ಉಸಿರುಗಟ್ಟಿಸುವ ಜಗತ್ತು

Update: 2020-06-19 17:35 GMT

ಭಾಗ-1

ಅಮೆರಿಕದಲ್ಲಿ 1865ರಲ್ಲಿ ಗುಲಾಮಗಿರಿಯನ್ನು ನಿಷೇಧಿಸಲಾಗಿದ್ದರೂ, ಜನಾಂಗೀಯ ಭೇದ ಮತ್ತು ಶೋಷಣೆ ನಿರಂತರವಾಗಿ ಆಚರಣೆಯಲ್ಲಿತ್ತು. ಇದರ ವಿರುದ್ಧ ನಾಗರಿಕ ಹಕ್ಕು ಚಳವಳಿಯ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮತ್ತಿತರರು ನಡೆಸಿದ ಅವ್ಯಾಹತ ಹೋರಾಟದ ಫಲವಾಗಿ 1964ರಲ್ಲಿ ಈ ಅನಿಷ್ಟ್ಟ ಆಚರಣೆಯನ್ನು ನಿಷೇಧಿಸಲಾಗಿತ್ತು. ಆದರೂ, ಈ ಪದ್ಧತಿ ಇಂದಿಗೂ ಕೊನೆಗೊಂಡಿಲ್ಲ.


ಸರ್, ನನಗೆ ಉಸಿರಾಡಲು ಆಗುತ್ತಿಲ್ಲ. ಪ್ಲೀಸ್, ನನ್ನನ್ನು ಕೊಲ್ಲಬೇಡಿ. ಇದು ಅಮೆರಿಕದ ಮಿನಪೊಲಿಸ್ ನಲ್ಲಿ ಜಾರ್ಜ್ ಫ್ಲಾಯ್ಡ್ ಅಂತಿಮವಾಗಿ ತನ್ನ ಪ್ರಾಣ ಉಳಿಸಿಕೊಳ್ಳಲು ಅಂಗಲಾಚಿದ ಪರಿ. ಈ ಆರ್ತನಾದ ಕೇಳಿದ ಒಂದೇ ಒಂದು ಸೆಕೆಂಡ್‌ನಲ್ಲಿ ಯಾವ ಕಲ್ಲು ಹೃದಯವೂ ನೀರಾಗಬಹುದು. ಆದರೆ ಡೆರೆಕ್ ಶೂವಿನ್ ಎನ್ನುವ ಬಿಳಿ ತೊಗಲಿನ ಪೊಲೀಸ್ ಅಧಿಕಾರಿಯ ಕಲ್ಲಿಗಿಂತಲೂ ಕಠಿಣವಾದ ಹೃದಯ ಕರಗಲೇ ಇಲ್ಲ. ಶೂವಿನ್ ಸುಮಾರು 9 ನಿಮಿಷಗಳವರೆಗೆ ತನ್ನ ಮೊಣಕಾಲಿನಲ್ಲಿ ಫ್ಲಾಯ್ಡಾ ಕುತ್ತಿಗೆಯನ್ನು ನೆಲಕ್ಕೆ ಬಿಗಿಯಾಗಿ ಒತ್ತಿ ಹಿಡಿದು ಹತ್ಯೆ ನಡೆಸುವ ಮೂಲಕ ಜನಾಂಗೀಯ ದ್ವೇಷದ ವಿಷ ಕಾರಿದ್ದಾರೆ. ಕೊರೋನ ಹಾವಳಿಯ ನಡುವೆ ಜಗತ್ತೇ ಉಸಿರಾಡಲು ಒದ್ದಾಡುತ್ತಿರುವಾಗ ಫ್ಲಾಯ್ಡಾ, ನನಗೆ ಉಸಿರಾಡಲು ಆಗುತ್ತ್ತಿಲ್ಲ ಎಂದು ಹೇಳಿ ಭೂಮಿ ಮೇಲಿನ ತನ್ನ ಯಾತನಾಮಯ ಬದುಕಿನ ಪಯಣ ಮುಗಿಸಿದ್ದಾರೆ. ಅವರ ಈ ಕೊನೆಯ ಮಾತು ಇಡೀ ಜಗತ್ತನ್ನು ಚಿಂತನೆಗೆ ಹಚ್ಚಿದ್ದು, ನಾವು ಬದುಕುತ್ತಿರುವ ಸುತ್ತ ಮುತ್ತಲಿನ ವಾತಾವರಣ ಮುಕ್ತವಾಗಿ ಉಸಿರಾಡಲು ಎಷ್ಟು ಯೋಗ್ಯವಾಗಿದೆ ಎಂಬ ಗಂಭೀರ ಪ್ರಶ್ನೆಯನ್ನು ಎತ್ತಿದೆ.

