ಕೋವಿಡ್ ಚಿಕಿತ್ಸೆಗೆ ಸರಕಾರ ದರ ನಿಗದಿ: ಖಾಸಗಿ ಆಸ್ಪತ್ರೆಗಳಿಂದ ಆಕ್ಷೇಪ

Update: 2020-06-25 17:03 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.25: ಸರಕಾರದಿಂದ ಖಾಸಗಿ ಆಸ್ಪತ್ರೆಗಳಿಗೆ ಕೊರೋನ ಸೋಂಕಿನ ಚಿಕಿತ್ಸೆಗಾಗಿ ನಿಗದಿ ಮಾಡಿರುವದಕ್ಕೆ ಖಾಸಗಿ ಆಸ್ಪತ್ರೆಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಪ್ಯಾಕೇಜ್ ಮೊತ್ತ ಹೆಚ್ಚಳ ಮಾಡದಿದ್ದಲ್ಲಿ ಚಿಕಿತ್ಸೆ ಅಸಾಧ್ಯ ಎಂಬ ಎಚ್ಚರಿಕೆಯನ್ನು ನೀಡಿವೆ.

ಕೋವಿಡ್ ಚಿಕಿತ್ಸೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗಳು ಕೆಲ ದಿನಗಳ ಹಿಂದೆ ಸರಕಾರಕ್ಕೆ ದರಪಟ್ಟಿಯನ್ನು ಸಲ್ಲಿಕೆ ಮಾಡಿದ್ದವು. ಅದನ್ನು ಆಧರಿಸಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಕೋವಿಡ್ ಚಿಕಿತ್ಸೆಗೆ ಸರಕಾರ ದರ ನಿಗದಿಪಡಿಸಿದೆ.

ಆಯುಷ್ಮಾನ್ ಫಲಾನುಭವಿಗಳು ಹಾಗೂ ಫಲಾನುಭವಿಗಳಲ್ಲದ ರೋಗಿಗಳಿಗೆ ಪ್ರತ್ಯೇಕ ದರವನ್ನು ಪಟ್ಟಿಯಲ್ಲಿ ತಿಳಿಸಲಾಗಿತ್ತು. ಫಲಾನುಭವಿಗಳಲ್ಲದ ರೋಗಿಗಳಿಗೆ ನಿಗದಿಪಡಿಸಬಹುದು ಎಂದು ಸೂಚಿಸಲಾಗಿದ್ದ ದರಪಟ್ಟಿಯಲ್ಲಿ ಶೇ. 30 ರಷ್ಟು ಕಡಿತ ಮಾಡಿ ಸರಕಾರ ಆದೇಶ ಹೊರಡಿಸಿದೆ. ಇದು ಖಾಸಗಿ ಆಸ್ಪತ್ರೆಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಆಯುಷ್ಮಾನ್ ಅಥವಾ ಆರೋಗ್ಯ ಕರ್ನಾಟಕ ಫಲಾನುಭವಿಗಳಲ್ಲದ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಹೆಚ್ಚಳ ಮಾಡುವಂತೆ ಪತ್ರ ಬರೆಯಲು ಖಾಸಗಿ ಆಸ್ಪತ್ರೆಗಳು ನಿರ್ಧರಿಸಿವೆ. ಹಾಗೊಂದು ವೇಳೆ ಮಾಡದೇ ಇದ್ದಲ್ಲಿ, ಫಲಾನುಭವಿಗಳಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವುದು ಅಸಾಧ್ಯ ಎಂಬುದು ಖಾಸಗಿ ಆಸ್ಪತ್ರೆಗಳ ವಾದವಾಗಿದೆ.

