ಕೊರೋನ ಸೋಂಕು ಇನ್ನೂ 6 ತಿಂಗಳು ಕಾಡಲಿದೆ, ಎದುರಿಸಲು ಸನ್ನದ್ಧರಾಗಿ: ಸಚಿವ ಆರ್.ಅಶೋಕ್

Update: 2020-06-29 14:04 GMT

ಬೆಂಗಳೂರು, ಜೂ. 29: ಮಾರಕ ಕೊರೋನ ಸೋಂಕು ಇನ್ನೂ ಆರು ತಿಂಗಳು ರಾಜ್ಯದ ಜನರನ್ನು ಕಾಡುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಸೋಂಕು ಎದುರಿಸಲು ಸನ್ನದ್ಧರಾಗಬೇಕು. ರಾಜ್ಯದಲ್ಲಿ ಸೋಂಕು ತಡೆಗೆ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗಿನ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಜ್ಞರ ವರದಿ ಪ್ರಕಾರ ಜುಲೈ, ಆಗಸ್ಟ್ ನಲ್ಲಿ ಕೊರೋನ ಸೋಂಕು ಇನ್ನೂ ಗಂಭೀರವಾಗಲಿದೆ. ಹೀಗಾಗಿ ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ವೈದ್ಯರು ಮತ್ತು ಸಿಬ್ಬಂದಿ ಇನ್ನೂ ಆರು ತಿಂಗಳ ಕಾಲ ಸೇವೆ ಸಲ್ಲಿಸಲು ಮಾನಸಿಕವಾಗಿ ಸಿದ್ಧರಾಗಬೇಕು ಎಂದು ಸಲಹೆ ಮಾಡಿದರು.

ಮತ್ತಷ್ಟು ನಿರ್ಬಂಧ: ಸೋಂಕು ತೀವ್ರ ಸ್ವರೂಪದಲ್ಲಿ ಏರುತ್ತಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಆಗಮಿಸುವವರನ್ನು ನಿರ್ಬಂಧಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೆ ತೀರ್ಮಾನ ಕೈಗೊಳ್ಳಲಾಗುವುದು ಎಂದ ಅವರು, ಎಸೆಸೆಲ್ಸಿ ಪರೀಕ್ಷೆ ಮುಕ್ತಾಯದ ಬಳಿಕ ಜುಲೈ ಎರಡನೆ ವಾರದಲ್ಲಿ ಬೆಂಗಳೂರು ಮತ್ತು ರಾಜ್ಯದಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಿ ಮುಂದಿನ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ನಗರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸರಕಾರ ಕ್ರಮ ವಹಿಸಿದೆ. ಸೋಂಕಿತರಿಗೆ ಅಗತ್ಯ ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ನಗರದ ವಿಕ್ಟೋರಿಯಾ ಆಸ್ಪತ್ರೆ, ಹಜ್ ಭವನಗಳಲ್ಲಿ ವ್ಯವಸ್ಥೆ ಸರಿ ಇಲ್ಲ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕೋವಿಡ್ ವಾರ್ಡ್ ಗೆ ತೆರಳುವ ಸಂಬಂಧಪಟ್ಟ ವೈದ್ಯರು ಅವರ ಹುದ್ದೆಯ ಸ್ಟಿಕ್ಕರ್ ಹಾಕಿಕೊಂಡು ಹೋಗುವುದು ಕಡ್ಡಾಯ. ವೈದ್ಯರಿಗೆ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದರು.

ಕ್ರಿಮಿನಲ್ ಕೇಸ್: ಖಾಸಗಿ ಆಸ್ಪತ್ರೆಗಳ ಕೋವಿಡ್-19 ಪರೀಕ್ಷಾ ಕೇಂದ್ರಗಳಲ್ಲಿ ಸೋಂಕಿನ ಬಗ್ಗೆ ವರದಿ ಬರುವ ಮೊದಲೇ ಸೋಂಕು ದೃಢಪಟ್ಟಿದೆ ಎಂಬ ಅಂಶವನ್ನು ಬಹಿರಂಗಪಡಿಸುತ್ತಿರುವುದು ಸರಿಯಲ್ಲ. ಈ ಬಗ್ಗೆ ಐಸಿಎಂಆರ್, ಬಿಬಿಎಂಪಿ ಪೋರ್ಟಬಲ್‍ಗೆ ಮೊದಲು ಮಾಹಿತಿ ನೀಡಬೇಕು. ರೋಗ ಲಕ್ಷಣಗಳ ಬಗ್ಗೆಯೂ ಮಾಹಿತಿ ಕೊಡಬೇಕು ಎಂದು ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದರು.