ಜಾರ್ಜ್ ಫ್ಲಾಯ್ಡ್ ಒಬ್ಬ ಆಫ್ರಿಕ ಮೂಲದ ಅಮೆರಿಕ ಪ್ರಜೆ. ಟ್ರಕ್ ಚಾಲನೆ, ಕಾವಲುಗಾರಿಕೆ ಈ ರೀತಿಯ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ಜೀವನ ನಿರ್ವಹಿಸುತ್ತಿದ್ದ ಆತನೊಬ್ಬ ರಾಪ್ಪ್ ಕಲಾವಿದ ಕೂಡ. ಜಗತ್ತಿಗೆ ವಕ್ಕರಿಸಿರುವ ಕೊರೋನ ವೈರಸ್ ಫಲವಾಗಿ ಫ್ಲಾಯ್ಡ್ ಹೊಟ್ಟೆಪಾಡಿಗಾಗಿ ಆಯ್ದುಕೊಂಡಿದ್ದ ಕಾವಲುಗಾರಿಕೆ ಕಸಬನ್ನು ಕಳೆದುಕೊಂಡಿದ್ದ. ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿರುವ ಫ್ಲಾಯ್ಡ್ಗೆ ಕೊರೋನ ಸೋಂಕು ತಗಲಿತ್ತು ಎಂದು ವೈದ್ಯಕೀಯ ಪರೀಕ್ಷೆಯಿಂದ ತಿಳಿದು ಬಂದಿದೆ. ಆದರೆ ಆತನನ್ನು ಕೊರೋನ ಕೊಲ್ಲದಿದ್ದರೂ, ಜನಾಂಗೀಯ ದ್ವೇಷದ ವಿಷ ಸರ್ಪ ಮಾತ್ರ ಹೊಸಕಿ ಹಾಕಿದೆ.

