ಮುಂದುವರಿದ ಮಂಡ್ಯ ಜಿಪಂ ಅಧ್ಯಕ್ಷೆ-ಜೆಡಿಎಸ್ ಸದಸ್ಯರ ಸಂಘರ್ಷ: ಬಜೆಟ್ ಅಧಿವೇಶನ ಸೇರಿ ನಾಲ್ಕು ಸಭೆ ರದ್ದು

Update: 2020-06-24 18:10 GMT

ಮಂಡ್ಯ, ಜೂ.24: ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಆಡಳಿತಾರೂಢ ಜೆಡಿಎಸ್ ಸದಸ್ಯರ ನಡುವಿನ ಸಂಘರ್ಷ ಮುಂದುವರಿದಿದ್ದು, ಬುಧವಾರದ ಬಜೆಟ್ ಅಧಿವೇಶನ ಸೇರಿದಂತೆ ಸತತ ನಾಲ್ಕನೇ ಬಾರಿ ಸಾಮಾನ್ಯ ಸಭೆ ಕೋರಂ ಕೊರತೆ ಕಾರಣದಿಂದ ರದ್ದಾಗಿದೆ.

ಅಧ್ಯಕ್ಷೆ ನಾಗರತ್ನ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಕರೆದಿದ್ದ ಬಜೆಟ್ ಮಂಡನೆ ಸಭೆಗೆ ಆಡಳಿತಾರೂಢ ಜೆಡಿಎಸ್ ಸದಸ್ಯರು ಗೈರುಹಾಜರಾದರು. ಆದರೆ, ವಿಪಕ್ಷ ಕಾಂಗ್ರೆಸ್ ಸದಸ್ಯರ ಆಕ್ರೋಶದ ನಡುವೆ ಕೋರಂ ಅಭಾವದಿಂದ ಅಧ್ಯಕ್ಷರು ಸಭೆ ಮುಂದೂಡಿದರು.

ಅಧ್ಯಕ್ಷೆ ನಾಗರತ್ನ ಅವರ ರಾಜೀನಾಮೆಗೆ ಪಟ್ಟುಹಿಡಿದಿರುವ ಜೆಡಿಎಸ್ ಸದಸ್ಯರು ತಮ್ಮ ಪಟ್ಟನ್ನು ಬಿಗಿಗೊಳಿಸಿದ್ದು, ಸಾಮಾನ್ಯಸಭೆ ನಡೆಯುತ್ತಿಲ್ಲ. ನಾಲ್ಕನೇ ಸಭೆಗೆ ಕಾಂಗ್ರೆಸ್ ಸದಸ್ಯರು ಹಾಜರಿದ್ದರೂ ಅಗತ್ಯ ಕೋರಂ ಸಿಗಲಿಲ್ಲ. ಅಧ್ಯಕ್ಷೆ ನಾಗರತ್ನ ಸಭೆ ಮುಂದೂಡಿ ಹೊರನಡೆದರು.

ಪರಿಸ್ಥಿತಿಯಿಂದ ತೀವ್ರ ಅಸಮಾಧಾನಗೊಂಡ ಕಾಂಗ್ರೆಸ್ ಸದಸ್ಯರು, ನಿಮ್ಮ ವೈಯಕ್ತಿಕ ರಾಜಕಾರಣವನ್ನು ಹೊರಗಿಟ್ಟುಕೊಳ್ಳಿ. ಹೀಗೆ ಸಭೆಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಸದಸ್ಯರು ಅಧ್ಯಕ್ಷೆ ಹಾಗೂ ಜೆಡಿಎಸ್ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬದಲಾದ ರಾಜಕೀಯ ಹಿನ್ನೆಲೆಯಲ್ಲಿ ತನ್ನ ಪತಿ ಸ್ವಾಮಿ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವುದರಿಂದ ಜೆಡಿಎಸ್‍ನಿಂದ ಅಧ್ಯಕ್ಷರಾಗಿದ್ದ ನಾಗರತ್ನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಸದಸ್ಯರು ಪಟ್ಟುಹಿಡಿದಿದ್ದಾರೆ. ಆದರೆ, ಇದಕ್ಕೆ ಸೊಪ್ಪು ಹಾಕದ ನಾಗರತ್ನ ಅವರು ಕಾನೂನುಬದ್ದವಾಗಿ ಅಧ್ಯಕ್ಷೆಯಾಗಿದ್ದೇನೆ. ನನ್ನ ಪತಿ ರಾಜಕಾರಣಕ್ಕೂ ಇದಕ್ಕೂ ಸಂಬಂಧ ಇಲ್ಲ. ಹಾಗಾಗಿ ನಾನು ರಾಜೀನಾಮೆ ಕೊಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.

