ಅನೈತಿಕ ಮಾಧ್ಯಮಗಳ ಅಪಾಯಕಾರಿ ‘ಸಂದೇಶ’

Update: 2020-06-25 19:30 GMT

‘ಮಾಧ್ಯಮ’ಗಳಿಗೆ ಯಾವ ‘ಮೆಸೇಜ್’ ಮುಖ್ಯ? ಮೊಸರಿನಲ್ಲಿ ಕಲ್ಲು ಹುಡುಕುವ, ಸಮಾಜವನ್ನು ಒಡೆಯುವ, ಮನುಷ್ಯ ಮನುಷ್ಯರ ನಡುವೆ ಧರ್ಮದ ಹಾಗೂ ಪ್ರಾದೇಶಿಕತೆಯ ಗೋಡೆ ಕಟ್ಟಲು ನೆರವಾಗುವ ‘ಮೆಸೇಜ್’ಗಳೇ? ನಮ್ಮ ಮಾಧ್ಯಮಗಳು ನೈತಿಕವಾಗದೆ ಅವುಗಳು ವಸ್ತುನಿಷ್ಠ ಹಾಗೂ ಸತ್ಯ ‘ಸಂದೇಶ’ಗಳನ್ನು ಬಿತ್ತರಿಸಲಾರವು. ಜಾತಿ, ಪಂಥ, ಧರ್ಮ, ಭಾಷೆಯ ಹೆಸರಿನಲ್ಲಿ ಈಗಾಗಲೇ ಸಾಕಷ್ಟು ಧ್ರುವೀಕರಣಗೊಂಡಿರುವ ಭಾರತೀಯ ಸಮಾಜದಲ್ಲಿ ‘ಮೀಡಿಯ’ ತಪ್ಪು ಹಾದಿ ಹಿಡಿದರೆ ಅದು ನೀಡುವ ‘ಮೆಸೇಜ್’ ದೇಶವನ್ನು ಕೊರೋನ ಸೋಂಕಿಗಿಂತಲೂ ಹೆಚ್ಚು ಭಯಾನಕವಾಗಿ ಕಾಡಬಲ್ಲದು.