ಫ್ಲಾಯ್ಡ್ ರೀತಿಯಲ್ಲೇ, 2014ರಲ್ಲಿ ಎರಿಕ್ ಗಾರ್ನೆರ್ ಎಂಬ ಆಫ್ರಿಕ ಮೂಲದ ಅಮೆರಿಕ ಪ್ರಜೆ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದ. ನ್ಯೂಯಾರ್ಕ್‌ನಲ್ಲಿ ಪೊಲೀಸರು ಬಂಧಿಸುವ ವೇಳೆ ಗಾರ್ನೆರ್ ನನ್ನು ನೆಲಕ್ಕುರುಳಿಸಿ ಕುತ್ತಿಗೆ ಬಿಗಿ ಹಿಡಿದಿದ್ದರು. ಅಷ್ಟಕ್ಕೇ ಗಾರ್ನೆರ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಈ ವೇಳೆ ಉಸಿರಾಡಲು ಒದ್ದಾಡಿದ್ದ ಗಾರ್ನೆರ್, I can't breath (ಉಸಿರಾಡಲು ಆಗುತ್ತಿಲ್ಲ) ಎಂದು 11 ಸಲ ಚೀರಾಡಿದ್ದ. ಗಾರ್ನೆರ್ ಚಿಲ್ಲರೆ ಸಿಗರೇಟ್ ಮಾರಾಟದ ದಂಧೆ ನಡೆಸುತ್ತಿದ್ದ ಎಂಬುದು ಆತನ ಮೇಲಿನ ಆರೋಪವಾಗಿತ್ತು. ತೆರಿಗೆ ಸ್ಟ್ಯಾಂಪ್ ಇಲ್ಲದ ಚಿಲ್ಲರೆ ಸಿಗರೇಟ್ ಮಾರಾಟ ಅಮೆರಿಕದಲ್ಲಿ ಅಪರಾಧವಾಗಿದೆ. ಅಪರಾಧ ಎನ್ನಲಾಗಿರುವ ಈ ಎಲ್ಲ ದಂಧೆಗಳು ಕರಿಯ ಜನಾಂಗದವರು ಇದ್ದಲ್ಲೇ ಯಾಕೆ ನಡೆಯುತ್ತಿದೆ ಎಂಬುದೊಂದು ಪ್ರಶ್ನೆಯೇ ಸರಿ. ಒಂದೊಮ್ಮೆ ಅವರಿಗೆ ಸೂಕ್ತವಾದ ವಿದ್ಯೆ ಮತ್ತು ಉದ್ಯೋಗ ಇದ್ದಲ್ಲಿ ಇಂತಹ ಘಟನೆ ನಡೆಯುವುದಾದರೂ ಹೇಗೆ? ಸಮಾನ ಹಕ್ಕು ಮತ್ತು ಅವಕಾಶಗಳಿಂದ ವಂಚಿತರಾಗಿರುವುದೇ ಇದರ ಹಿಂದಿನ ಕಾರಣ ಎಂದು ಬೇರೆ ಹೇಳಬೇಕಾಗಿಲ್ಲ.

ಅರಬರ ಅಳಲು
 ಈ ಕಲಹದಲ್ಲಿ ನೋವು ಮತ್ತು ನಷ್ಟ ಅನುಭವಿಸಿದ್ದು, ಅರಬರು ಕೂಡ. ಇದಕ್ಕೆ ಕಾರಣ ಫ್ಲಾಯ್ಡಾ ಬಂಧನವಾಗಿರುವ ಸ್ಥಳ. ಆತನನ್ನು ಅರಬ್ ಅಮೆರಿಕನ್ ಮಾಲಕತ್ವದ ಫುಡ್ ಕಪ್ಸ್ ಎನ್ನುವ ಸ್ಟೋರ್‌ನಲ್ಲಿ ಬಂಧಿಸಲಾಗಿತ್ತು. ಆತ ಈ ಸ್ಟೋರ್‌ನಲ್ಲಿ 20 ಡಾಲರ್ ಮೌಲ್ಯದ ನಕಲಿ ಬಿಲ್ ಅನ್ನು ಕ್ಯಾಶ್ ಮಾಡಲು ಯತ್ನಿಸಿದ ಎಂಬುದು ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯ ವೇಳೆ ಕರಿಯರ ಪ್ರಾಬಲ್ಯದ ಕೆಲವು ಪ್ರದೇಶಗಳಲ್ಲಿ ಅರಬ್ ಮೂಲದವರ ಉದ್ಯಮಕ್ಕೆ ಭಾರೀ ಹಾನಿ ಮಾಡಲಾಗಿದೆ. ಫುಡ್ ಕಪ್ಸ್ ಸ್ಟೋರ್‌ನ ಮಾಲಕರು ಜೀವ ಬೆದರಿಕೆಯಿಂದಾಗಿ ಅಡಗಿಕೊಳ್ಳುವ ಪರಿಸ್ಥಿತಿಯೂ ಉಂಟಾಗಿದೆ. ಅರಬ್ ಮೂಲದವರ ಹೆಚ್ಚಿನ ಉದ್ಯಮಗಳು ಕರಿಯ ಸಮುದಾಯದವರು ಇರುವ ಸ್ಥಳಗಳಲ್ಲಿಯೇ ಇವೆ. ಇದಕ್ಕೆ ಕಾರಣವೂ ಉಂಟು. ಐತಿಹಾಸಿಕವಾಗಿ ಮೇಲ್ವರ್ಗದವರಿಂದ ಅರಬರು ಕೂಡ ಶೋಷಣೆಗೊಳಗಾಗಿದ್ದು, ಇದು ಅರಬರು ಮತ್ತು ಕರಿಯರ ನಡುವೆ ಒಳ್ಳೆಯ ಬಾಂಧವ್ಯ ಮೂಡಿಸಿತ್ತು. ಇದೀಗ ಕೆಲವು ಕರಿಯರು ಪ್ರತಿಭಟನೆಯ ವೇಳೆ ತಮ್ಮ ಉದ್ಯಮಗಳಿಗೆ ಹಾನಿ ಉಂಟು ಮಾಡಿದ್ದಾಗಿ ಅರಬರು ಅಳವತ್ತುಕೊಂಡಿದ್ದು, ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ.

