ಭಾರತಕ್ಕೆ ಚೀನಾ ಎಸಗಿದ ದ್ರೋಹದ ಎರಡನೇ ಕಂತು

Update: 2020-06-18 06:28 GMT

ಕಳೆದ ಒಂದು ವಾರದಿಂದ ‘ಲಡಾಖ್‌ನ ವಾಸ್ತವವೇನು? ದೇಶಕ್ಕೆ ಬಹಿರಂಗಪಡಿಸಿ’ ಎಂದು ವಿರೋಧ ಪಕ್ಷಗಳು ಸರಕಾರವನ್ನು ಆಗ್ರಹಿಸುತ್ತಾ ಬಂದಿದ್ದವು. ಭಾರತ -ಚೀನಾ ಸೇನೆಯ ನಡುವೆ ಉದ್ವಿಗ್ನ ಪರಿಸ್ಥಿತಿಯ ಶಮನಕ್ಕಾಗಿ ಜೂನ್ 6ರಂದು ಉಭಯ ದೇಶಗಳ ಮಿಲಿಟರಿ ಜನರಲ್‌ಗಳ ನಡುವೆ ನಡೆದಿರುವ ಮಾತುಕತೆಗಳನ್ನೂ ಸರಕಾರ ಮುಚ್ಚಿಟ್ಟು, ಗಡಿಯಲ್ಲಿ ಎಲ್ಲವೂ ಸರಿಯಾಗಿದೆ ಎಂಬಂತಹ ಹೇಳಿಕೆಗಳನ್ನು ನೀಡುತ್ತಾ ಬಂತು. ಅಷ್ಟೇ ಅಲ್ಲ, ಉಭಯ ದೇಶಗಳು ತಮ್ಮ ಸೇನೆಯನ್ನು ಹಂತ ಹಂತವಾಗಿ ಹಿಂದೆಗೆದುಕೊಳ್ಳುವ ನಿರ್ಧಾರಕ್ಕೂ ಬಂದಿವೆ ಎಂಬಂತಹ ಹೇಳಿಕೆಗಳು ರಕ್ಷಣಾ ಸಚಿವಾಲಯದಿಂದ ಹೊರಬಿದ್ದಿತ್ತು. ಗಡಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತಂತೆ ದೇಶ ಆತಂಕದಲ್ಲಿರುವಾಗ, ಪ್ರಧಾನಿಯವರು ಸಂಸತ್ ಹಾಗೂ ದೇಶದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಬೆಳವಣಿಗೆಗಳನ್ನು ದೇಶದ ಮುಂದಿಡಬೇಕಾಗಿತ್ತು. ಆದರೆ ಪ್ರಧಾನಿ ಮತ್ತು ರಕ್ಷಣಾ ಸಚಿವರು ಪಿಒಕೆ ಕುರಿತಂತೆ ಉದ್ವಿಗ್ನ ಹೇಳಿಕೆಗಳನ್ನು ನೀಡಿದ್ದು ಬಿಟ್ಟರೆ, ಲಡಾಖ್‌ನ ಬೆಳವಣಿಗೆಗಳನ್ನು ಗಾಢ ಕತ್ತಲೆಯಲ್ಲಿಟ್ಟರು. ಇದೀಗ ಗಡಿಯ ವಾಸ್ತವ ಅತ್ಯಂತ ಭೀಕರ ರೂಪದಲ್ಲಿ ನಮ್ಮ ಕಣ್ಣೆದುರು ಬಂದು ನಿಂತಿದೆ. ‘ಗಡಿಯಲ್ಲಿ ಮಾತುಕತೆ ಯಶಸ್ವಿಯಾಗಿದೆ’ ಎಂಬ ಸರಕಾರದ ಹೇಳಿಕೆಗಳನ್ನು ಅಣಕಿಸುವಂತೆ, ಚೀನಾದ ಸೈನಿಕರ ದಾಳಿಗೆ ಭಾರತದ ಸುಮಾರು 20 ಯೋಧರು ಹುತಾತ್ಮರಾಗಿರುವುದು ಬೆಳಕಿಗೆ ಬಂದಿದೆ. ಇದೇ ಸಂದರ್ಭದಲ್ಲಿ ಚೀನಾದ 