ಮನೆ ಮನೆಗೆ ಗಂಗಾ ಯೋಜನೆಯಡಿ ಕುಡಿಯುವ ನೀರು ಸರಬರಾಜು: ಕೆ.ಎಸ್.ಈಶ್ವರಪ್ಪ

Update: 2020-06-26 18:28 GMT

ಬೆಂಗಳೂರು, ಜೂ. 26: ರಾಜ್ಯದ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಒದಗಿಸಲು ಸರಕಾರ ಬದ್ಧವಾಗಿದ್ದು, 90 ಲಕ್ಷ ಮನೆಗಳಿಗೆ ಕೊಳಾಯಿ ಮೂಲಕ ನೀರನ್ನು ಒದಗಿಸುವ ಜಲ ಮೀಷನ್ ಯೋಜನೆಯನ್ನು ರಾಜ್ಯಾದ್ಯಂತ ಮನೆ ಮನೆಗೆ ಗಂಗೆ ಹೆಸರಿನಲ್ಲಿ ಅನುಷ್ಠಾನ ಮಾಡಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶುಕ್ರವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಜಲ ಮಿಷನ್ ಯೋಜನೆಯ ಅನುಷ್ಠಾನ ಸಂಬಂಧ ರಾಜ್ಯದ ಎಲ್ಲ ಜಿಲ್ಲಾಪಂಚಾಯ್ತಿಗಳ ಸಿಇಓಗಳು ಮತ್ತು ಮುಖ್ಯ ಎಂಜಿನಿಯರ್‍ಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ 90 ಲಕ್ಷ ಮನೆಗಳ ಪೈಕಿ 25 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕವಿದೆ. ಉಳಿದ 65 ಲಕ್ಷ ಮನೆಗಳಿಗೆ ಕುಡಿಯುವ ನೀರನ್ನು ಕಲ್ಪಿಸಲು ಕೇಂದ್ರ ಸರಕಾರ ಜಲ್‍ಜೀವನ್ ಮಿಷನ್ ಯೋಜನೆಯಡಿ ಜಾರಿಗೆ ತರಲು ಮುಂದಾಗಿದ್ದೇವೆ ಎಂದರು.

ಕುಡಿಯುವ ನೀರನ್ನು ಒದಗಿಸಲು ಮನೆ ಮನೆಗೆ ಗಂಗೆ ಹೆಸರಿನ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಪ್ರತಿ ವರ್ಷ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಲಾ 4 ಸಾವಿರ ಕೋಟಿ ರೂ. ಗಳ ವೆಚ್ಚ ಮಾಡಲಿವೆ. ಮುಂದಿನ ಆಗಸ್ಟ್‍ನಲ್ಲಿ ಈ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಅವರು ಹೇಳಿದರು.

ಲಾಕ್‍ಡೌನ್ ಅನಿವಾರ್ಯ: ಕೊರೋನ ಸೋಂಕು ಹೆಚ್ಚಿರುವ ಕಡೆ ಲಾಕ್‍ಡೌನ್ ಅನಿವಾರ್ಯ ಎಂದ ಅವರು, ಸೋಂಕು ನಿಯಂತ್ರಣದಲ್ಲಿ ರಾಜಕೀಯ ಬೆರೆಸುವುದು ಬೇಡ. ರಾಜಕೀಯ ಮಾಡದೆ ಕೊರೋನ ನಿಯಂತ್ರಣಕ್ಕೆ ವಿರೋಧ ಪಕ್ಷಗಳು ಸಹಕರಿಸಬೇಕು ಎಂದು ಈಶ್ವರಪ್ಪ ಹೇಳಿದರು.

ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತಿಕ್, ಆಯುಕ್ತ ಡಾ. ವಿಶಾಲ್, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಜೈರಾಂ, ಎಲ್ಲ ಜಿ.ಪಂ.ಗಳ ಸಿಇಓಗಳು, ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News