ಇಂದಿನ ಪರೀಕ್ಷೆಗೆ ಶೇ.98.3 ವಿದ್ಯಾರ್ಥಿಗಳು ಹಾಜರು: ಶಿಕ್ಷಣ ಸಚಿವ ಸುರೇಶ್‍ ಕುಮಾರ್

Update: 2020-06-25 15:50 GMT

ಬೆಂಗಳೂರು, ಜೂ.25: ಶಿಕ್ಷಣ ಇಲಾಖೆ, ಆರೋಗ್ಯ, ಪೊಲೀಸ್, ಸಾರಿಗೆ ಇಲಾಖೆ ಸೇರಿದಂತೆ ವಿವಿಧ ಸ್ವಯಂ ಸೇವಕರ ಸಹಕಾರದಿಂದ ಇಂದು ಪ್ರಾರಂಭಗೊಂಡ ಎಸೆಸೆಲ್ಸಿ ಪರೀಕ್ಷೆಗೆ ಶೇ.98.3 ವಿದ್ಯಾರ್ಥಿಗಳು ಹಾಜರಾಗಿದ್ದಾರೆಂದು ಶಿಕ್ಷಣ ಸಚಿವ ಸುರೇಶ್‍ ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಂದು ನಡೆದ ಎಸೆಸೆಲ್ಸಿ ದ್ವಿತೀಯ ಭಾಷೆ ಇಂಗ್ಲಿಷ್ ಹಾಗೂ ಕನ್ನಡ ವಿಷಯದ ಪರೀಕ್ಷೆಗೆ ಒಟ್ಟು 3,88,140 ಮಂದಿ ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ 371878 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಉಳಿದ 13,212 ವಿದ್ಯಾರ್ಥಿಗಳು ಗೈರಾಗಿದ್ದಾರೆಂದು ಮಾಹಿತಿ ನೀಡಿದರು.

ಕಂಟೈನ್ಮೆಂಟ್ ಪ್ರದೇಶಗಳ 998 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 201 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಹಾಗೂ ಸರಕಾರಿ, ಖಾಸಗಿ ವಸತಿ ನಿಲಯಗಳಲ್ಲಿ ಇದ್ದು, 1438 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯಗಳಿಂದ 614 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿತ್ತು, ಅದರಲ್ಲಿ 59 ಮಂದಿ ಗೈರು ಹಾಜರಾಗಿದ್ದಾರೆ ಎಂದು ಅವರು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ಎಸೆಸೆಲ್ಸಿ ಇಂಗ್ಲಿಷ್ ವಿಷಯದ ಪತ್ರಿಕೆ ಎಂದು ನಕಲಿ ಪ್ರಶ್ನೆ ಪತ್ರಿಕೆಯನ್ನು ಹರಿಬಿಟ್ಟ ವ್ಯಕ್ತಿ ವಿರುದ್ದ ಇನ್ಫಮೇರ್ಷನ್ ಟೆಕ್ನಾಲಜಿ ಆಕ್ಟ್ 2000, ಐಪಿಸಿ ಆಕ್ಟ್ ಪ್ರಕಾರ ಎಫ್‍ಐಆರ್ ದಾಖಲು ಮಾಡಲಾಗಿದೆ. ಇಂಗ್ಲಿಷ್ ಪರೀಕ್ಷೆ ಮುಗಿದ ನಂತರ ಹಲವು ಪರೀಕ್ಷಾ ಕೇಂದ್ರಗಳ ಬಳಿ ಪೋಷಕರು ಗುಂಪಾಗಿ ನಿಂತಿದ್ದು, ಸುರಕ್ಷಿತ ಅಂತರ ವ್ಯತ್ಯಯ ಉಂಟಾಗಿದೆ ಎಂಬ ವರದಿಗಳು ಬಂದಿವೆ. ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳು ಸೇರಿದಂತೆ ಎಲ್ಲರ ಹಿತದೃಷ್ಟಿಯಿಂದ ಗುಂಪುಗೂಡದೆ ಪರೀಕ್ಷೆಯ ಯಶಸ್ಸಿಗೆ ಎಲ್ಲರು ಸಹಕರಿಸಬೇಕು.

-ಸುರೇಶ್‍ ಕುಮಾರ್, ಶಿಕ್ಷಣ ಸಚಿವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News