45 ಸೈನಿಕರು ಮೃತಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂಬಂತಹ ಅಡ್ಡಗೋಡೆಯ ಹೇಳಿಕೆಯನ್ನು ಸರಕಾರದ ಮೂಲಗಳು ನೀಡಿವೆಯಾದರೂ, ಈ ಬಗ್ಗೆ ಇನ್ನೂ ಅಧಿಕೃತ ವರದಿಗಳು ಬೆಳಕಿಗೆ ಬಂದಿಲ್ಲ. ಇಷ್ಟಕ್ಕೂ, ಚೀನಾದ 45 ಯೋಧರು ಮೃತಪಟ್ಟರು ಎನ್ನುವ ಕಾರಣಕ್ಕಾಗಿ, ಭಾರತದ 20 ಯೋಧರ ಸಾವನ್ನು ನಾವು ಯಾವ ಕಾರಣಕ್ಕೂ ಹಗುರವಾಗಿ ಪರಿಗಣಿಸುವಂತಿಲ್ಲ. ಬಹುಶಃ ಮೋದಿ ಆಡಳಿತದಲ್ಲಿ ನಮ್ಮ ಯೋಧರ ಮೇಲೆ ನಡೆದ ಎರಡನೆಯ ಅತಿ ಹೇಯ ದಾಳಿಯಿದು. ಪುಲ್ವಾಮದಲ್ಲಿ ಒಬ್ಬ ಉಗ್ರಗಾಮಿಗೆ 45 ಜವಾನರು ಬಲಿಯಾಗಿದ್ದರೆ, ಚೀನಾ ಸೈನಿಕರ ನೇರ ಮುಖಾಮುಖಿಯಲ್ಲಿ 20 ಸೈನಿಕರು ಹುತಾತ್ಮರಾಗಿದ್ದಾರೆ. ಕಾರ್ಗಿಲ್ ಯುದ್ಧವನ್ನು ನೆನಪಿಸುವಂತಹ ಭೀಕರ ಸನ್ನಿವೇಶ ಗಡಿಯಲ್ಲಿ ಸೃಷ್ಟಿಯಾಗಿದೆ. ಅಂದಿನ ಅನಾಹುತಗಳಿಗೆ ಪಾಕಿಸ್ತಾನ ಕಾರಣವಾಗಿದ್ದರೆ, ಇಂದು ಚೀನಾದ ಅತಿರೇಕಕ್ಕೆ ನಮ್ಮ ಸೈನಿಕರು ಪ್ರಾಣ ಕೊಡಬೇಕಾಯಿತು.

 ಚೀನಾ ಭಾರತದ ಜೊತೆಗೆ ಕಾಲು ಕೆರೆದು ಜಗಳಕ್ಕಿಳಿಯುವುದು ಹೊಸತೇನೂ ಅಲ್ಲ. ಭಾರತದೊಂದಿಗಿನ ಚೀನಾ ದ್ವೇಷಕ್ಕೆ ಹಲವು ದಶಕಗಳ ಸುದೀರ್ಘ ಇತಿಹಾಸವಿದೆ ಮತ್ತು ಆ ದ್ವೇಷಕ್ಕೆ ಬೇರೆ ಬೇರೆ ಆಯಾಮಗಳೂ ಇವೆ. ಅರುಣಾಚಲ ಪ್ರದೇಶದ ಮೇಲೆ ಪದೇ ಪದೇ ಹಕ್ಕು ಸಾಧಿಸಲು ಯತ್ನಿಸುವ ಮೂಲಕ ಭಾರತವನ್ನು ಕೆಣಕುತ್ತಾ ಬಂದಿರುವ ಚೀನಾದ ಬಳಿ, ಈಗಾಗಲೇ ಭಾರತಕ್ಕೆ ಸೇರಿದ ದೊಡ್ಡ ಪ್ರಮಾಣದ ಭೂ ಪ್ರದೇಶವಿದೆ. ಭಾರತದೊಂದಿಗೆ ಭಾವನಾತ್ಮಕವಾಗಿ ಸಂಬಂಧವನ್ನು ಹೊಂದಿರುವ ಮಾನಸ ಸರೋವರ ಪ್ರದೇಶವನ್ನೂ ಚೀನಾ ತನ್ನ ಅಂಕೆಯಲ್ಲಿಟ್ಟುಕೊಂಡಿದೆ. ಅಷ್ಟೇ ಅಲ್ಲ, ಹಂತ ಹಂತವಾಗಿ ತನ್ನ ಸೇನೆಯನ್ನು