ಕೆನೆಡಿಯನ್ ಸಂವಹನ ಚಿಂತಕ ಮಾರ್ಷಲ್ ಮ್ಯಾಕ್‌ಲುಹನ್ ಇಂದಿಗೆ ಅಧರ್ಶತಮಾನಕ್ಕೂ ಹಿಂದೆ ಸಮೂಹ ಮಾಧ್ಯಮಗಳಿಗೆ ಸಂಬಂಧಿಸಿ ‘‘ ಮಾಧ್ಯಮವೇ ಸಂದೇಶ (The medium is the message) ಎಂದು ಪ್ರತಿಪಾದಿಸಿದ್ದ. ಆಗಿನ್ನೂ ಈ ಗಿನ ಹಾಗೆ ವಿದ್ಯುನ್ಮಾನ ಮಾಧ್ಯಮ ವಿಶ್ವವ್ಯಾಪಿಯಾಗಿರಲಿಲ್ಲ. ನಾವು ನೀಡುವ ಸಂದೇಶವನ್ನು ( ಸುದ್ದಿ, ವರದಿ, ಯಾವುದೇ ವಿಷಯವನ್ನು) ಸಂವಹಿಸುವಾಗ ಅದನ್ನು ಸಂವಹಿಸಲು ನಾವು ಬಳಸುವ ಮಾಧ್ಯಮ ನಾವು ಅಭಿವ್ಯಕ್ತಿಸುವ ಸಂದೇಶದ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲದೆ ಆ ಸಂದೇಶವನ್ನು ನಿಯಂತ್ರಿಸುತ್ತದೆ, ಮತ್ತು ಆ ಮೂಲಕ ಸಮಾಜದ ಆಗು ಹೋಗುಗಳಲ್ಲಿ ಸಾಮಜಿಕ ಸ್ಟಾಸ್ಥದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದನ್ನು ಮ್ಯಾಕ್‌ಲುಹನ್ ಪ್ರತಿಪಾದಿಸಿದ್ದ. ಇಂದು ಕೊರೋನ ಸೋಂಕಿನ ಭಯದಲ್ಲಿ ತಲ್ಲಣಿಸುತ್ತಿರುವಾಗ ಭಾರತೀಯ ಸಮಾಜದಲ್ಲಿ ಜನರಿಗೆ ಜವಾಬ್ದಾರಿಯುತ ಸುದ್ದಿಯನ್ನು ವಾಸ್ತವ ಸ್ಥಿತಿಯನ್ನು ನಿರುದ್ವೇಗದಿಂದ ತಿಳಿಸಿ ಜನರಲ್ಲಿ ಧೈರ್ಯ, ತಾಳ್ಮೆ, ಸಹನೆ, ಪ್ರೀತಿಯನ್ನು ತುಂಬುವ ವಸ್ತುನಿಷ್ಠ ಸಂದೇಶವನ್ನು ನೀಡಬೇಕಾದ ಪ್ರಿಂಟ್ ಹಾಗೂ ಇಲೆಕ್ಟ್ರಾನಿಕ್ ಎರಡೂ ಮಾಧ್ಯಮಗಳಲ್ಲಿ ಕೆಲವು, ತಮಗೆ ಪೂರ್ವಾಗ್ರಹದ ಮಾರಕ ಸೋಂಕು ತಗಲಿರುವಂತೆ ವರ್ತಿಸುತ್ತಿವೆ. ವಿಶೇಷವಾಗಿ ಕೆಲವು ಪ್ರಾದೇಶಿಕ ಭಾಷಾ ಪತ್ರಿಕೆಗಳು ಹಾಗೂ ಟಿವಿ ಚಾನೆಲ್‌ಗಳು ಕೊರೋನ ಸೋಂಕನ್ನು ಸಾಮಾಜಿಕ ಅನಾರೋಗ್ಯ, ಅಸಾಮರಸ್ಯ, ಧಾರ್ಮಿಕ ಅಸಹನೆ ಹಾಗೂ ದ್ವೇಷ ಹರಡಲು ಇದೊಂದು ಸುವರ್ಣಾವಕಾಶ ಎಂಬಂತೆ ಕೆಲಸ ಮಾಡುತ್ತಿವೆ. ಕೋರೊನ ಸೋಂಕಿನಿಂದಾಗಿ ಅನಿವಾರ್ಯವಾಗಿ ಮನೆಯೇ ಸೆರೆ ಮನೆಯಂತಾಗಿರುವಾಗ ಜನರು ಟಿವಿ ಮುಂದೆ ಕುಳಿತು ಕ್ರಿಕೆಟ್ ಪಂದ್ಯದ ಸ್ಕೋರ್‌ಗಳನ್ನು ಕೇಳುತ್ತ ಉದ್ರೇಕಗೊಳ್ಳುವ ಹಾಗೆ, ಗಂಟೆ ಗಂಟೆಗೆ ಏರುವ ಕೊರೋನ ಸಾವಿನ ಸ್ಕೋರ್‌ಗಳನ್ನು ಕೇಳುತ್ತ ಆತಂಕದಲ್ಲಿರುತ್ತಾರೆ. ನಾವು ದೂರದಲ್ಲಿರುವ ನಮ್ಮವರು, ನಮ್ಮ ನೆರೆಕೆರೆ ಎಷ್ಟು ಸುರಕ್ಷಿತವೆಂಬ ಆತಂಕ ಒಂದೆಡೆಯಾದರೆ, ಟಿವಿಯ ಸುದ್ದಿವಾಚಕರು ತಾವೇ ಸ್ವತಃ ಸೋಂಕಿಗೊಳಗಾಗಿ ಉದ್ವೇಗಕ್ಕೊಳಗಾದವರಂತೆ ನೀಡುವ ಸುದ್ದಿ, ವರದಿಗಳನ್ನು ಆಲಿಸುವಾಗ ಆಗುವ ಆತಂಕ, ಭಯ ಇನ್ನೊಂದೆಡೆ.