ಬಿಳಿ ಭವನದ ಮುಂದೆ ಆರ್ಭಟಿಸಿದ ಕರಿ ಸಾಗರ

ಅಮೆರಿಕದಲ್ಲಿ 1865ರಲ್ಲಿ ಗುಲಾಮಗಿರಿಯನ್ನು ನಿಷೇಧಿಸಲಾಗಿದ್ದರೂ, ಜನಾಂಗೀಯ ಭೇದ ಮತ್ತು ಶೋಷಣೆ ನಿರಂತರವಾಗಿ ಆಚರಣೆಯಲ್ಲಿತ್ತು. ಇದರ ವಿರುದ್ಧ ನಾಗರಿಕ ಹಕ್ಕು ಚಳವಳಿಯ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮತ್ತಿತರರು ನಡೆಸಿದ ಅವ್ಯಾಹತ ಹೋರಾಟದ ಫಲವಾಗಿ 1964ರಲ್ಲಿ ಈ ಅನಿಷ್ಟ್ಟ ಆಚರಣೆಯನ್ನು ನಿಷೇಧಿಸಲಾಗಿತ್ತು. ಆದರೂ, ಈ ಪದ್ಧತಿ ಇಂದಿಗೂ ಕೊನೆಗೊಂಡಿಲ್ಲ. ಇಲ್ಲದಿದ್ದಲ್ಲಿ ಗಾರ್ನೆರ್, ಫ್ಲಾಯ್ಡಾ, ರೇಶಾರ್ಡ್ ಬ್ರೂಕ್ಸ್ ಹೀಗೆ ಹಲವು ಮಂದಿ ಕರಿಯರು ಬಿಳಿಯ ಅಧಿಕಾರಿಗಳ ಕೈಯಲ್ಲಿ ಅಮಾನುಷವಾಗಿ ಸಾಯುತ್ತಿರಲಿಲ್ಲ. ಹಿಂದಿನಿಂದಲೂ ಇಂತಹ ಹತ್ತು ಹಲವು ಘಟನೆಗಳು ನಡೆಯುತ್ತಾ ಬಂದಿದ್ದು, ಸೂಕ್ತ ವಿಚಾರಣೆ ಇಲ್ಲದೆ ಪ್ರಕರಣ ಬಿದ್ದು ಹೋಗಿವೆ. ಇಲ್ಲವೇ ಹಣ ಸುರಿದು ಇಡೀ ಪ್ರಕರಣವನ್ನೇ ಮುಚ್ಚಿ ಹಾಕಲಾಗುತ್ತಿದೆ. ಈ ಕಾರಣಕ್ಕಾಗಿಯೇ ಕರಿಯರು ಕೆರಳಿದ್ದು, ತಮ್ಮ ಮೌನ ದೌರ್ಬಲ್ಯ ಆಗ ಕೂಡದು ಎಂದು ದೃಢ ಸಂಕಲ್ಪ ತಳೆದಿದ್ದಾರೆ. ದೇಶದ ಶಕ್ತಿ ಕೇಂದ್ರ ಶ್ವೇತ ಭವನದ ಎದುರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅಮೆರಿಕದ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ಕಾವೇರುತ್ತಿದ್ದು, ಜಗತ್ತಿನಾದ್ಯಂತ ಇದಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.