ನುಗ್ಗಿಸುತ್ತಾ ಭಾರತದ ಸಹನೆಯನ್ನು ಪರೀಕ್ಷಿಸುತ್ತಾ ಬಂದಿದೆ. ಇದೇ ಸಂದರ್ಭದಲ್ಲಿ, ಚೀನಾದ ಜೊತೆಗೆ ಭಾರತ ಅತ್ಯಂತ ಸಂಯಮವನ್ನು ಪಾಲಿಸುತ್ತಾ ಬಂದಿದೆ ಎನ್ನುವುದು ಗಮನಾರ್ಹ. ಹಲವು ಬಾರಿ ಭಾರತವನ್ನು ಚೀನಾ ಪ್ರಚೋದಿಸುತ್ತಾ ಬಂದಿದೆಯಾದರೂ, ವಿವೇಕ ಮತ್ತು ತಾಳ್ಮೆಯನ್ನು ಪ್ರದರ್ಶಿಸಿ ಪರಿಸ್ಥಿತಿಯನ್ನು ತಣ್ಣಗಾಗಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರತ ಇಟ್ಟಿರುವ ಕೆಲವು ಆತುರದ ಹೆಜ್ಜೆಗಳನ್ನು ಚೀನಾ ತನಗೆ ಪೂರಕವಾಗಿ ಬಳಸಲು ಹೊರಟಂತಿದೆ. ತನ್ನ ಅಲಿಪ್ತ ನಿಲುವಿನಿಂದ ಸಂಪೂರ್ಣ ಹೊರ ಬಂದು ಅಮೆರಿಕದ ಜೊತೆಗೆ ಭಾರತ ಪ್ರದರ್ಶಿಸುತ್ತಿರುವ ಅತಿ ವಿಧೇಯತನ, ಅಮೆರಿಕದ ವಿರೋಧಿಗಳನ್ನೆಲ್ಲ ಭಾರತದ ವಿರುದ್ಧ ನಿಲ್ಲಿಸುತ್ತಿದೆ. ಇದೇ ಸಂದರ್ಭದಲ್ಲಿ ಅಮೆರಿಕವನ್ನು ‘ಆಪ್ತಮಿತ್ರ’ನೆಂದು ಭಾರತ ಪದೇ ಪದೇ ಘೋಷಿಸುತ್ತಿದ್ದರೂ, ಅದೇ ಭಾವನೆಯನ್ನು ಭಾರತದ ಜೊತೆಗೆ ಅಮೆರಿಕ ಹೊಂದಿಲ್ಲ. ಕೊರೋನಕ್ಕೆ ಸಂಬಂಧಿಸಿ ಔಷಧಿ ರಫ್ತು ಮಾಡಲು ಭಾರತ ನಿರಾಕರಿಸಿದ ಸಂದರ್ಭದಲ್ಲಿ ಅಮೆರಿಕ ನೀಡಿದ ಪ್ರತಿಕ್ರಿಯೆಯೇ, ಭಾರತದ ಕುರಿತಂತೆ ಅದು ಹೊಂದಿರುವ ಮನಸ್ಥಿತಿಯನ್ನು ಬಯಲು ಮಾಡಿದೆ. ಸದ್ಯದ ಜಾಗತಿಕ ಸಂದರ್ಭದಲ್ಲಿ ಭಾರತವನ್ನು ಅಮೆರಿಕ ‘ಬಳಸಿ ಕೊಳ್ಳುತ್ತಿದೆ’ ಎಂದಷ್ಟೇ ಅರ್ಥ ಮಾಡಿಕೊಳ್ಳಬಹುದು. ತನ್ನ ಸ್ವಂತಿಕೆಯನ್ನು ಮಾರಿಕೊಳ್ಳದೆಯೇ ಅಮೆರಿಕದ ಜೊತೆಗೆ ಘನತೆಯ ಮಿತ್ರತ್ವವನ್ನು ಸಾಧಿಸಲು ಯತ್ನಿಸಿದ್ದಿದ್ದರೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತ ಮುಜುಗರದ ಸನ್ನಿವೇಶ ಎದುರಿಸಬೇಕಾಗಿರಲಿಲ್ಲವೇನೋ. ಇಂದು ಭಾರತಕ್ಕೆ ತನ್ನದೇ ಆದ ವಿದೇಶಾಂಗ ನೀತಿಯೂ ಇಲ್ಲ, ಆ ಕುರಿತಂತೆ ಮುತ್ಸದ್ದಿತನದಿಂದ ಇತರ ರಾಷ್ಟ್ರಗಳ ಜೊತೆಗೆ ವ್ಯವಹರಿಸುವ ನಾಯಕರೂ ಸರಕಾರದೊಳಗೆ ಇಲ್ಲ. ಸರ್ಜಿಕಲ್ ಸ್ಟ್ರೈಕ್ ಹೆಸರಿನಲ್ಲಿ ಬಹಿರಂಗವಾಗಿಯೇ ನಿಯಂತ್ರಣ ರೇಖೆಯನ್ನು ಮೀರಿ, ಅದರ ಕುರಿತಂತೆ ನಮ್ಮ ನಾಯಕರು ನೀಡಿದ ಸಾರ್ವಜನಿಕ ಹೇಳಿಕೆಗಳೂ ದೇಶದ ವರ್ಚಸ್ಸಿಗೆ ಹಾನಿಯನ್ನುಂಟು ಮಾಡಿದವು. ಇನ್ನೊಂದು ದೇಶದ ಗಡಿ ನಿಯಂತ್ರಣ ರೇಖೆಯನ್ನು ಮೀರುವುದು, ಅದನ್ನು ಬಹಿರಂಗವಾಗಿ ಕೊಚ್ಚಿಕೊಳ್ಳುವುದು ರಾಜತಾಂತ್ರಿಕವಾಗಿ ಮುತ್ಸದ್ದಿತನವಲ್ಲ. ಎಲ್ಲ ಸರಕಾರಗಳು ಇಂತಹ ಕೃತ್ಯಗಳನ್ನು ಕದ್ದು ಮುಚ್ಚಿ ಮಾಡುತ್ತವೆಯೇ ಹೊರತು, ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಆದರೆ ಭಾರತ ಮಾತ್ರ, ಅದನ್ನು ತನ್ನ ಸಾಧನೆಯ ಭಾಗವಾಗಿ ಬಿಂಬಿಸಲು ಯತ್ನಿಸಿತು. ಪುಲ್ವಾಮ ದಾಳಿಯಿಂದ ಸರಕಾರದ ವರ್ಚಸ್ಸಿಗೆ ಉಂಟಾದ ಧಕ್ಕೆಯನ್ನು ಸರ್ಜಿಕಲ್ ದಾಳಿಯ ಮೂಲಕ ಭಾರತ ತುಂಬಲು ಮುಂದಾಯಿತು. ನೆರೆ ಹೊರೆಯ ನಡುವೆ ಆತಂಕಗಳನ್ನು ಇದು ಹೆಚ್ಚಿಸಿತು. ಇವೆಲ್ಲವುಗಳ ನಡುವೆ ಮೋದಿ ಸರಕಾರ, ಚೀನಾದೊಂದಿಗೆ ಸಂಬಂಧವನ್ನು ಉತ್ತಮಪಡಿಸಿಕೊಳ್ಳಲು ಗರಿಷ್ಠ ಪ್ರಯತ್ನವನ್ನು ಮಾಡಿತ್ತು. ಚೀನಾದ ನಾಯಕರು ಎರಡೆರಡು ಬಾರಿ ಭಾರತಕ್ಕೆ ಭೇಟಿ ಕೊಟ್ಟರು. ಅತ್ಯಂತ ಆತ್ಮೀಯವಾಗಿ ಅವರನ್ನು ಸತ್ಕರಿಸಲಾಯಿತು. ಪ್ರಧಾನಿ ಮೋದಿಯವರೂ ಚೀನಾಕ್ಕೆ ಭೇಟಿ ನೀಡಿ ಬಂದರು. ಹಲವು ಮಹತ್ವದ ಯೋಜನೆಗಳನ್ನು ಚೀನಾದ ಕಂಪೆನಿಗಳಿಗೆ ನೀಡಲಾಯಿತು. ವ್ಯಾಪಾರ ಒಪ್ಪಂದದಲ್ಲೂ ಚೀನಾಕ್ಕೆ ಪೂರಕವಾಗಿ ಸರಕಾರ ಹಲವು ನಿರ್ಧಾರಗಳನ್ನು ತೆಗೆದುಕೊಂಡಿತು. ಭಾರತದ ಏಕತೆಯ ಸಂಕೇತವಾದ ‘ವಲ್ಲಭಬಾಯ್ ಪಟೇಲ್’ ಪ್ರತಿಮೆಯ ಹೊಣೆಯನ್ನು ಚೀನಾ ಕಂಪೆನಿಯೇ ವಹಿಸಿಕೊಂಡಿತ್ತು. ಮೋದಿಯವರ ‘ಆತ್ಮ ನಿರ್ಭರ ಭಾರತ’ ಘೋಷಣೆಯನ್ನು ಅಣಕಿಸುವಂತೆ ದಿಲ್ಲಿ-ಮೀರತ್ ಬೃಹತ್ ಸುರಂಗ ಮಾರ್ಗ ಯೋಜನೆಯನ್ನು ಚೀನಾ ಕಂಪೆನಿಗೆ ನೀಡಲಾಯಿತು. ಆದರೆ ಚೀನಾ ಒಂದೇ ಏಟಿಗೆ ಎಲ್ಲವನ್ನೂ ತನ್ನ ಎಡಗಾಲಿನಿಂದ ಒದ್ದಿತು. ನೆಹರೂವಿಗೆ ಚೀನಾ ಎಸಗಿದ ದ್ರೋಹದ ಎರಡನೆಯ ಕಂತಿದು. ಚೀನಾವನ್ನು ರಾಜತಾಂತ್ರಿಕವಾಗಿ ಎದುರಿಸುವ ಮೊದಲು ಮೋದಿ ನೇತೃತ್ವದ ಸರಕಾರ, ದೇಶದೊಳಗಿನ ಜನರನ್ನು, ತನ್ನ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಗತ್ಯವಿದೆ. ಕಾಶ್ಮೀರದೊಳಗಿನ ದಿಗ್ಬಂಧನ, ಸಿಎಎ, ಎನ್‌ಆರ್‌ಸಿ...ಹೀಗೆ ದೇಶದ ಅಭಿವೃದ್ಧಿಯಲ್ಲಿ ಯಾವ ಪಾತ್ರವೂ ಇಲ್ಲದ, ದೇಶದ ಆಂತರಿಕ ಸೌಹಾರ್ದವನ್ನು ಕೆಡಿಸುವ, ದೇಶದೊಳಗೆ ಅಭದ್ರತೆಗಳನ್ನು ಸೃಷ್ಟಿಸುವ ತನ್ನ ನಿರ್ಧಾರಗಳಿಂದ ಹಿಂದೆ ಸರಿಯಬೇಕು. ಪ್ರಧಾನಿ ಮೋದಿಯವರು ಏಕಪಾತ್ರಾಭಿನಯದಿಂದ ಹಿಂದೆ ಸರಿದು, ಸರ್ವಪಕ್ಷಗಳನ್ನು ಒಂದಾಗಿಸಿ ಸದ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಸದ್ಯದ ಸಮಸ್ಯೆಗೆ ಮಾತುಕತೆ ಪರಿಹಾರವೇ ಹೊರತು ಯುದ್ಧವಲ್ಲ. ಈಗಾಗಲೇ ಲಾಕ್‌ಡೌನ್‌ನಿಂದಾಗಿ ಆರ್ಥಿಕವಾಗಿ ಸಂಪೂರ್ಣ ತತ್ತರಿಸಿ ಕೂತಿರುವ ಭಾರತ, ಚೀನಾದಂತಹ ಬೃಹತ್ ದೇಶದ ಜೊತೆಗೆ ಯುದ್ಧ ಮಾಡುವ ಸ್ಥಿತಿಯನ್ನು ತಂದುಕೊಳ್ಳುವುದು ಬುದ್ಧಿವಂತಿಕೆಯಲ್ಲ. ನಾವು ಈಗ ಹಿಂದಿಡುವ ಎರಡು ಹೆಜ್ಜೆ , ನಮ್ಮನ್ನು ಭವಿಷ್ಯದಲ್ಲಿ ನಾಲ್ಕು ಹೆಜ್ಜೆ ಮುಂದೆ ಕೊಂಡೊಯ್ದೆವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News