ಎಸೆಸೆಲ್ಸಿ ಮೊದಲ ಪರೀಕ್ಷೆ ನಿರಾತಂಕ: ವಿದ್ಯಾರ್ಥಿ, ಪೋಷಕರಲ್ಲಿ ವಿಶ್ವಾಸ ಮೂಡಿಸಿದ ಸುರಕ್ಷಿತ ಕ್ರಮಗಳು

Update: 2020-06-25 15:48 GMT

ಬೆಂಗಳೂರು, ಜೂ.25: ಶಿಕ್ಷಣ ಇಲಾಖೆಯ ಮುಂಜಾಗ್ರತಾ ಕ್ರಮಗಳಿಂದಾಗಿ ಇಂದು ಪ್ರಾರಂಭಗೊಂಡ ಎಸೆಸೆಲ್ಸಿ ಇಂಗ್ಲಿಷ್ ಪರೀಕ್ಷೆಯು ಯಶಸ್ವಿಯಾಗಿ ಮುಗಿದಿದ್ದು, ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಆತ್ಮವಿಶ್ವಾಸ ಮೂಡಿಸಿದೆ.

ಶಿಕ್ಷಣ, ಆರೋಗ್ಯ, ಸಾರಿಗೆ, ಪೊಲೀಸ್ ಇಲಾಖಾ ಸಿಬ್ಬಂದಿಗಳು ರಾಜ್ಯ ಎಲ್ಲ 3,209 ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್-19 ಮಾರ್ಗಸೂಚಿಯನ್ವಯ ಕಾರ್ಯನಿರ್ವಹಿಸುವ ಮೂಲಕ ವಿದ್ಯಾರ್ಥಿಗಳು ದ್ವಿತೀಯ ಭಾಷೆ ಇಂಗ್ಲಿಷ್ ಹಾಗೂ ಕನ್ನಡ ವಿಷಯದ ಪರೀಕ್ಷೆಯನ್ನು ನಿರಾತಂಕವಾಗಿ ಬರೆಯಲು ಸಾಧ್ಯವಾಗಿದೆ.

ಶಿಕ್ಷಕರು ಹಾಗೂ ಆರೋಗ್ಯ ಸಿಬ್ಬಂದಿಗಳು ನಿಗದಿತ ವೇಳೆಗಿಂತ ಎರಡು ಗಂಟೆ ಮೊದಲೇ ಪರೀಕ್ಷಾ ಕೇಂದ್ರಗಳಿಗೆ ಹಾಜರಿದ್ದು, ಕೋವಿಡ್-19 ಮಾರ್ಗಸೂಚಿ ಅನ್ವಯ ತಯಾರಿಗಳನ್ನು ಮಾಡಿಕೊಂಡರು. ನಂತರ ಪ್ರತಿವಿದ್ಯಾರ್ಥಿಯನ್ನು ಸುರಕ್ಷಿತ ಅಂತರದಲ್ಲಿ ಸಾಲಾಗಿ ನಿಲ್ಲಿಸಿ, ಕೈಗಳಿಗೆ ಸ್ಯಾನಿಟೈಸರ್ ಹಾಕಿ, ಮಾಸ್ಕ್ ಗಳನ್ನು ನೀಡಿ, ಥರ್ಮಲ್ ಸ್ಕ್ಯಾನಿಂಗ್ ಮಾಡಿದ ನಂತರ ಪರೀಕ್ಷಾ ಕೊಠಡಿಗಳಿಗೆ ಹೋಗಲು ಅನುಮತಿ ನೀಡಲಾಯಿತು.

ವಿದ್ಯಾರ್ಥಿಗಳು ಬೆಳಗ್ಗೆ 8ಗಂಟೆಯಿಂದಲೇ ಪರೀಕ್ಷಾ ಕೇಂದ್ರಗಳತ್ತ ಆಗಮಿಸಿದರು. ನಗರ ಪ್ರದೇಶದ ಹೆಚ್ಚಿನ ವಿದ್ಯಾರ್ಥಿಗಳು ಪೋಷಕರ ಜತೆಯಲ್ಲಿ ಖಾಸಗಿ ವಾಹನದ ಮೂಲಕ ಬಂದರು. ಉಳಿದಂತೆ ಗ್ರಾಮಾಂತರದ ವಿದ್ಯಾರ್ಥಿಗಳು ಕೆಎಸ್ಸಾರ್ಟಿಸಿ ವಾಹನ ಹಾಗೂ ಇಲಾಖೆ ನಿಗಧಿ ಪಡಿಸಿದ ವಾಹನಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ಬಂದರು.

ರಾಜ್ಯದ ಹಲವು ಪರೀಕ್ಷಾ ಕೇಂದ್ರಗಳಲ್ಲಿ ಧ್ವನಿವರ್ಧಕ ಮೂಲಕ ವಿದ್ಯಾರ್ಥಿಗಳಿಗೆ ಸುರಕ್ಷಿತ ಅಂತರ ಸೇರಿದಂತೆ ಹವಲು ಮಾರ್ಗಸೂಚಿಗಳನ್ನು ನೀಡುತ್ತಿದದ್ದು ಸಾಮಾನ್ಯವಾಗಿತ್ತು. ಬಹುತೇಕ ವಿದ್ಯಾರ್ಥಿಗಳು ಮನೆಯಿಂದಲೇ ಮಾಸ್ಕ್ ಗಳನ್ನು ಧರಿಸಿಯೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. ಆದರೂ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ನಿಯಮದ ಪ್ರಕಾರ ಮಾಸ್ಕ್ ಗಳನ್ನು ನೀಡಿ ಸುರಕ್ಷಿತವಾಗಿ ಪರೀಕ್ಷೆ ಬರೆಯಲು ಸೂಕ್ತ ವಾತಾವರಣ ಕಲ್ಪಿಸಿದರು.

-ಕಲಬುರಗಿಯ ಹಳೆ ಜೇವರ್ಗಿ ರಸ್ತೆಯಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ನಕಲು ಮಾಡಲು ಶಾಲೆಯ ಗೋಡೆ ಹಾರಿ ಪರೀಕ್ಷಾ ಕೊಠಡಿಗಳತ್ತ ಚೀಟಿ ಎಸೆದಿರುವ ಪ್ರಕರಣ ನಡೆದಿದೆ.

-ತುಮಕೂರಿನ ಶೀರಾ ತಾಲೂಕಿನ ಪಟ್ಟಣನಾಯಕಹಳ್ಳಿ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಬಂದಿದ್ದ ಕ್ವಾರಂಟೈನ್‍ನಲ್ಲಿದ್ದ ವಿದ್ಯಾರ್ಥಿಯನ್ನು ವಾಪಸ್ ಕಳುಹಿಸಲಾಗಿದೆ.

-ಹಾವೇರಿಯ ಸಂಗಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಎಸೆಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ ನಾಲ್ಕು ಮಂದಿ ಶಿಕ್ಷಕರು ಸೇರಿ ಐದು ಮಂದಿಯ ವಿರುದ್ದ ಎಫ್‍ಐಆರ್ ದಾಖಲು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News