ಅಮೆರಿಕದ ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಆಗ್ರಹಿಸಲಾಗಿದ್ದು, ನ್ಯಾಯ ಸಿಗದೆ ಶಾಂತಿ ನೆಲೆಸದು ಎಂಬ ಘೋಷಣೆ ಮುಗಿಲುಮುಟ್ಟಿದೆ. ಮತ್ತೊಂದು ಕಡೆ ಗುಲಾಮ ಗಿರಿಯ ಸಂಕೇತ ಎಂದು ಹೇಳಲಾಗಿರುವ ನಾವಿಕ ಕ್ರಿಸ್ಟೋಫರ್ ಕೊಲಂಬಸ್, ಬ್ರಿಟಿಷ್ ಮಾಜಿ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಮತ್ತು ಬ್ರಿಟನ್ ನ ಗುಲಾಮರ ವ್ಯಾಪಾರಿ ಎಡ್ವರ್ಡ್ ಕೊನ್ಸ್ಟೋನ್ ಮುಂತಾದವರ ಪ್ರತಿಮೆಗಳನ್ನು ಅಮೆರಿಕ ಮತ್ತು ಇಂಗ್ಲೆಂಡ್ ನಲ್ಲಿ ಕಿತ್ತು ನದಿಗಳಿಗೆ ಎಸೆಯಲಾಗಿದೆ. ಕರಿಯರ ಈ ನಡೆ ಅವರಲ್ಲಿ ಈ ವರೆಗೆ ಮಡುಗಟ್ಟಿದ್ದ ಅಸಮಾಧಾನ ಸ್ಫೋಟಗೊಂಡಂತಾಗಿದೆ. ಈ ಪ್ರತಿಮೆಗಳು ಕೆಲವರಿಗೆ ಹೆಮ್ಮೆಯ ಸಂಕೇತವಾದರೆ, ಇನ್ನು ಕೆಲವರಿಗೆ ದಾಷ್ಟದ ಸಂಕೇತ. ಶತಶತಮಾನಗಳಿಂದ ತಮ್ಮ ಪೀಳಿಗೆಯನ್ನು ಕಾಡಿದವರ ಪ್ರತಿಮೆ ನಿರ್ಮಿಸಿ ಅವಮಾನಿಸಲಾಗುತ್ತಿದ್ದು, ಇದು ತಮಗೆ ಉಸಿರುಗಟ್ಟಿಸುವ ವಾತಾವರಣ ಅಲ್ಲದೆ ಮತ್ತೇನು ಎಂದು ಕರಿಯರು ಕಿಡಿ ಕಾರಿದ್ದಾರೆ. ಈ ಕಾರಣಕ್ಕಾಗಿಯೇ ಈ ಎಲ್ಲ ಪ್ರತಿಮೆಗಳು ಧರಾಶಾಯಿಯಾಗುತ್ತಿವೆ. ದ್ವೇಷ ಸಾರಿದ್ದ ನಾಯಕರ ಪ್ರತಿಮೆಗಳ ವಿರುದ್ಧ ಆಕ್ರೋಶ ಭುಗಿಲೆದ್ದಿರುವುದು ಇದು ಮೊದಲ ಭಾರೀ ಏನಲ್ಲ. ಈ ಹಿಂದೆಯೂ ಇಂತಹ ಪ್ರತಿಮೆಗಳು ನೆಲಕ್ಕುರುಳಿವೆ. ಜರ್ಮನಿಯಲ್ಲಿ ಹಿಟ್ಲರ್, ಸ್ಪೇನ್ ನಲ್ಲಿ ಫ್ರಾನ್ಸಿಸ್ಕೋ ಫ್ರಾಂಕೋ ಮತ್ತು ಉಕ್ರೇನ್ ನಲ್ಲಿ ಲೆನಿನ್ ಮುಂತಾದವರ ಎಲ್ಲ ರೀತಿಯ ಪಳೆಯುಳಿಕೆಗಳು ಧರಾಶಾಯಿಯಾಗಿವೆ.

ಜನಾಂಗೀಯ ಕಲಹದ ಇತಿಹಾಸ
ಅಮೆರಿಕದಲ್ಲಿ ಜನಾಂಗೀಯ ಕಲಹ ನಿನ್ನೆ ಮೊನ್ನೆಯದಲ್ಲ. ಇದಕ್ಕೊಂದು ಸುದೀರ್ಘವಾದ ಇತಿಹಾಸವೇ ಇದೆ. ಅಮೆರಿಕ 16ನೇ ಶತಮಾನದಲ್ಲಿ ಯೂರೋಪಿನ ವಸಹಾತು ಆಗಿದ್ದ ದಿನದಿಂದಲೇ ಜನಾಂಗೀಯ ದ್ವೇಷ ಹೆಡೆ ಎತ್ತಿದೆ. ಆ ಕಾಲದಲ್ಲಿಯೇ ಬಿಳಿಯರು ಮತ್ತು ಕರಿಯರ ನಡುವೆ ತಾರತಮ್ಯ ನಡೆಸಲಾಗುತ್ತಿತ್ತು. ಬಿಳಿಯರಿಗೆ ಕಾನೂನಾತ್ಮಕವಾಗಿ ಕೆಲವೊಂದು ಹಕ್ಕುಗಳನ್ನು ನೀಡಲಾಗಿದ್ದರೆ, ಇವುಗಳನ್ನು ಇತರ ಜನಾಂಗ ಮತ್ತು ಧರ್ಮದವರಿಗೆ ನಿರಾಕರಿಸಲಾಗಿತ್ತು.
 ಅಮೆರಿಕದ ಇತಿಹಾಸದುದ್ದಕ್ಕೂ ಯುರೋಪಿಯನ್ ಅಮೆರಿಕನ್ನರು ವಿಶೇಷವಾಗಿ ವೈಟ್ ಆಂಗ್ಲೋ ಸ್ಯಾಕ್ಸನ್ ಪ್ರೊಟೆಸ್ಟಂಟರು ಶಿಕ್ಷಣ, ವಲಸೆ, ಮತದಾನದ ಹಕ್ಕು, ಪೌರತ್ವ, ಭೂ ಖರೀದಿ ಮತ್ತು ಅಪರಾಧ ಕಾನೂನುಗಳಲ್ಲಿ ವಿಶೇಷ ಅಧಿಕಾರ ಹೊಂದಿದ್ದರು. ಯೂರೋಪ್‌ನ ಪ್ರೊಟೆಸ್ಟಂಟೇತರ ವಲಸಿಗರಾದ ಇಟಲಿ, ಪೋಲ್ಯಾಂಡ್ ಮತ್ತು ಐರ್‌ಲ್ಯಾಂಡ್ ಮೂಲದವರಿಗೆ ಇಂತಹ ಯಾವುದೇ ಅಧಿಕಾರ ಇರಲಿಲ್ಲ. ಯಹೂದ್ಯರು ಮತ್ತು ಅರಬರು ನಿರಂತರವಾಗಿ ಶೋಷಣೆ ಅನುಭವಿಸಿದ್ದು, ಇವರ ಬದುಕು ಕೂಡ ಯಾತನಾಮಯವಾಗಿತ್ತು. ಆಫ್ರಿಕ ಮೂಲದ ಕರಿಯರು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯದಿಂದ ವಂಚಿತರಾಗಿದ್ದರು. ಅಮೆರಿಕ ಮೂಲ ನಿವಾಸಿಗಳ ದಾರುಣ ಬದುಕಿನ ಕಥೆಯನ್ನು ಕೇಳುವುದೇ ಬೇಡ, ಕಂಡ ಕಂಡಲ್ಲಿ ಅವರ ಹತ್ಯಾಕಾಂಡ ನಡೆಸಲಾಗಿತ್ತು.

