ಪಾಂಡವಪುರ ಸಕ್ಕರೆ ಕಾರ್ಖಾನೆ ನಿರಾಣಿ ಶುಗರ್ಸ್ ಗೆ ಗುತ್ತಿಗೆ: ಸಚಿವ ಸಂಪುಟ ಒಪ್ಪಿಗೆ

Update: 2020-06-25 14:00 GMT

ವಸತಿ ಯೋಜನೆ: ಬಾಕಿ ಉಳಿದ ಮನೆಗಳ ಪೂರ್ಣಕ್ಕೆ 10,194 ಕೋಟಿ ರೂ. ಬಿಡುಗಡೆಗೆ ಸಂಪುಟ ಅಸ್ತು

ಬೆಂಗಳೂರು, ಜೂ. 25: ರಾಜ್ಯದಲ್ಲಿ ಅಂಬೇಡ್ಕರ್ ವಸತಿ ಯೋಜನೆ ಸೇರಿ ವಿವಿಧ ವಸತಿ ಯೋಜನೆಗಳಡಿಯಲ್ಲಿ ಬಾಕಿ ಉಳಿದಿರುವ ಮನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು 10,194 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿದ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಲವು ವರ್ಷಗಳಿಂದ ವಸತಿ ಯೋಜನೆಗಳಲ್ಲಿ ಕೆಲ ಏರುಪೇರಾಗಿದೆ. ಹೀಗಾಗಿ ಸುಮಾರು 18 ಲಕ್ಷ ಮನೆಗಳ ಪೈಕಿ 9.74 ಲಕ್ಷ ಮನೆಗಳು ಬಾಕಿ ಉಳಿದಿವೆ ಎಂದರು.

ಬಾಕಿ ಉಳಿದಿರುವ ಒಟ್ಟು 9.74 ಲಕ್ಷ ಮನೆಗಳನ್ನು ಶೀಘ್ರವೇ ಪೂರ್ಣಗೊಳಿಸಲು 10,194 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಅಂಬೇಡ್ಕರ್ ವಸತಿ ಯೋಜನೆ ಸಹಿತ ವಿವಿಧ ವಸತಿ ಯೋಜನೆಗಳಡಿಯಲ್ಲಿ ಬಾಕಿ ಉಳಿದಿರುವ ಮನೆಗಳನ್ನು ಶೀಘ್ರವೇ ಪೂರ್ಣಗೊಳಿಸಿ ಫಲಾನುಭವಿಗಳಿಗೆ ನೀಡಲಾಗುವುದು ಎಂದರು.

ಪದ್ಮಶ್ರೀಗೆ ಸಿಎಸ್ ಅಧ್ಯಕ್ಷತೆಯಲ್ಲಿ ಸಮಿತಿ: ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡುವ ಪ್ರತಿಷ್ಠಿತ 'ಪದ್ಮಶ್ರೀ' ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಸಂಪುಟ ಒಪ್ಪಿಗೆ ನೀಡಿದೆ. ಈ ಸಮಿತಿ ವರದಿಯನ್ನು ಆಧರಿಸಿ ಸಚಿವ ಸಂಪುಟ ಉಪ ಸಮಿತಿಗೆ ಹೆಸರುಗಳನ್ನು ಶಿಫಾರಸ್ಸು ಮಾಡಲಾಗುವುದು ಎಂದು ವಿವರಿಸಿದರು.

ಕಾಯ್ದೆಗೆ ತಿದ್ದುಪಡಿ: ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಶಾಸಕರು ಮತ್ತು ಸಚಿವರ ಶೇ.30ರಷ್ಟು ವೇತನ ಕಡಿತಕ್ಕೆ ತೀರ್ಮಾನಿಸಲಾಗಿದ್ದು, ಮುಂದಿನ ಅಧಿವೇಶನದಲ್ಲಿ ಈ ಸಂಬಂಧ ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಜೆ.ಸಿ.ಮಾಧುಸ್ವಾಮಿ ಇದೇ ಸಂದರ್ಭದಲ್ಲಿ ವಿವರ ನೀಡಿದರು.

ತಿರುಪತಿ ತಿರುಮಲದಲ್ಲಿ ಟಿಟಿಡಿ ಸಹಯೋಗದಲ್ಲಿ 200 ಕೋಟಿ ರೂ.ವೆಚ್ಚದಲ್ಲಿ 7.5 ಎಕರೆ ಪ್ರದೇಶದಲ್ಲಿ ಯಾತ್ರಿ ನಿವಾಸ, ಛತ್ರ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಂಪುಟ ಸಮ್ಮತಿಸಿದೆ. ಖಾಸಗಿ ಸಹಭಾಗಿತ್ವದಲ್ಲಿ 15,767 ಕೋಟಿ ರೂ.ವೆಚ್ಚದಲ್ಲಿ ಬೆಂಗಳೂರು ಉಪನಗರ ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ನೀಡಲಾಗಿದೆ ಎಂದರು.

ಪಾಂಡವಪುರ ಸಕ್ಕರೆ ಕಾರ್ಖಾನೆ ನಿರಾಣಿ ವಶಕ್ಕೆ: ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಶುಗರ್ಸ್ ಲಿಮಿಟೆಡ್‍ಗೆ 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಸಮ್ಮತಿಸಿದೆ. ಕಾರ್ಖಾನೆ ಗುತ್ತಿಗೆ ಪಡೆಯಲು ನಿರಾಣಿ ಶುಗರ್ಸ್ ಲಿ. 405 ಕೋಟಿ ರೂ.ಗಳ ಬಿಡ್ ಕರೆದಿದ್ದು, ಅಂತಿಮಗೊಂಡ ಹಿನ್ನೆಲೆಯಲ್ಲಿ ಕಾರ್ಖಾನೆ ಗುತ್ತಿಗೆ ನೀಡಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.

ವಿವಿಧ ವಸತಿ ಯೋಜನೆಗಳಡಿಯಲ್ಲಿ ಬಾಕಿ ಉಳಿದಿರುವ ಒಟ್ಟು 9.74 ಲಕ್ಷ ಮನೆಗಳನ್ನು ಶೀಘ್ರವೇ ಪೂರ್ಣಗೊಳಿಸಲು 10,194 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಹೀಗಾಗಿ ರಾಜ್ಯದಲ್ಲಿ ವಸತಿ ಯೋಜನೆಗಳಲ್ಲಿಯಲ್ಲಿ ಹೊಸ ಮನೆಗಳ ನಿರ್ಮಾಣ ಕಾರ್ಯಕ್ಕೆ ಸದ್ಯಕ್ಕೆ ಅನುಮತಿ ನೀಡುವುದಿಲ್ಲ

-ಜೆ.ಸಿ.ಮಾಧುಸ್ವಾಮಿ, ಕಾನೂನು ಸಚಿವ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News