯೋಗ ಮಾಡುತ್ತಿರುವ ನೌಕರರಿಗೆ ಅನೇಕ ಕಂಪೆನಿಗಳು ಕೇವಲ ಶೇ.50ರಷ್ಟು ಸಂಬಳ ನೀಡುತ್ತಿವೆ. ಇಂಧನ ಬೆಲೆ ಏರಿಕೆಯು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಇಂತಹ ಸಂದರ್ಭದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಳದ ಬಿಸಿ ಸಣ್ಣಪುಟ್ಟ ಉದ್ದಿಮೆಗಳನ್ನ ನಡೆಸುವ ಉದ್ದಿಮೆದಾರರಿಗೆ ಹಾಗೂ ನೌಕರರ ಗಾಯದ ಮೇಲೆ ಉಪ್ಪು ಸವರಿದಂತಾಗುತ್ತದೆ ಎಂದು ಖರ್ಗೆ ತಿಳಿಸಿದ್ದಾರೆ.

ಇಂದು ಬಹುತೇಕ ರೈತರು ಸಂಪ್ರದಾಯಿಕ ಶೈಲಿಯ ಬದಲಾಗಿ ಟ್ರ್ಯಾಕ್ಟರ್, ಟಿಲ್ಲರ್ ಮುಂತಾದ ಯಾಂತ್ರಿಕ ಉಪಕರಣಗಳನ್ನು ಬಳಸಿ ಕೃಷಿ ಮಾಡುತ್ತಿದ್ದಾರೆ. ಇದು ದೇಶದೆಲ್ಲೆಡೆ ಮುಂಗಾರಿನ ಸಮಯವಾಗಿದ್ದು, ರೈತರು ಬಿತ್ತನೆಗೆ ಮುಂದಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಡೀಸೆಲ್ ಬೆಲೆ ಏರಿಕೆಯಿಂದ ಕೃಷಿ ವೆಚ್ಚವೂ ಹೆಚ್ಚಾಗಲಿದೆ. ಅಲ್ಲದೆ, ಇಂಧನ ಬೆಲೆ ಏರಿಕೆಯ ಪರಿಣಾಮವಾಗಿ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಇದರಿಂದ ರೈತರು ಹಾಗೂ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವವರ ಜೇಬಿಗೆ ಕತ್ತರಿ ಬೀಳುತ್ತದೆ ಎಂದು ಅವರು ಹೇಳಿದ್ದಾರೆ.

ಇಂಧನ ದರ ಏರಿಕೆಯಿಂದ ಸಾರಿಗೆ ವೆಚ್ಚವೂ ಹೆಚ್ಚಾಗುವುದರಿಂದ ಎಲ್‍ಪಿಜಿ, ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ದಾಖಲೆ ಮಟ್ಟದಲ್ಲಿ ಕುಸಿದಿರುವ ಈ ಸಂದರ್ಭದಲ್ಲಿ ಕೇಂದ್ರ ಸರಕಾರ ಇದರ ಲಾಭವನ್ನು ದೇಶದ ಜನತೆಗೆ ವರ್ಗಾಯಿಸಬೇಕು ಹಾಗೂ ಪೆಟ್ರೋಲ್, ಡೀಸೆಲ್ ಉತ್ಪನ್ನಗಳನ್ನು ಜಿಎಸ್ಟಿ ಅಡಿಯಲ್ಲಿ ತರಬೇಕು. 2014ರಿಂದ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು 12 ಬಾರಿ ಹೆಚ್ಚಿಸಲಾಗಿದ್ದು, ಇದನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News