ಮುಂದೆ ಏನು ಕಾದಿದೆಯೋ ಎಂಬ ಅನಿಶ್ಚಿತತೆ, ಆತಂಕ ಹಾಗೂ ಭಯದಲ್ಲಿರುವ ಮನಸ್ಸು ಉದ್ವೇಗ ರಹಿತ ಪ್ರಶಾಂತ ಮನಸ್ಸಿಗಿಂತ ಹೆಚ್ಚು ಸುಲಭವಾಗಿ ಅಂತೆಕಂತೆ ಸುದ್ದಿಗಳನು,್ನ ಸುಳ್ಳುಗಳನು.್ನ ವದಂತಿಗಳನ್ನು ನಂಬುತ್ತದೆ. ಹೀಗೆ ಏನನ್ನಾದರೂ ನಂಬುವ ಮನಸ್ಥಿತಿಯಲ್ಲಿರುವವರು ಸ್ವಹಿತಾಸಕ್ತ ಟಿವಿ ಚಾನೆಲ್‌ಗಳ ಅಪಕ್ವ ಅತಿರಂಜಿತ ಸುದ್ದಿಗಳ ಮೊದಲ ‘ಬಳಕೆದಾರ’ರಾಗುತ್ತಾರೆ.

 ತಾವು ಟಿವಿಯಲ್ಲಿ ನೋಡುತ್ತಿರುವ ಆಲಿಸುತ್ತಿರುವ ಸೆನ್ಸೇಶನಲ್ ಸುದ್ದಿ ಸರಿಯೋ ತಪ್ಪೋ ಸತ್ಯವೋ ಸುಳ್ಳೋ ಎಂದು ವಿವೇಚಿಸುವ ಮನಸ್ಥಿತಿಯಲ್ಲಿರದ ಅವರು, ತಾವು ಕೇಳಿದ್ದನ್ನು ತಮ್ಮ ಮೊಬೈಲ್‌ಗೆ ಬಂದಿದ್ದನ್ನು ತಮ್ಮ ಮಿತ್ರರಿಗೆ, ಪರಿಚಿತರಿಗೆ ‘ಫಾರ್ವರ್ಡ್’ ಮಾಡುತ್ತಾರೆ. ಇಂತಹ ವೀಕ್ಷಕರ ಮನಸ್ಥಿತಿಯ ಲಾಭ ಪಡೆಯುವ ಟಿವಿ ಚಾನೆಲ್‌ಗಳು ಕ್ಷಣಾರ್ಧದಲ್ಲಿ ಸಾವಿರಾರು ಮನಸ್ಸುಗಳಲ್ಲಿ ಒಂದು ನಿರ್ದಿಷ್ಟ ಸಮುದಾಯದ, ಒಂದು ನಿರ್ದಿಷ್ಟ ಪ್ರದೇಶದ ಬಗ್ಗೆ ದ್ವೇಷ, ಅಸಹನೆಯ ಬೀಜಬಿತ್ತುವ ‘ಪುಣ್ಯಕಾಯರ್ರ್’ ಮಾಡಿಬಿಡುತ್ತವೆೆ. ಇಂತಹ ‘ಪುಣ್ಯಕಾರ್ಯ’ ಈಗ ದೇಶಾದ್ಯಂತ ಹೇಗೆ ನಡೆಯುತ್ತಿದೆ ನೋಡಿ, ಅಲ್ಪಸಂಖ್ಯಾತ ಸಮುದಾಯದ ಒಂದು ನಿರ್ಧಿಷ್ಟ ಪಂಥದ ಒಂದಷ್ಟು ಅನುಯಾಯಿಗಳು ಅಕ್ಷಮ್ಯವಾಗಿ ಬೇಜವಾಬ್ದಾರಿತನದಿಂದ ನಡೆದುಕೊಂಡು ಕೊರೋನ ಸೋಂಕು ಹರಡಲು ಕಾರಣರಾಗುತ್ತಾರೆ.

