ಚೀನಿ ಸೈನಿಕರ ಜಮಾವಣೆ ಹಿನ್ನೆಲೆ: ಎಲ್‌ಎಸಿಗೆ ಹೆಚ್ಚುವರಿ ಭಾರತೀಯ ಸೈನಿಕರ ರವಾನೆ

Update: 2020-06-25 14:44 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜೂ.25: ಭಾರತ ಹಾಗೂ ಚೀನಾ ಸೈನಿಕರ ನಡುವೆ ಜೂನ್ 15 ರಂದು ಭೀಕರ ಸಂಘರ್ಷಕ್ಕೆ ಸಾಕ್ಷಿಯಾದ ಗಲ್ವಾನ್ ಕಣಿವೆ ಸಮೀಪದ ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಚೀನಾವು ಸೇನಾ ಜಮಾವಣೆಯನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ ಅಲ್ಲಿನ 3488 ಕಿ.ಮೀ. ವಿಸ್ತೀರ್ಣದ ತನ್ನ ಗಡಿಯುದ್ದಕ್ಕೂ ತನ್ನ ಸೈನಿಕ ಬಲವನ್ನು ಹೆಚ್ಚಿಸಲು ಭಾರತ ನಿರ್ಧರಿಸಿದೆ.

ಭಾರತೀಯ ಸೇನೆ ಮಾತ್ರವಲ್ಲದೆ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆ (ಐಟಿಬಿಪಿ)ಕೂಡಾ ತನ್ನ ಠಾಣೆಗಳಲ್ಲಿ ಸಿಬ್ಬಂದಿ ಹಾಗೂ ಸಾಮಗ್ರಿಗಳನ್ನು ಹೆಚ್ಚಿಸಿಕೊಂಡಿದೆ.

  ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ ಲೆ.ಜ. ಪರಮ್‌ಜಿತ್ ಸಿಂಗ್ ಹಾಗೂ ಐಟಿಬಿಪಿ ವರಿಷ್ಠ ಎಸ್.ಎಸ್.ದೇವಾಲ್ ಅವರು ಲೇಹ್‌ಗೆ ಭೇಟಿ ನೀಡಿದ ಬಳಿಕ, ಹೆಚ್ಚಿನ ಸಂಖ್ಯೆಯ ಐಟಿಬಿಪಿ ಯೋಧರ ತುಕಡಿಗಳನ್ನು ನಿಯೋಜಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

  ‘‘ಜೂನ್ 15ರ ಘಟನೆಗೆ ಮುನ್ನ ನಾವು ಕೆಲವು ಪಡೆಗಳನ್ನು ಲಡಾಖ್‌ ಗೆ ಕಳುಹಿಸಿದ್ದೆವು ಹಾಗೂ ಇದೀಗ ಯೋಧರ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ’’ ಎಂದು ಕೇಂದ್ರ ಸರಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿ ದ್ದಾರೆ.

    ಎಲ್‌ಎಸಿ ಸಮೀಪದ ಎಲ್ಲಾ ಗಸ್ತು ಠಾಣೆಗಳಲ್ಲಿ ಸೇನೆಗೆ ನೆರವಾಗಲು ಪ್ಲಟೂನ್ ಬದಲಿಗೆ ಐಟಿಬಿಪಿ ಯೋಧರ ತುಕಡಿಯನ್ನು ನಿಯೋಜಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ. ಸಾಮಾನ್ಯವಾಗಿ ಒಂದು ಪ್ಲಟೂನ್‌ನಲ್ಲಿ 30 ಮಂದಿ ಐಟಿಬಿಪಿ ಯೋಧರಿದ್ದರೆ, ತುಕಡಿಯಲ್ಲಿ 100 ಸೈನಿಕರಿರುತ್ತಾರೆ.