ಇದರ ಪರಿಣಾಮ ನಾಗರತ್ನ ಅವರ ಅಧ್ಯಕ್ಷತೆಯ ಸಾಮಾನ್ಯ ಸಭೆಗಳಿಗೆ ಜೆಡಿಎಸ್ ಸದಸ್ಯರು ಬಂದರೂ ಸಭೆಯಿಂದ ಹೊರಗುಳಿದು ಸಭೆ ನಡೆಯದಂತೆ ಮಾಡಿ ಪರೋಕ್ಷವಾಗಿ ಅಧ್ಯಕ್ಷರ ರಾಜೀನಾಮೆಗೆ ಒತ್ತಡ ತಂತ್ರ ಮುಂದುವರಿಸಿದ್ದಾರೆ.

ಅಧ್ಯಕ್ಷೆ ಹಾಗೂ ಜೆಡಿಎಸ್ ಸದಸ್ಯರ ಪ್ರತಿಷ್ಠೆಯಿಂದಾಗಿ ಜಿಲ್ಲಾ ಪಂಚಾಯತಿಗೆ ಬಂದಿರುವ ಅನುದಾನ ಬಳಕೆಗೆ ತೊಡಕುಂಟಾಗಿದೆ. ಬಜೆಟ್ ಅಧಿವೇಶನ ಸೇರಿದಂತೆ ಸತತ ನಾಲ್ಕು ಸಭೆ ರದ್ದಾಗಿರುವುದರಿಂದ ಅನುದಾನ ಸರಕಾರಕ್ಕೆ ವಾಪಸ್ ಹೋಗುವ ಭೀತಿ ಎದುರಾಗಿದೆ.

ಬುಧವಾರದ ನಾಲ್ಕನೇ ಸಭೆ ಅಧ್ಯಕ್ಷೆ ನಾಗರತ್ನ ಅವರ ಅಧ್ಯಕ್ಷತೆಯಲ್ಲಿ ಆರಂಭವಾಯಿತು. ಒಟ್ಟು 41 ಸದಸ್ಯರ ಪೈಕಿ ಕೋರಂಗೆ 29 ಸದಸ್ಯರು ಬೇಕಾಗಿತ್ತು. ಆದರೆ, ಹಾಜರಾಗಿದ್ದವರು 28 ಮಾತ್ರ. ಹಾಗಾಗಿ ಸಭೆ ನಡೆಯಲಿಲ್ಲ.

ಜೆಡಿಎಸ್ ಸದಸ್ಯರು ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ ಅವರ ಕಚೇರಿಯಲ್ಲಿ ಠಿಕಾಣಿ ಹೂಡಿದ್ದರು. ಸದಸ್ಯ ಎನ್.ಶಿವಣ್ಣ ಅವರ ಸಲಹೆ ಮೇರೆಗೆ ಅಧ್ಯಕ್ಷೆ ನಾಗರತ್ನ ಜೆಡಿಎಸ್ ಸದಸ್ಯರ ಬಳಿಗೆ ತೆರಳಿ ಸಭೆಗೆ ಬರುವಂತೆ ಮನವಿ ಮಾಡಿದರು. ಆದರೆ, ಜೆಡಿಎಸ್ ಸದಸ್ಯರು ಸಭೆಗೆ ಬರಲಿಲ್ಲ. 

