ಚಿಕ್ಕಮಗಳೂರು: ಪ್ರವಾಸಿಗರಿಗೆ ನಿರ್ಬಂಧ ಹೇರಿದ ಜಿಲ್ಲಾಡಳಿತ

Update: 2020-06-29 17:01 GMT

ಚಿಕ್ಕಮಗಳೂರು, ಜೂ.29:  ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ 17 ಮಂದಿಯಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿರುವುದು ಪ್ರಯೋಗಾಲದ ವರದಿಯಿಂದ ದೃಢಪಟ್ಟಿದೆ.

ಸೋಮವಾರ ಜಿಲ್ಲೆಯ ಅಜ್ಜಂಪುರ ತಾಲೂಕೊಂದರಲ್ಲೇ 12 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ತರೀಕೆರೆ ತಾಲೂಕಿನಲ್ಲಿ 3 ಹಾಗೂ ಕಡೂರು, ಚಿಕ್ಕಮಗಳೂರಿನಲ್ಲಿ ತಲಾ ಒಬ್ಬರಲ್ಲಿ ಕೊರೋನ ಸೋಂಕು ದೃಢಪಟ್ಟಿದೆ.

ಅಜ್ಜಂಪುರದ ಮದುವೆ ಬ್ರೋಕರ್ ಓಬ್ಬರು ತುಮಕೂರಿಗೆ ಹೋಗಿ ಹಿಂದಿರುಗಿದ್ದು, ಹಿಂದಿರುಗಿದ ಬಳಿಕ ಎರಡು ಕುಟುಂಬದ 12 ಮಂದಿಗೆ ಸೋಂಕು ತಗಲಿದೆ ಎಂದು ತಿಳಿದು ಬಂದಿದ್ದು, ತರೀಕೆರೆ ತಾಲೂಕಿನ ಲಕ್ಕವಳ್ಳಿ ಪಟ್ಟಣದಲ್ಲಿ ಉಪನ್ಯಾಸಕರೊಬ್ಬರ ಕುಟುಂಬದ ಮೂವರು ಸದಸ್ಯರಿಗೆ ಸೋಂಕು ತಗಲಿರುವುದು ಪ್ರಯೋಗಾಲಯದ ವರದಿಯಿಂದ ತಿಳಿದುಬಂದಿದೆ. 

ಇನ್ನು ಚಿಕ್ಕಮಗಳೂರು ಹಾಗೂ ಕಡೂರು ತಾಲೂಕಿನಲ್ಲಿ ತಲಾ ಒಬ್ಬರಲ್ಲಿ ಸೋಂಕು ಇರುವುದು ಪತ್ತೆಯಾಗಿದ್ದು, ಇವರಿಬ್ಬರು ಇತ್ತೀಚೆಗೆ ಬೆಂಗಳೂರಿನಿಂದ ಕಡೂರು ಹಾಗೂ ಚಿಕ್ಕಮಗಳೂರಿಗೆ ಹಿಂದಿರುಗಿದವರಾಗಿದ್ದಾರೆ. ಸೋಂಕಿತ 17 ಮಂದಿಯನ್ನು ಚಿಕ್ಕಮಗಳೂರು ನಗರದ ಕೋವಿಡ್-19 ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಇದೇ ವೇಳೆ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ 25 ಮಂದಿ ಸೋಂಕಿತರ ಪೈಕಿ ಸೋಮವಾರ 8 ಮಂದಿ ಗುಣಮುಖರಾಗಿದ್ದು, 8 ಮಂದಿಯನ್ನು ಜಿಲ್ಲಾಡಳಿತ ಆಸ್ಪತ್ರೆಯಿಂದ ಬಿಡುಗಡೆ ಮಾಡಿದೆ. 

ಜಿಲ್ಲೆಯಲ್ಲಿ ಬಿಡುಗಡೆಯಾದ ಈ 8 ಪ್ರಕರಣಗಳನ್ನು ಹೊರತು ಪಡಿಸಿ ಸೋಮವಾರದ 17 ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಸದ್ಯ ಸಕ್ರೀಯ ಪ್ರಕರಣಗಳ ಸಂಖ್ಯೆ 34ಕ್ಕೇರಿದೆ. ಸೋಮವಾರ ಪತ್ತೆಯಾದ 17 ಪಾಸಿಟಿವ್ ಪ್ರಕರಣಗಳಿಂದಾಗಿ ಜಿಲ್ಲೆಯ ಜನರಲ್ಲಿ ಕೊರೋನ ಸೋಂಕಿನ ಆತಂಕ ಮತ್ತಷ್ಟು ಹೆಚ್ಚಿದೆ.

ಪ್ರವಾಸಿಗರಿಗೆ ನಿರ್ಬಂಧ ಹೇರಿ ಡಿಸಿ ಆದೇಶ
ಜಿಲ್ಲೆಯಲ್ಲಿ ಕೊರೋನ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರದಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ. ಜಿಲ್ಲೆಯ ಮುಳ್ಳಯ್ಯನಗಿರಿ, ಬಾಬಾಬುಡನ್‍ಗಿರಿ ಶ್ರೇಣಿಗಳು ಸೇರಿದಂತೆ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಬರದಂತೆ ಸೂಚನೆ ನೀಡಲಾಗಿದ್ದು ಪ್ರವಾಸಿಗರು ಕೊರೋನ ಸೋಂಕು ತಡೆಗಟ್ಟಲು ಅನುಸರಿಸಬೇಕಾದ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಸೂಚನೆ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News