ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಸರಕಾರದ ಹಣ ವ್ಯಯ ಸಲ್ಲ: ಕೆಪಿಸಿಸಿ

Update: 2020-06-25 17:14 GMT

ಬೆಂಗಳೂರು, ಜೂ.25: ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಕೆಂಪೇಗೌಡರ ಬೃಹತ್ ಪ್ರತಿಮೆಯನ್ನು ನಿರ್ಮಿಸಲು ಮುಂದಾಗಿರುವ ಸರಕಾರದ ನಿರ್ಧಾರವು ಸ್ವಾಗತಾರ್ಹ. ಆದರೆ, ಪ್ರತಿಮೆ ನಿರ್ಮಾಣಕ್ಕೆ ಸರಕಾರ ಹಣ ವ್ಯಯ ಮಾಡುವುದು ಸಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹೇಳಿದೆ.

ವಿಮಾನ ನಿಲ್ದಾಣದ ನಿರ್ಮಾಣಕ್ಕೆ ರಾಜ್ಯ ಬಹಳಷ್ಟು ಸಹಕಾರ ನೀಡಿ, ಹಲವಾರು ಅನುಕೂಲಗಳನ್ನು ಮಾಡಿಕೊಡಲಾಗಿದೆ. ಆದುದರಿಂದಾಗಿ ಈ ಪ್ರತಿಮೆಗೆ ಅವಶ್ಯಕವಿರುವ ಹಣವನ್ನು ವಿಮಾನ ನಿಲ್ದಾಣದ ಸಂಸ್ಥೆಯೇ ಭರಿಸಬೇಕೆಂದು ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.

ಸರಕಾರ ಹಾಗೂ ರಾಜ್ಯ ಮಾಡಿದ ಸಹಾಯಕ್ಕೆ ವಿಮಾನ ನಿಲ್ದಾಣ ಸಂಸ್ಥೆ ತನ್ನ ಕಿರುಕಾಣಿಕೆ ನೀಡಿದಂತಾಗುತ್ತದೆ. ಹಾಗೆ ಮಾಡಿದಾಗ ಈಗಾಗಲೇ ಪ್ರತಿಮೆಗಾಗಿ ಬಜೆಟ್‍ನಲ್ಲಿ ಮೀಸಲಿಟ್ಟಿರುವ ಹಣದಲ್ಲಿ ಸುಮನಹಳ್ಳಿಯಲ್ಲಿ ನೀಡಲಾಗಿರುವ ಐದು ಎಕರೆ ಜಮೀನಿನಲ್ಲಿ ಕೆಂಪೇಗೌಡ ಸ್ಮಾರಕ ಕೇಂದ್ರ, ವಸ್ತು ಸಂಗ್ರಹಾಲಯ, ಅಧ್ಯಯನ ಸಂಸ್ಥೆ ಮತ್ತು ಸಾಂಸ್ಕೃತಿಕ ಕೇಂದ್ರವನ್ನು ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News