ಅಧ್ಯಕ್ಷರದು ಸರ್ವಾದಿಕಾರಿ ಧೋರಣೆ: ಜೆಡಿಎಸ್ ಸದಸ್ಯರ ಆರೋಪ

ಅಧ್ಯಕ್ಷರು ಸದಸ್ಯರನ್ನು ಸಮಾನವಾಗಿ ಪರಿಗಣಿಸುತ್ತಿಲ್ಲ. ಸ್ಥಾಯಿ ಸಮಿತಿ ಸಭೆಯನ್ನೂ ಕಡೆಗಣಿಸಿದ್ದಾರೆ. ತಾವೇ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ. ಅವರ ವರ್ತನೆಯಿಂದ ಬೇಸರವಾಗಿ ಸಭೆಗೆ ಹೋಗುತ್ತಿಲ್ಲ ಎಂದು ಜೆಡಿಎಸ್ ಸದಸ್ಯರು ಆರೋಪಿಸಿದರು.

ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಒಗ್ಗಟ್ಟಾಗಿದ್ದೇವೆ. ಆದರೆ, ಅಧ್ಯಕ್ಷರು ಸರಕಾರದ ಅನುದಾನವನ್ನು ತಮಗಿಷ್ಟ ಬಂದವರಿಗೆ ಮನಬಂದಂತೆ ಹಂಚಿಕೆ ಮಾಡಿ ಸದಸ್ಯರಲ್ಲಿ ಒಡಕು ಉಂಟುಮಾಡುವ ಯತ್ನ ನಡೆಸುತ್ತಿದ್ದಾರೆ ಎಂದು ಸದಸ್ಯ ಅಶೋಕ್ ದೂರಿದರು.

ಅಧ್ಯಕ್ಷೆಯಾಗಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಕೋರಂ ಇದೆ ಸಭೆಗೆ ಬನ್ನಿ ಎಂದು ನಮ್ಮನ್ನು ಕಾಟಾಚಾರದ ರೀತಿ ಆಹ್ವಾನಿಸಿದರು. ಕೋರಂ ಇದ್ದಮೇಲೆ ನಮ್ಮನ್ನು ಕರೆಯುವ ಅವಶ್ಯಕತೆ ಏನಿದೆ ಎಂದು ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ ಪ್ರಶ್ನಿಸಿದರು.

ಅಧ್ಯಕ್ಷರಿಗೆ ನಮ್ಮಗಳ ಬಗ್ಗೆ ಸೌಜನ್ಯವೇ ಇಲ್ಲ. ಸಭೆಗೆ ಬಂದರೂ ಹೊರಗುಳಿಯುತ್ತಿದ್ದೇವೆ. ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸದಸ್ಯರೆಲ್ಲಾ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸದಸ್ಯ ಎಚ್.ಎನ್.ಯೋಗೇಶ್ ಪ್ರತಿಕ್ರಿಯಿಸಿದರು.

ಅವರದೇ ಸರ್ವಾಧಿಕಾರಿ ಧೋರಣೆ: ಅಧ್ಯಕ್ಷೆ ನಾಗರತ್ನ ತಿರುಗೇಟು

ನಾನು ಸರ್ವಾಧಿಕಾರಿಯಂತೆ ವರ್ತಿಸುತ್ತಿಲ್ಲ. ಸಭೆಯ ನೊಟೀಸ್ ಕೊಡಲಾಗಿದೆ. ನಾನೂ ಖುದ್ದಾಗಿ ದೂರವಾಣಿ ಕರೆ ಮಾಡಿದ್ದೇನೆ. ಕುಳಿತಲ್ಲಿಗೆ ಹೋಗಿ ಮನವಿ ಮಾಡಿದ್ದೇನೆ. ಆದರೂ, ಸಭೆಗೆ ಬರಲಿಲ್ಲ. ಹಾಗಾಗಿ ಅವರದೇ ಸರ್ವಾಧಿಕಾರಿ ಧೋರಣೆ ಎಂದು ಅಧ್ಯಕ್ಷೆ ನಾಗರತ್ನ ಸ್ವಾಮಿ ತಿರುಗೇಟು ನೀಡಿದರು.

