ಕೋವಿಡ್ 19: ರಾಜ್ಯದಲ್ಲಿ ಒಂದೇ ದಿನ 442 ಮಂದಿಗೆ ಪಾಸಿಟಿವ್, 519 ಮಂದಿ ಗುಣಮುಖ

Update: 2020-06-25 13:57 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.25: ಕರ್ನಾಟಕದಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ವ್ಯಾಪಕ ಹೆಚ್ಚಳವಾಗುತ್ತಿದೆ. ಸೋಂಕಿತರು ಸಾವನ್ನಪ್ಪುತ್ತಿರುವ ಪ್ರಕರಣದಲ್ಲೂ ಏರಿಕೆಯಾಗುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. 

ಇಂದು ಒಂದೇ ದಿನ ಮತ್ತೆ 442 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 10,560 ಕ್ಕೆ ಏರಿಕೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೂರು, ಮೈಸೂರು, ದಕ್ಷಿಣ ಕನ್ನಡ ಮತ್ತು ಕಲಬುರಗಿಯಲ್ಲಿ ತಲಾ ಒಂದು ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 170ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ಬುಧವಾರ ಸಂಜೆ 5 ಗಂಟೆಯಿಂದ ಗುರುವಾರ ಸಂಜೆ 5 ಗಂಟೆವರೆಗೆ 6 ಸಾವು, 442 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಂದೇ ದಿನ ಮೂವರು ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯ 80 ವರ್ಷದ ವೃದ್ಧೆ, 60 ವರ್ಷದ ಮಹಿಳೆ ಮತ್ತು 38 ವರ್ಷದ ವ್ಯಕ್ತಿಯೊಬ್ಬರು ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ 68 ವರ್ಷದ ಮಹಿಳೆಯೊಬ್ಬರು ಜೂ.22ರಂದು ಆಸ್ಪತ್ರೆಗೆ ದಾಖಲಾಗಿದ್ದು, ಜೂ.24ರಂದು ಮೃತಪಟ್ಟಿದ್ದಾರೆ. ಮೈಸೂರಿನ 87 ವರ್ಷದ ವೃದ್ಧ ಹಾಗೂ ಕಲಬುರಗಿ ಜಿಲ್ಲೆಯ 61 ವರ್ಷದ ವ್ಯಕ್ತಿಯೊಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 113, ಕಲಬುರಗಿ 35, ರಾಮನಗರ 33, ದಕ್ಷಿಣ ಕನ್ನಡ 29, ಧಾರವಾಡ 26, ಬಳ್ಳಾರಿ 26, ಮೈಸೂರು 22, ಬಾಗಲಕೋಟೆ 18, ಕೊಡಗು 18, ಉಡುಪಿ 14, ಹಾಸನ 12, ಬೆಂಗಳೂರು ಗ್ರಾಮಾಂತರ 12, ಉತ್ತರ ಕನ್ನಡ 11, ಗದಗ 10, ವಿಜಯಪುರ 10, ಹಾವೇರಿ 10, ಮಂಡ್ಯ 9, ಬೀದರ್ 8, ದಾವಣಗೆರೆ 7, ಶಿವಮೊಗ್ಗ 4, ಬೆಳಗಾವಿ 4, ಕೋಲಾರ 4, ಯಾದಗಿರಿ 2, ಚಿಕ್ಕಬಳ್ಳಾಪುರ 2, ಚಾಮರಾಜನಗರ, ಚಿಕ್ಕಮಗಳೂರು ಮತ್ತು ತುಮಕೂರು ಜಿಲ್ಲೆಯಲ್ಲಿ ತಲಾ 1 ಪ್ರಕರಣ ಪಾಸಿಟಿವ್ ಬಂದಿದೆ.

ಒಟ್ಟಾರೆ ರಾಜ್ಯದಲ್ಲಿ 10,560 ಕೊರೋನ ಸೋಂಕಿತರ ಪೈಕಿ 6,670 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 519 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 170 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 3,716 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News