ವೆಚ್ಚ ಅಧಿಕ: ‘ನಾವು ಪ್ರಸ್ತಾವನೆ ಸಲ್ಲಿಸಿದ ದರದಲ್ಲಿ ಶೇ. 30 ರಷ್ಟು ಕಡಿತ ಮಾಡಲಾಗಿದೆ. ಇದರಿಂದಾಗಿ ಸರಕಾರ ನಿಗದಿಪಡಿಸಿದ ದರದಲ್ಲಿ ಚಿಕಿತ್ಸೆ ಒದಗಿಸಲು ಸಾಧ್ಯವಿಲ್ಲ. ಹಾಗಾಗಿ ದರ ಹೆಚ್ಚಳ ಮಾಡುವಂತೆ ಸರಕಾರಕ್ಕೆ ಗುರುವಾರ ಪತ್ರ ಬರೆಯಲಾಗಿದೆ. ಪ್ರತ್ಯೇಕ ವಾರ್ಡ್ ನಿರ್ಮಾಣ ಮಾಡುವ ಜತೆಗೆ ರೋಗಿಗಳಿಗೆ ಅಗತ್ಯ ಸೌಲಭ್ಯ ಒದಗಿಸಲು ಅಧಿಕ ವೆಚ್ಚವಾಗಲಿದೆ' ಎಂದು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳ ಅಸೋಸಿಯೇಷನ್ (ಫಾನಾ) ಅಧ್ಯಕ್ಷ ಡಾ.ಆರ್. ರವೀಂದ್ರ ಹೇಳಿದ್ದಾರೆ.

ಆಯುಷ್ಮಾನ್ ಫಲಾನುಭವಿಗಳಿಗೆ ನಾವು ಸೂಚಿಸಿದ ದರವನ್ನೇ ಅಂತಿಮ ಮಾಡಲಾಗಿದೆ. ಸಾಮಾಜಿಕ ಕಳಕಳಿಯಿಂದ ಅತ್ಯಂತ ಕಡಿಮೆ ದರವನ್ನು ಪ್ರಸ್ತಾಪಿಸಿದ್ದೆವು. ಯೋಜನೆಯ ಫಲಾನುಭವಿಯಲ್ಲದ ರೋಗಿಗಳಿಗೂ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಸಾಮಾನ್ಯ ವಾರ್ಡ್‍ಗೆ 15 ಸಾವಿರ ನಿಗದಿ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರೆ, 10 ಸಾವಿರ ನಿಗದಿಪಡಿಸಲಾಗಿದೆ. ಅದೇ ರೀತಿ, ಉಳಿದ ಚಿಕಿತ್ಸಾ ಸೌಲಭ್ಯಗಳಿಗೂ ಕಡಿತ ಮಾಡಲಾಗಿದೆ. ಸರಕಾರ ಮೊದಲೇ ಸೂಚನೆ ನೀಡದ ಪರಿಣಾಮ ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನೂ ಮಾಡಿಕೊಂಡಿರಲಿಲ್ಲ ಎಂದು ತಿಳಿಸಿದರು.

ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿ ಮಾಡಿದೆ. 518 ಆಸ್ಪತ್ರೆಗಳು ಆಯುಷ್ಮಾನ್ ಯೋಜನೆಯಡಿ ಕೋವಿಡೇತರ ಕಾಯಿಲೆಗಳಿಗೆ ಸೇವೆ ನೀಡುತ್ತಿವೆ. ಆದರೆ, ಕೋವಿಡ್ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ಹಾಗೂ ತರಬೇತಿ ಹೊಂದಿದ ವೈದ್ಯಕೀಯ ಸಿಬ್ಬಂದಿ ಅಗತ್ಯ ಇರುವುದರಿಂದ ಸಣ್ಣ ಮತ್ತು ಮಧ್ಯಮ ಗಾತ್ರದ ಆಸ್ಪತ್ರೆಗಳು ಚಿಕಿತ್ಸೆಗೆ ಹಿಂದೇಟು ಹಾಕುತ್ತಿವೆ. ಬೆರಳಣಿಕೆಯಷ್ಟು ಆಸ್ಪತ್ರೆಗಳು ಮಾತ್ರ ಪ್ರತ್ಯೇಕ ವಾರ್ಡ್‍ಗಳನ್ನು ನಿರ್ಮಿಸಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News