ಬಜೆಟ್ ಮಂಡಿಸಿಯೇ ಇಲ್ಲದ ಮೇಲೆ ಅನುದಾನ ಹಂಚಿಕೆ ತಾರತಮ್ಯ ಎಲ್ಲಿ ಬರುತ್ತದೆ? ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಸಹಿ ಹಾಕದ ಕಾರಣ ನನ್ನ ವಿವೇಚಾಧಿಕಾರದಿಂದ ಕೆಲವು ಕಾಮಗಾರಿಗಳ ಪಟ್ಟಿಗೆ ಸಹಿ ಹಾಕಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.

ರಾಜಕಾರಣವಿದ್ದರೆ ಹೊರಗೆ ಮಾಡಬೇಕು ಸಭೆಯಲಲ್ಲ. ಸಭೆಗೆ ಹಾಜರಾಗಿ ತಮ್ಮನ್ನು ಗೆಲ್ಲಿಸಿದ ಜನರ ಕುಂದುಕೊರತೆ ಕೇಳಬೇಕು. ಆದರೆ, ಅವರು ಆ ಜವಾಭ್ಧಾರಿ ಮರೆತಿದ್ದಾರೆ. ಸತತ ನಾಲ್ಕುಬಾರಿ ಸಭೆ ರದ್ದಾಗಿದೆ. ಈ ಬಗ್ಗೆ ಸರಕಾರಕ್ಕೆ ಬರೆಯುತ್ತೇನೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯತ್ವ ಉಳಿವಿಗೆ ಜೆಡಿಎಸ್ ತಂತ್ರ!
ಪಂಚಾಯತ್ ರಾಜ್ ಅಧಿನಿಯಮದನ್ವಯ ಸತತ ಮೂರು ಸಭೆಗೆ ಗೈರಾದರೆ ಸದಸ್ಯತ್ವ ರದ್ದಾಗುವ ಭಯವಿದೆ. ಹೀಗಾಗಿ ಕೋರಂ ಅಭಾವ ಸೃಷ್ಟಿ ಮಾಡುವುದರ ಜೊತೆಗೆ ಸಭೆ ನಡೆಯದಂತೆ ನೋಡಿಕೊಳ್ಳುವ ತಂತ್ರವನ್ನು ಜೆಡಿಎಸ್ ಸದಸ್ಯರು ರೂಪಿಸಿದ್ದಾರೆ.

ಆ ತಂತ್ರವೆಂದರೆ, ಒಂದೊಂದು ಸಭೆಗೆ ಕೆಲವು ಸದಸ್ಯರು ಮಾತ್ರ ಹಾಜರಾಗಿ ಉಳಿದವರು ಗೈರಾಗುವುದು. ಮತ್ತೊಂದು ಸಭೆಗೆ ಹಿಂದಿನ ಸಭೆಗೆ ಗೈರಾಗಿದ್ದವರು ಹಾಜರಾಗಿ, ಹಾಜರಾಗಿದ್ದವರು ಗೈರಾಗುವುದು. ಹೀಗೆ ಸಭೆಗೆ ಬಂದಂತೆಯೂ ಆಗಬೇಕು. ಕೋರಂ ಅಭಾವ ಸೃಷ್ಟಿಸಿಯಾಗಿ ಸಭೆಯೂ ನಡೆಯಬಾರದು ಎಂಬ ತಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News