ಅವರಲ್ಲಿ ಸೋಂಕಿತರ ಬದಲಾಗಿ ಅವರ ಧಾರ್ಮಿಕ ಅಸ್ಮಿತೆ, ವೈಯಕ್ತಿಕ ಗುರುತು ಮತ್ತು ಅಂತಿಮವಾಗಿ ಅವರ ಧರ್ಮವೇ ಬಲಿಪಶುವಾಗುತ್ತದೆ. ಕೆಲವು ವಾರ್ತಾಪತ್ರಿಕೆಗಳಂತೂ ಅವರು ನಡೆಸಿದ ಸಮಾವೇಶದ ಸುದ್ದಿಯನ್ನು ಒಂದು ಪರಮಾಣು ವಿಶ್ವ ಸಮರದ ಸುದ್ದಿಯನ್ನು ಪ್ರಕಟಿಸುವ ಹಾಗೆ, ತಮ್ಮ ಮುಖಪುಟದ ಒಂದು ಕೊನೆಯಿಂದ ಇನ್ನೊಂದು ಕೊನೆಯವರೆಗೆ ಮಹಾ ಅಪಾಯವನ್ನು ಸೂಚಿಸುವ ಬಣ್ಣದಲ್ಲಿ ದಪ್ಪ ಅಕ್ಷರಗಳಲ್ಲಿ ಮುದ್ರಿಸುತ್ತವೆ. ಇದೆಷ್ಟು ಪರಿಣಾಮ ಬೀರುತ್ತದೆಂದರೆ ಪತ್ರಿಕೆ ಮಾರುಕಟ್ಟೆಗೆ ಬಂದು ಒಂದೆರಡು ಗಂಟೆಗಳೊಳಗಾಗಿ ಮುಗ್ಧ ಜನ ಸಾಮಾನ್ಯರು ಸುದ್ದಿಯನ್ನು ನಂಬಿಬಿಡುತ್ತಾರೆ: ಹಾಲು ಪ್ಯಾಕೇಟ್‌ಗಳನ್ನು ಮಾರುವಾಗ ಆತನ ಬೂತ್‌ಗೆ ಹೋಗಿದ್ದ ನನ್ನೊಡನೆ ಆ ದಿನ ಬೆಳಗ್ಗೆ ಪತ್ರಿಕೆಯ ಮುಖಪುಟ ತೋರಿಸುತ್ತ ಹೇಳಿದ, ‘‘ಎಲ್ಲ ಆಗುವುದು ಇವರಿಂದಲೇ ಇವರು ಎಲ್ಲವನ್ನೂ ನಾಶ ಮಾಡಿ ಬಿಡ್ತಾರೆ’’.