      

ಎಲ್‌ಎಸಿಯಿಂದ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಸೋಮವಾರ ನಡೆದ ಭಾರತ ಹಾಗೂ ಚೀನಾ ಸೇನೆಗಳ ಕಮಾಂಡರ್ ಮಟ್ಟದ ಸಭೆಯಲ್ಲಿ ತೀರ್ಮಾನಿಸಿದ ಹೊರತಾಗಿಯೂ, ಗಲ್ವಾನ್ ಕಣಿವೆ, ಹಾಟ್ ಸ್ಪ್ರಿಂಗ್ಸ್ ಹಾಗೂ ಪ್ಯಾಂಗೊಂಗ್ ಲೇಕ್ ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದೆಯೆಂದು ಮೂಲಗಳು ತಿಳಿಸಿವೆ. ಗಲ್ವಾನ್ ಹಾಗೂ ಗೋಗ್ರಾದ 14,15 ಹಾಗೂ 17 ಗಸ್ತು ಠಾಣೆಗಳಲ್ಲಿ ಸೈನಿಕರನ್ನು ಸಂಖ್ಯೆ ಕಡಿಮೆಗೊಳಿಸಲು ಇತ್ತಂಡಗಳು ಬಯಸಿವೆಯೆಂದು ಮೂಲಗಳು ತಿಳಿಸಿದ್ದರು. ಪ್ಯಾಟ್ರೋಲ್ ಪಾಯಿಂಟ್

ಎರಡೂ ದೇಶಗಳ ಸೈನಿಕರ ಜಮಾವಣೆ

  ಗಲ್ವಾನ್‌ನಲ್ಲಿ ಪ್ಯಾಟ್ರೋಲ್ (ಗಸ್ತು) ಪಾಯಿಂಟ್ 14ರಲ್ಲಿ ಚೀನಾವು ಒಡ್ಡೊಂದನ್ನು ಕಟ್ಟಿರುವುದನ್ನು ಎನ್‌ಡಿಟಿವಿ ಬುಧವಾರ ಪ್ರಕಟಿಸಿದ ಉಪಗ್ರಹ ಚಿತ್ರಗಳಿಂದ ಪತ್ತೆಯಾಗಿದೆ.

 ಪ್ಯಾಟ್ರೊಲಿಂಗ್ ಪಾಯಿಂಟ್ 15ರಲ್ಲಿಯೂ ಚೀನಿಯರು ದೊಡ್ಡ ಗಾತ್ರದ ಡೇರೆಗಳನ್ನು ಸ್ಥಾಪಿಸಿರುವುದು ಕಂಡುಬಂದಿದೆ. ಗಸ್ತು ಪಾಯಿಂಟ್ 17ರಲ್ಲಿ ಎರಡೂ ಕಡೆಗಳಲ್ಲಿ ಸೈನಿಕರು ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡಿರುವುದಾಗಿ ತಿಳಿದುಬಂದಿದೆ.

‘‘ಪಿಎಲ್‌ಎ ಸೇನೆಯು ಅವರು ಗ್ರಹಿಸಿಕೊಡಿರುವ ಎಲ್‌ಎಸಿ ಪಾಯಿಂಟ್ ತನಕ ಬಂದಿದ್ದಾರೆ ಹಾಗೂ ಬೃಹತ್ ರಚನೆಗಳನ್ನು ಸ್ಥಾಪಿಸಿದ್ದಾರೆ. ಹೀಗಾಗಿ ಭಾರತ ಕೂಡಾ ಸಿಬ್ಬಂದಿ ಹಾಗೂ ಮೂಲಸೌಕರ್ಯಗಳನ್ನು ಕೂಡಾ ಹೆಚ್ಚಿಸಿ ಕೊಂಡಿದ್ದೇವೆಯೆಂದು ಭಾರತದ ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲ್‌ಎಸಿಯಲ್ಲಿ ಎಪ್ರಿಲ್ 20, 2020ರಲ್ಲಿದ್ದ ಯಥಾಸ್ಥಿತಿ ಮುಂದುವರಿಯಬೇಕೆಂದು ಭಾರತ ಬಯಸುತ್ತಿದೆ. ಮೊಲ್ಡೊದಲ್ಲಿ ಸೋಮವಾರ ನಡೆದ ಮಿಲಿಟರಿ ಮಾತುಕತೆಯಲ್ಲಿ ಎರಡೂ ದೇಶಗಳು, ಗಲ್ವಾನ್ ಹಾಗೂ ಗೊಗ್ರಾದಲ್ಲಿರುವ ಪಾಯಿಂಟ್ 14,15 ಹಾಗೂ 17ರಲ್ಲಿ ಸೈನಿಕರ ಸಂಖ್ಯೆಯನ್ನು ಕಡಿಮೆಗೊಳಿಸಲು ಬಯಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News