ರಮೇಶ್ ಜಾರಕಿಹೊಳಿ ಸ್ಪೆಷಲ್ ಕೇರ್ ಹೇಳಿಕೆಗೆ ಸತೀಶ್ ಜಾರಕಿಹೊಳಿ ತೀರುಗೇಟು

Update: 2020-06-19 12:25 GMT
ರಮೇಶ್ ಜಾರಕಿಹೊಳಿ - ಸತೀಶ್ ಜಾರಕಿಹೊಳಿ

ಬೆಳಗಾವಿ, ಜೂ.19: ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಧಿಪತ್ಯಕ್ಕಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸಚಿವ ರಮೇಶ್ ಜಾರಕಿಹೊಳಿ ನಡುವೆ ಹೋರಾಟ ನಡೆದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು, ಲಕ್ಷ್ಮಿ ಹೆಬ್ಬಾಳ್ಕರ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದು, ಸೋಲುತ್ತೇವೆ ಎಂದು ಮನೆಯಲ್ಲಿ ಕುಳಿತುಕೊಳ್ಳಲು ಆಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಶುಕ್ರವಾರ ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗೆ ಇನ್ನೂ ಮೂರು ವರ್ಷ ಬಾಕಿಯಿದೆ. ಮುಂಬರುವ ದಿನಗಳಲ್ಲಿ ಸಾಕಷ್ಟು ರಾಜಕೀಯ ಬದಲಾವಣೆ ಆಗಲಿವೆ. ಚುನಾವಣೆಗೆ ನಿಲ್ಲುವವರು ಗೆಲುತ್ತೇವೆ ಅಂತಲೇ ನಿಲ್ಲುತ್ತಾರೆ. ರಾಜಕೀಯದಲ್ಲಿ ಯಾರೇ ಸವಾಲು ಹಾಕಿದರೂ ಅದನ್ನು ಸ್ವೀಕರಿಸಲೇ ಬೇಕಾಗುತ್ತದೆ ಎಂದರು.

ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಅವರು ಸ್ಪೆಷಲ್ ಕೇರ್ ಎಂಬ ಶಬ್ದವನ್ನು ಬಳಸಿ ಮಾತನಾಡಿದ್ದಾರೆ ಎಂಬ ಮಾತುಗಳನ್ನು ಕೇಳಿದ್ದೇನೆ. ಚುನಾವಣೆ ಬಂದಾಗ ಮತದಾರರ ಒಲವು ಯಾರ ಕಡೆಗೆ ಇರುತ್ತದೆ ಎಂಬುದನ್ನು ನೋಡಬೇಕಾಗಿದೆ ಎಂದು ಹೇಳಿದರು.   

ವಿಧಾನ ಪರಿಷತ್ ಟಿಕೆಟ್ ಕೈ ತಪ್ಪಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಕಾರಣ ಎಂಬ ಎಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ ಅವರು, ಹಿರಿಯರಾಗಿ ಎಚ್.ವಿಶ್ವನಾಥ್ ಹೇಳಿಕೆ ಸರಿಯಿಲ್ಲ. ನಮಗೂ ಬಿಜೆಪಿಗೂ ಏನು ಸಂಬಂಧ? ನಮ್ಮ ಮಾತು ಕೇಳಿ ಅವರು ಟಿಕೆಟ್ ಕೊಡದೇ ಇರಲು ಸಾಧ್ಯವೆ? ಪರಿಷತ್ ಟಿಕೆಟ್ ಕೊಡುವುದು, ಬಿಡುವುದು ಬಿಜೆಪಿಯ ಆಂತರಿಕ ವಿಚಾರ. ಹಿರಿಯರಾಗಿ ಈ ರೀತಿ ಹೇಳಿಕೆ ನೀಡೋದು ಶೋಭೆ ತರಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News