ಅಂದಿನಿಂದ ಸತತವಾಗಿ ದಿನಗಟ್ಟಲೆ ಇದೇ ಸುದ್ದಿಯ ‘ಬಂಬಾರ್ಡ್‌ಮೆಂಟ್’ ನಡೆಯಿತು. ಸೋಂಕು ಹರಡಲು ಒಂದು ನಿರ್ದಿಷ್ಟ ಧರ್ಮದ ಎಲ್ಲರೂ ಕಾರಣರು ಅವರೆಲ್ಲರೂ ಅಪರಾಧಿಗಳು ಎಂದು ಜನರು ನಂಬುವ ಹಾಗೆ ಅವರ ‘ಮೆದುಳು ತೊಳೆಯುವ’ ಕೆಲಸ ಮುಂದುವರಿಯುತ್ತಲೇ ಹೋಯಿತು.
ಹೀಗೆ ಸುದ್ದಿ ಪ್ರಸಾರ ಮಾಡಿದ ಚಾನೆಲ್‌ಗಳಿಗೆ ತಗಲಿದ ಅಪಪ್ರಚಾರ ಮಾಡುವ ಸೋಂಕು ಎಷ್ಟು ಗಂಭೀರ ಸ್ವರೂಪ ಪಡೆದಿತ್ತೆಂದರೆ, ಅದೇ ವೇಳೆ ಇದೇ ಕರುನಾಡಿನ ಒಂದು ಊರಿನಲ್ಲಿ ಐದು ನೂರು ಜನ ಸೇರಿ ಯಾವುದೇ ಮಾಸ್ಕ್, ಸುರಕ್ಷಿತ ಅಂತರಕ್ಕೆ ಚಿಕ್ಕಾಸು ಬೆಲೆ ಕೊಡದೆ ಜಾತ್ರೆ ನಡೆಸಿದ್ದು ಅವುಗಳಿಗೆ ಒಂದು ಸ್ಫೋಟಕ ಸುದ್ದಿ ಎಂದು ಅನ್ನಿಸಲೇ ಇಲ್ಲ. ಇನ್ನೊಂದು ಊರಿನಲ್ಲಿ ನೂರಾರು ಜನ ಪುಣ್ಯ ಸಂಪಾದಿಸಿ ಸ್ವರ್ಗದಲ್ಲಿ ಒಂದು ಸೀಟು ಕಾದಿರಿಸುವುದಕ್ಕಾಗಿಯೋ ಏನೋ ಎಂಬಂತೆ ನದಿಯೊಂದರಲ್ಲಿ ಪವಿತ್ರ ಸ್ನಾನ ಮಾಡಿದಾಗ ಆ ಚಾನೆಲ್‌ಗಳಿಗೆ ಅಲ್ಲಿ ಮಾಸ್ಕ್, ಸುರಕ್ಷಿತ ಅಂತರ ಇತ್ತೇ? ಹಾಗೆ ಅಲ್ಲಿ ನೆರೆದವರಲ್ಲಿ ಯಾರಿಗೆ ಸೋಂಕು ಇತ್ತು?, ಅವರಿಂದ ಯಾರಿಗೆ ಹರಡಿತು? ಎಂದೆಲ್ಲ ‘ಇನ್‌ವೆಸ್ಟಿಗೇಟ್’ ಮಾಡುವ ತಮ್ಮ ‘ಟೀಮ್’ ಅನ್ನು ಅಲ್ಲಿಗೆ ಕಳುಹಿಸಬೇಕು ಅನ್ನಿಸಲಿಲ್ಲ. ಇದಕ್ಕೆ ಬದಲಾಗಿ ಒಂದು ರಾಜ್ಯದ ಒಬ್ಬ ಬಡ ಕಾರ್ಮಿಕ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು ಸುಸ್ತಾದಾಗ ಅವನನ್ನು ಉಲ್ಲೇಖಿಸುತ್ತ ಆತನ ಇಡೀ ರಾಜ್ಯವೇ ಅಪರಾಧಿ ಎಂಬಂತೆ ಅವು ವರದಿ ಮಾಡಿದವು.

 ಹೀಗೆ ಒಬ್ಬ ವ್ಯಕ್ತಿಯ ಬದಲಾಗಿ ಇಡೀ ಒಂದು ರಾಜ್ಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ, ಕೆಲವರ ತಪ್ಪಿಗಾಗಿ ಒಂದು ನಿರ್ದಿಷ್ಟ ಸಮುದಾಯವನ್ನೇ ನೇಣಿಗೆ ಹಾಕಬೇಕು ಎನ್ನುವ ರೀತಿಯಲ್ಲಿ ಬೊಬ್ಬೆ ಹೊಡೆಯುವ ಮಾಧ್ಯಮಗಳಿಗೆ ಅದೇ ಸಮುದಾಯದವರು ಮಾಡುವ ಮಾನವೀಯ ಕಾರ್ಯಗಳನ್ನು ಸೂಕ್ತ ಪ್ರಾಮುಖ್ಯತೆ ಕೊಟ್ಟು ಪ್ರಸಾರ ಮಾಡುವ ಔದಾರ್ಯವಿಲ್ಲ. ಕೋಲಾರದ ಇಬ್ಬರು ಸಹೋದರರು ತಮ್ಮ ಬಾಲ್ಯದ ಬಡತನ, ಕಷ್ಟವನ್ನು ಜ್ಞಾಪಿಸಿಕೊಂಡು, ತಮ್ಮ ಒಂದು ನಿವೇಶನವನ್ನು ಮಾರಿ ಅದರಿಂದ ಬಂದ 25 ಲಕ್ಷ ರೂ.ಗಳನ್ನು ಕೊರೋನ ಸಂತ್ರಸ್ತ ಬಡವರಿಗೆ, ಕೂಲಿ ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಲು, ಊಟ ನೀಡಲು ಬಳಸಿದರು. ಸ್ವತಃ ತಾವೇ ತಮ್ಮ ಬೈಕ್‌ನಲ್ಲಿ ಹೋಗಿ ಆಹಾರ ನೀಡಿದರು. ಇಂದಿನ ಬಡ ಭಾರತದಲ್ಲಿ 25 ಲಕ್ಷ ಎಂಬುದು ಸಣ್ಣ ಮೊತ್ತವಲ್ಲ.

ತಿಂಗಳಿಗೆ ಏಳು, ಎಂಟು ಸಾವಿರ ರೂಪಾಯಿ ಸಂಪಾದಿಸುವ ಓರ್ವ ಕೆಲಸದಾಕೆ 25 ವರ್ಷಗಳ ಕಾಲ ದುಡಿದರೂ ಅಷ್ಟೊಂದು ಮೊತ್ತ ಸಂಪಾದಿಸಲಾರಳು! ಹೀಗಿರುವಾಗ ತಮ್ಮ ಮನೆ ನಿವೇಶನವನ್ನೇ ಮಾರಿ ಬಡವರಿಗೆ ನೆರವಾದ ಆ ಸಹೋದರರ ಕುರಿತು ವಿವರವಾದ ವರದಿಯಾಗಲಿ, ಅವರ ಸಂದರ್ಶನವಾಗಲಿ ಟಿವಿ ಚಾನೆಲ್‌ಗಳಲ್ಲಿ ಕಾಣಿಸಲಿಲ್ಲ. ಉಡುಪಿಯ ಮಲ್ಪೆಯ ಬಡ ಮಹಿಳೆಯೊಬ್ಬಳು ಮನೆ ಕಟ್ಟಲಿಕ್ಕಾಗಿ ಇಟ್ಟುಕೊಂಡ ಮೊತ್ತವನ್ನು ಬಡವರಿಗೆ ಅಕ್ಕಿ ಹಂಚಲು ಬಳಸಿದರು. ಆಕೆಯ ಮಾನವೀಯತೆ ನಮ್ಮ ಚಾನೆಲ್‌ಗಳಿಗೆ ಸುದ್ದಿ ಆಗಲೇ ಇಲ್ಲ.

ಹಾಗಾದರೆ ಈ ‘ಮಾಧ್ಯಮ’ಗಳಿಗೆ ಯಾವ ‘ಮೆಸೇಜ್’ ಮುಖ್ಯ? ಮೊಸರಿನಲ್ಲಿ ಕಲ್ಲು ಹುಡುಕುವ, ಸಮಾಜವನ್ನು ಒಡೆಯುವ, ಮನುಷ್ಯ ಮನುಷ್ಯರ ನಡುವೆ ಧರ್ಮದ ಹಾಗೂ ಪ್ರಾದೇಶಿಕತೆಯ ಗೋಡೆ ಕಟ್ಟಲು ನೆರವಾಗುವ ‘ಮೆಸೇಜ್’ಗಳೇ? ನಮ್ಮ ಮಾಧ್ಯಮಗಳು ನೈತಿಕವಾಗದೆ ಅವುಗಳು ವಸ್ತುನಿಷ್ಠ ಹಾಗೂ ಸತ್ಯ ‘ಸಂದೇಶ’ಗಳನ್ನು ಬಿತ್ತರಿಸಲಾರವು. ಜಾತಿ, ಪಂಥ, ಧರ್ಮ, ಭಾಷೆಯ ಹೆಸರಿನಲ್ಲಿ ಈಗಾಗಲೇ ಸಾಕಷ್ಟು ಧ್ರುವೀಕರಣಗೊಂಡಿರುವ ಭಾರತೀಯ ಸಮಾಜದಲ್ಲಿ ‘ಮೀಡಿಯ’ ತಪ್ಪು ಹಾದಿ ಹಿಡಿದರೆ ಅದು ನೀಡುವ ‘ಮೆಸೇಜ್’ ದೇಶವನ್ನು ಕೊರೋನ ಸೋಂಕಿಗಿಂತಲೂ ಹೆಚ್ಚು ಭಯಾನಕವಾಗಿ ಕಾಡಬಲ್ಲದು.

Writer - ಡಾ.ಬಿ.ಭಾಸ್ಕರ ರಾವ್

contributor

Editor - ಡಾ.ಬಿ.ಭಾಸ್ಕರ ರಾವ್

contributor

Similar News