ಕರ್ನಾಟಕ ವಿಧಾನ ಪರಿಷತ್: ತೆರವಾಗಲಿರುವ ಐದು ಸ್ಥಾನಗಳಿಗೆ ಆಯ್ಕೆಯಾಗುವವರು ಯಾರು?

Update: 2020-06-25 14:21 GMT
ರಹೀಂ ಉಚ್ಚಿಲ್,   ಅನ್ವರ್ ಮಾಣಿಪ್ಪಾಡಿ

ಈಗಾಗಲೇ ರಾಜ್ಯ ವಿಧಾನ ಪರಿಷತ್ ನಲ್ಲಿ 5 ಸ್ಥಾನಗಳು ತೆರವಾಗಲಿದ್ದು, ಈ 5 ಸ್ಥಾನಗಳಿಗೆ ಆಯ್ಕೆಯಾಗಲಿರುವವರು ಯಾರು ಎನ್ನುವ ಪ್ರಶ್ನೆ ಕುತೂಹಲ ಸೃಷ್ಟಿಸಿದೆ. ಡಾ. ಜಯಮಾಲ, ಐವನ್ ಡಿಸೋಜ, ಅಬ್ದುಲ್ ಜಬ್ಬಾರ್, ತಿಪ್ಪಣ್ಣ ಕಮಕನೂರ್, ಇಕ್ಬಾಲ್ ಅಹ್ಮದ್ ಸರಡಗಿಯವರ ಸ್ಥಾನಗಳು ತೆರವಾಗಲಿವೆ.

ಒಂದೆಡೆ ಆಕಾಂಕ್ಷಿಗಳು, ಮತ್ತೊಂದೆಡೆ ಬಿಜೆಪಿ ನಿಷ್ಠರ ನಡುವೆ ಆಯ್ಕೆಯಾಗಲಿರುವವರ ಯಾರು ಎನ್ನುವ ಪ್ರಶ್ನೆಯ ಜೊತೆಗೆ ಹಿರಿಯ ಸಾಹಿತಿ ಎಸ್. ಎಲ್. ಬೈರಪ್ಪ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ, ಬಿಜೆಪಿ ನಾಯಕ ಜಗ್ಗೇಶ್, ಮಾಳವಿಕಾ ಅವರ ಹೆಸರುಗಳು ಮುಂಚೂಣಿಯಲ್ಲಿದೆ. ಇವರ ಜೊತೆ ಬಿಜೆಪಿಯ ಅಲ್ಪಸಂಖ್ಯಾತ ಘಟಕಗಳ ನಾಯಕರಾದ ರಹೀಂ ಉಚ್ಚಿಲ್, ಅನ್ವರ್ ಮಾಣಿಪ್ಪಾಡಿಯವರ ಹೆಸರು ಕೂಡಾ ಆಕಾಂಕ್ಷಿಗಳ ಸಾಲಿನಲ್ಲಿದೆ.

ಎಸ್.ಎಲ್. ಬೈರಪ್ಪನವರು ಈ ಸ್ಥಾನವನ್ನು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ವಿಶ್ವನಾಥ್ ಅವರ ಹೆಸರು ಕೇಳಿಬರುತ್ತಿದೆ.

ಇದೀಗ ಮೂವರು ಅಲ್ಪಸಂಖ್ಯಾತ ಸದಸ್ಯರ ಅವಧಿ ಮುಕ್ತಾಯವಾಗಿದ್ದು, ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಕನಿಷ್ಟ ಒಬ್ಬರಿಗಾದರೂ ಅವಕಾಶ ನೀಡಬೇಕು ಎಂಬ ಆಗ್ರಹ ಬಿಜೆಪಿಯೊಳಗೆ ಕೇಳಿಬರುತ್ತಿದೆ ಎನ್ನಲಾಗಿದೆ.