ಆರೋಗ್ಯಾಧಿಕಾರಿಗಳು ಪರೀಕ್ಷೆ ಮಾಡಿಸಿಕೊಂಡ ಶಂಕಿತ ಸೋಂಕಿತರ ಮನೆಗೆ ತೆರಳಿ, ಖುದ್ದು ಪರಿಶೀಲಿಸಿ ರೋಗದ ಲಕ್ಷಣ ಇದೆಯೋ ಅಥವಾ ಇಲ್ಲವೋ ಎಂಬುದನ್ನು ನೋಡಿದ ಬಳಿಕ ಸೋಂಕಿತ ವ್ಯಕ್ತಿಯ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ. ಮೊದಲೇ ಕೋವಿಡ್ ಪರೀಕ್ಷಾ ಕೇಂದ್ರದವರು ವ್ಯಕ್ತಿಗೆ ಸೋಂಕು ದೃಢಪಟ್ಟ ಬಗ್ಗೆ ಮಾಹಿತಿ ನೀಡಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಹಾಸಿಗೆ ವ್ಯವಸ್ಥೆ: ಶಾಂತಿನಗರದ ಆಸ್ಪತ್ರೆಯಲ್ಲಿ ಐಸಿಯು 20 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಿದ್ದು, ಹೆಚ್ಚುವರಿಯಾಗಿ 75 ಬೆಡ್ ವ್ಯವಸ್ಥೆ ಮಾಡುತ್ತೇವೆ. ಪಾಲಿಕೆ ವ್ಯಾಪ್ತಿಯಲ್ಲಿ 85 ಸಹಾಯಕ ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುವುದು ಎಂದ ಅವರು, 20 ಹೊಸ ತಹಶಿಲ್ದಾರ್ ಗಳನ್ನ ಕೋವಿಡ್ ಸೆಂಟರ್ ಗಳಿಗೆ ಉಸ್ತುವಾರಿಗೆ ನೇಮಕ ಮಾಡಲಾಗುವುದು ಎಂದರು.

ಕೋವಿಡ್ ಸೆಂಟರ್ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುತ್ತೇವೆ. ರವಿಶಂಕರ್ ಗುರೂಜಿ ಆಶ್ರಮಕ್ಕೆ ತೆರಳುತ್ತಿದ್ದು, ಅಲ್ಲಿ ಮತ್ತಷ್ಟು ಹಾಸಿಗೆ ವ್ಯವಸ್ಥೆಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡುತ್ತೇವೆ. ಮೃತದೇಹಗಳ ಸಾಗಾಟಕ್ಕೆ ಒಂದು ವಲಯಕ್ಕೆ ಎರಡು ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಿದ್ದು, ಔಷಧಿ ಸಿಂಪಡಣೆಗೆ ಎರಡು ವಾಹನಗಳು ಶೀಘ್ರವೇ ಉದ್ಘಾಟನೆಗೊಳಿಸಲಾಗುವುದು. ಹೆಚ್ಚು ವಾಹನಗಳ ಖರೀದಿಗೆ ಅನುಮತಿ ನೀಡಲಾಗಿದೆ ಎಂದರು.

ಹೊಸ ವ್ಯವಸ್ಥೆ: ಕೊರೋನ ಸೋಂಕಿತರ ಮೊಬೈಲ್ ಸಂಖ್ಯೆ ಮತ್ತು ಅವರಿಗೆ ನೀಡಿರುವ ಹಾಸಿಗೆ ಸಂಖ್ಯೆ ಎರಡನ್ನು ಜೋಡಿಸಿ ಹೊಸ ವ್ಯವಸ್ಥೆ ರೂಪಿಸಲಾಗುವುದು ಎಂದ ಅವರು, ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 550 ಹಾಸಿಗೆಗಳು ಲಭ್ಯವಿದ್ದು, 282 ಹಾಸಿಗೆಗಳು ಖಾಲಿ ಇವೆ. 20 ಐಸಿಯು ಹಾಸಿಗೆಗಳಿವೆ ಎಂದು ಅವರು ವಿವರ ನೀಡಿದರು.

ಹಣಕಾಸಿಗೆ ತೊಂದರೆ ಇಲ್ಲ: ಎಸ್‍ಡಿಆರ್‍ಎಫ್ ಅಡಿಯಲ್ಲಿ 742 ಕೋಟಿ ರೂ.ಅನುದಾನ ಲಭ್ಯ ಇದೆ. ಈಗಾಗಲೇ ಜಿಲ್ಲಾಧಿಕಾರಿಗಳಿಗೆ 232 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆರೋಗ್ಯ ಇಲಾಖೆಗೆ 70 ಕೋಟಿ ರೂ., ಬಿಬಿಎಂಪಿಗೆ 50 ಕೋಟಿ ರೂ.ಹಣ ಬಿಡುಗಡೆಯಾಗಿದೆ ಎಂದ ಅವರು, ಕೋವಿಡ್ ಚಿಕಿತ್ಸೆಗೆ ಹಣಕಾಸಿನ ಕೊರತೆ ಇಲ್ಲ ಎಂದರು. ಜುಲೈ ಮತ್ತು ಆಗಸ್ಟ್ ನಲ್ಲಿ ಕೊರೋನ ಸೋಂಕು ಮತ್ತಷ್ಟು ಹೆಚ್ಚಾಗಲಿದೆ ಎಂದು ತಜ್ಞರ ವರದಿ ಹಿನ್ನೆಲೆಯಲ್ಲಿ ಸರಕಾರ ಸೂಕ್ತ ಮುನ್ನಚ್ಚರಿಕೆ ಕೈಗೊಂಡಿದೆ ಎಂದರು.

ಗುಣಮಟ್ಟದ ಆಹಾರ: ಕೊರೋನ ಸೋಂಕಿತರಿಗೆ ಗುಣಮಟ್ಟದ ಊಟ, ಉಪಾಹಾರ ನೀಡಲು ವ್ಯವಸ್ಥೆ ಮಾಡಲಾಗಿದೆ. ಅಗತ್ಯ ವೈದ್ಯಕೀಯ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ. ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಸರಕಾರ ಕೈಗೊಂಡಿದೆ ಎಂದ ಅವರು, ಭವಿಷ್ಯದಲ್ಲಿ ಕೊರೋನ ಸೋಂಕಿನ ಜತೆ ಬದುಕುವುದು ಅನಿವಾರ್ಯ ಅಗಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News