ವಿಶ್ವನಾಥ್ ಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನ: ಸಚಿವ ಸೋಮಶೇಖರ್

Update: 2020-06-19 04:54 GMT

ತುಮಕೂರು, ಜೂ.19: ವಿಧಾನ ಪರಿಷತ್ ಸ್ಥಾನಕ್ಕೆ ಎಚ್.ವಿಶ್ವನಾಥ್ ಅವರಿಗೆ ಟಿಕೆಟ್ ಕೈತಪ್ಪಿದ್ದರ ಬಗ್ಗೆ ನಾವೂ ಸಹ ಮುಖ್ಯಮಂತ್ರಿ  ಜೊತೆ ಮಾತನಾಡಿದ್ದೇವೆ. ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನ ಕೊಡುವ ಭರವಸೆಯನ್ನು ಕೊಟ್ಟಿದ್ದಾರೆ. ಅಲ್ಲದೆ, ಕೋರ್ ಕಮಿಟಿ ಪಟ್ಟಿಯಲ್ಲಿ ವಿಶ್ವನಾಥ್ ಹೆಸರನ್ನು ಸೇರಿಸಲಾಗಿದ್ದರೂ ಹೈಕಮಾಂಡ್ ಮಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಶುಕ್ರವಾರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರೊಂದಿಗೆ ಭೇಟಿ ನೀಡಿ ಶ್ರೀ ಸಿದ್ಧಗಂಗಾ ಮಹಾಯೋಗಿಗಳ ಗದ್ದುಗೆಗೆ ತೆರಳಿ ಪೂಜೆ ನೆರವೇರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಈಗಾಗಲೇ ಮುಖ್ಯಮಂತ್ರಿ ಶೇ.90 ಬೇಡಿಕೆಗಳನ್ನು ಈಡೇರಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿಶ್ವನಾಥ್ ಅವರಿಗೂ ಸೂಕ್ತ ವ್ಯವಸ್ಥೆ ಆಗಲಿದೆ. ಇನ್ನು ಮುನಿರತ್ನ ಹಾಗೂ ಪ್ರತಾಪ್ ಗೌಡ ಪಾಟೀಲ್ ಅವರ ಕ್ಷೇತ್ರಗಳಿಗೆ ಚುನಾವಣೆಯಾಗಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅನುದಾನಕ್ಕೆ ಯಾರಿಂದಲೂ ಅಸಮಾಧಾನವಿಲ್ಲ

ಕ್ಷೇತ್ರಗಳಿಗೆ ಅನುದಾನ ಸಿಗುತ್ತಿಲ್ಲ ಎಂದು ಬಿಜೆಪಿಯ ಯಾವೊಬ್ಬ ಶಾಸಕರೂ ಸಹ ಅಸಮಾಧಾನಗೊಂಡಿಲ್ಲ. ಕೊರೋನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲ. ಆ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಬಳಿ ಹೇಳಿಕೊಂಡಿದ್ದಾರೆ. ಅಷ್ಟೇ ಬಿಟ್ಟರೆ ಯಾರಿಂದಲೂ ಅಸಮಾಧಾನ ಇಲ್ಲ ಎಂದು ಸಚಿವರು ಹೇಳಿದ್ದಾರೆ

ಎಪಿಎಂಸಿ ವ್ಯವಸ್ಥೆಗೆ ದಕ್ಕೆ ಇಲ್ಲ

ಎಪಿಎಂಸಿ ಇರುವುದೇ ರೈತರಿಗೋಸ್ಕರ. ಕಾಯ್ದೆ ತಿದ್ದುಪಡಿಯಿಂದ ಯಾರಿಗೂ ತೊಂದರೆಯಾಗಿಲ್ಲ. ಇದರಿಂದ ಎಪಿಎಂಸಿ ವ್ಯವಸ್ಥೆಗೆ ಯಾವುದೇ ದಕ್ಕೆಯಾಗದು. ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ. ರೈತರು ಎಲ್ಲಿ ಬೇಕಿದ್ದರೂ ತಮ್ಮ ಬೆಳೆಗಳನ್ನು ಮಾರಾಟ ಮಾಡಬಹುದಾಗಿದೆ. ಮಲ್ಟಿನ್ಯಾಶನಲ್ ಕಂಪೆನಿಗಳು ಬರುವುದರಿಂದ ಯಾವುದೇ ಸಮಸ್ಯೆಯಾಗದು. ಅವರೇ ರೈತರ ಹೊಲಗಳಿಗೆ ಬಂದು ನೇರವಾಗಿ ಖರೀದಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.

ಬಳಿಕ ಸಚಿವರಿಬ್ಬರು ಜ್ಞಾನ ಮಂದಿರಕ್ಕೆ ತೆರಳಿ ಮಹಾಯೋಗಿಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಶ್ರೀ ಸಿದ್ಧಲಿಂಗ ಮಹಾಸ್ವಾಮಿಯ ಭೇಟಿ ಮಾಡಿ ಆಶೀರ್ವಾದ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News