ಬಂಡವಾಳಶಾಹಿ ಜನಾಂಗೀಯ ದ್ವೇಷದ ಮೂಲ
16ನೇ ಶತಮಾನಕ್ಕಿಂತ ಮೊದಲು ಜನಾಂಗೀಯ ಭೇದ ಈ ಮಟ್ಟದಲ್ಲಿರಲಿಲ್ಲ. ಯುದ್ಧ ಗೆದ್ದ ರಾಜನು ಸೋತ ರಾಜ್ಯದ ಒಂದಷ್ಟು ಜನರನ್ನು ಗುಲಾಮರಾಗಿ ಇಟ್ಟುಕೊಳ್ಳುತ್ತಿದ್ದುದು ಆ ಕಾಲದಲ್ಲಿ ಸಾಮಾನ್ಯವಾಗಿತ್ತು. ಆದರೆ 16ನೇ ಶತಮಾನದಲ್ಲಿ ವಸಾಹತುಶಾಹಿ ಮತ್ತು ಬಂಡವಾಳಶಾಹಿಯ ಜೊತೆ ಜೊತೆಯಲ್ಲಿ ಗುಲಾಮ ಗಿರಿಯು ವ್ಯಾಪಕವಾಗಿ ಬೆಳೆಯುತ್ತಾ ಬಂತು. ಯೂರೋಪಿಯನ್ನರಿಗೆ ತಮ್ಮ ಬಳಿ ಇರುವ ಹಡಗು ಮತ್ತು ಬಂದೂಕಿನಂತಹ ಶ್ರೇಷ್ಠ ತಂತ್ರಜ್ಞಾನದಿಂದ ಏನನ್ನು ಬೇಕಾದರೂ ಸಾಧಿಸಬಹುದೆಂದು ತಿಳಿಯಿತೋ , ಅಂದಿನಿಂದ ಅವರು ಆಫ್ರಿಕದ ಸಂಪತ್ತನ್ನು ಲೂಟಿ ಮಾಡಲು ಶುರು ಹಚ್ಚಿದರು. ಅಲ್ಲದೆ ಇದರ ಜೊತೆಯಲ್ಲೇ ಗುಲಾಮರನ್ನು ತಮ್ಮ ವಸಾಹತುಗಳಿಗೆ ಕೊಂಡೊಯ್ಯಿಲು ಪ್ರಾರಂಭಿಸಿದರು. ಈ ರೀತಿ ಬರುಬರುತ್ತ ಗುಲಾಮ ಗಿರಿ ಎಂಬುದೊಂದು ಉದ್ಯಮವಾಗಿಯೇ ಬೆಳೆಯಿತು. ಇಂತಹ ಉದ್ಯಮದಲ್ಲಿ ತೊಡಗಿಕೊಂಡ ಯುರೋಪ್ ನ ಅಮೆರಿಕನ್ನರು ಬಿಳಿಯರು ಕರಿಯರಿಗಿಂತ ಶ್ರೇಷ್ಠ ಎಂಬ ವಾದವನ್ನು ಮುಂದಿಟ್ಟು, ಕರಿಯರನ್ನು ನಿಕೃಷ್ಟವಾಗಿ ನಡೆಸಿಕೊಂಡರು. ಈ ಮೂಲಕ ಅಮೆರಿಕದಲ್ಲಿ ಜನಾಂಗೀಯವಾದ ವ್ಯವಸ್ಥಿತವಾಗಿ ಬೆಳೆಯಲಾರಂಭಿಸಿತು.

Writer - ಗಿರೀಶ್ ಬಜ್ಪೆ

contributor

Editor - ಗಿರೀಶ್ ಬಜ್ಪೆ

contributor

Similar News