ಬಿಎಸ್‌ವೈ ನಿವಾಸದ ಮುಂದೆ ಸತ್ಯಾಗ್ರಹದ ಎಚ್ಚರಿಕೆ ನೀಡಿದ ದೇವೇಗೌಡ: ಕಾರಣ ಏನು ಗೊತ್ತೇ ?

Update: 2020-06-25 12:12 GMT

ಬೆಂಗಳೂರು, ಜೂ. 25: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ವೈಷಮ್ಯದ ರಾಜಕಾರಣ ನಿಲ್ಲಿಸದಿದ್ದರೆ ಜೂ.29ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರ ನಿವಾಸದ ಮುಂದೆ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಕೆ.ಆರ್.ಪೇಟೆಯಲ್ಲಿ ವೈಷಮ್ಯದ ರಾಜಕಾರಣ ನಡೆಯುತ್ತಿದೆ. ನನ್ನ ಸುದೀರ್ಘ 60 ವರ್ಷಗಳ ರಾಜಕಾರಣದಲ್ಲಿ ಎಂದೂ ಕಂಡಿಲ್ಲದ ಕೆಟ್ಟ ವಾತಾವರಣ ತಾಲೂಕಿನಲ್ಲಿ ನಿರ್ಮಾಣವಾಗಿದೆ. ನನ್ನ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತ ಎಚ್.ಟಿ.ಮಂಜು ಎಂಬವರ ಮೇಲೆ ಅಲ್ಲಿನ ಸಚಿವರು ಚುನಾವಣೆಯ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ದೇವೇಗೌಡರು ದೂರಿದ್ದಾರೆ.

ಮಂಜು ಅವರ ಸ್ಟೋನ್ ಕ್ರಷರ್ ಮತ್ತು ಕ್ವಾರೆ ಮೈನಿಂಗ್ ಮಾಡಲು ಸರಕಾರದ ಸಂಬಂಧಪಟ್ಟ ಎಲ್ಲ ಇಲಾಖೆಗಳಿಂದ ಅನುಮತಿ ಪಡೆದುಕೊಂಡಿದ್ದರೂ ಸ್ಥಳೀಯ ರಾಜಕಾರಣದಿಂದ ಅವರು ವ್ಯವಹಾರ ನಡೆಸಲು ಬಿಡುತ್ತಿಲ್ಲ. ಕಾನೂನು ಬದ್ಧವಾಗಿ ಮಂಜು ಅವರ ವ್ಯವಹಾರ ನಡೆಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು ಎಂದು ವಿನಂತಿಸಿಕೊಂಡಿದ್ದೇನೆ. ಸರಕಾರ ಇದರ ಬಗ್ಗೆ ಪಾರದರ್ಶಕತೆ ತೋರಿಸದೆ ಹೋದರೆ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ದೇವೇಗೌಡರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News