ಒಂದು ವೇಳೆ ಅಲ್ಪಸಂಖ್ಯಾತರಿಗೆ ಅವಕಾಶ ನೀಡಿದ್ದಲ್ಲಿ ಅನ್ವರ್ ಮಾಣಿಪ್ಪಾಡಿ ಅಥವಾ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ರಹೀಂ ಉಚ್ಚಿಲ್ ರಲ್ಲಿ ಒಬ್ಬರಿಗೆ ಒಂದು ಸ್ಥಾನ ದೊರಕುವ ಸಾಧ್ಯತೆಯಿದೆ. ಆದರೆ ಈ ಕುರಿತ ರಾಜ್ಯ ಸರಕಾರದ ನಿರ್ಧಾರದ ಬಳಿಕವೇ ಸ್ಪಷ್ಟ ಚಿತ್ರಣ ಲಭಿಸಲಿದೆ. ಆದರೆ ಆರೆಸ್ಸೆಸ್ ನಿಷ್ಠರು, ಬಿಜೆಪಿಯ ಹಿರಿಯ ನಾಯಕರು ಮತ್ತು ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸೇರ್ಪಡೆಗೊಂಡವರ ದೊಡ್ಡ ಪಟ್ಟಿಯೇ ಇರುವಾಗ ಅಲ್ಪಸಂಖ್ಯಾತ ಸಮುದಾಯದಿಂದ ಈ ಇಬ್ಬರಲ್ಲಿ ಒಬ್ಬರಿಗೆ ಸ್ಥಾನ ಸಿಗುವುದೇ ಸಾಧ್ಯವೇ ಎನ್ನುವ ಪ್ರಶ್ನೆಯೂ ಇದೆ.

ಈ ಎಲ್ಲಾ ಸ್ಥಾನಗಳು ರಾಜಕೀಯೇತರ ಕ್ಷೇತ್ರಗಳ ಸಾಧಕರಿಗೆ ಎಂದು ನಿರ್ಧಾರವಾದರೂ ಬ್ಯಾರಿ ಕಲೆ, ಸಾಹಿತ್ಯ ಕ್ಷೇತ್ರದಲ್ಲಿರುವ ಸಕ್ರಿಯವಾಗಿರುವ ಹಾಗು ಬ್ಯಾರಿ ಅಕಾಡಮಿಯ ಅಧ್ಯಕ್ಷರಾಗಿರುವ ರಹೀಂ ಉಚ್ಚಿಲ್ ಅವರು ಈ ಕೋಟಾದಲ್ಲೂ ಪ್ರಯತ್ನಿಸುವ ಸಾಧ್ಯತೆಯಿದೆ.

“ನಾನು ಯಾವುದೇ ಸ್ಥಾನಕ್ಕೂ ಅರ್ಜಿ ಹಾಕಿಲ್ಲ. ಪ್ರಭಾವವನ್ನೂ ಬಳಸಿಲ್ಲ. ಈಗಾಗಲೇ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸುವ ಅಚ್ಚರಿಯ ಆಯ್ಕೆಗಳು ಬಿಜೆಪಿಯಿಂದ ನಡೆದಿದೆ. ಅಲ್ಪಸಂಖ್ಯಾತರಿಗೆ ಅವಕಾಶ ಇದ್ದರೆ ಖಂಡಿತಾ ಪಕ್ಷ ನನ್ನ ಸೇವೆಯನ್ನು ಪರಿಗಣಿಸಿ ಈ ಅವಕಾಶ ನೀಡಬಹುದು. ಪಕ್ಷ ಯಾವ ಜವಾಬ್ದಾರಿಯನ್ನು ನೀಡಿದರೂ ಪ್ರಾಮಾಣಿಕ ಹಾಗೂ ಸಮರ್ಥವಾಗಿ ನಿಭಾಯಿಸುತ್ತೇನೆ" ಎಂದು ‘ವಾರ್ತಾಭಾರತಿ’ಗೆ ರಹೀಂ ಉಚ್ಚಿಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News