ಸಾಹಿತಿಗಳು, ಕುಟುಂಬಸ್ಥರ ಸಮ್ಮುಖದಲ್ಲಿ ಸಾಹಿತಿ ಗೀತಾ ನಾಗಭೂಷಣ್ ಅಂತ್ಯಕ್ರಿಯೆ

Update: 2020-06-29 17:34 GMT

ಕಲಬುರಗಿ, ಜೂ.29: ಹೃದಯಾಘಾತದಿಂದ ನಿನ್ನೆ (ರವಿವಾರ) ರಾತ್ರಿ ನಿಧನರಾದ ಹಿರಿಯ ಕಾದಂಬರಿಗಾರ್ತಿ ಗೀತಾ ನಾಗಭೂಷಣ್ ಅವರ ಅಂತ್ಯ ಸಂಸ್ಕಾರವನ್ನು ಇಲ್ಲಿನ ಸಾವಳಗಿ ಪಟ್ಟಣದ ಕ್ರಾಸ್ ಬಳಿಯ ಅವರ ಹೊಲದಲ್ಲಿ ನೆರವೇರಿಸಲಾಯಿತು.

ಇಲ್ಲಿನ ಸ್ವಸ್ತಿಕ್ ನಗರದ ನಿವಾಸದಲ್ಲಿ ರವಿವಾರ ಸಂಜೆ ಗೀತಾ ನಾಗಭೂಷಣ್ಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಇಂದು ನಡೆದ ಅವರ ಅಂತ್ಯಕ್ರಿಯೆಯಲ್ಲಿ ಹಿರಿಯ ಸಾಹಿತಿಗಳು, ಕುಟುಂಬಸ್ಥರು, ಸಾಹಿತ್ಯಾಭಿಮಾನಿಗಳು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

ನಾಡೋಜ ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಾಹಿತಿಯಾಗಿದ್ದ ಗೀತಾ ನಾಗಭೂಷಣ್, ಅವರ ಬದುಕು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯುವ ಮೂಲಕ ಈ ಪ್ರಶಸ್ತಿ ಪಡೆದ ಕನ್ನಡದ ಮೊದಲ ಮಹಿಳಾ ಸಾಹಿತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆಯಾಗಿ ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಹಿಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪರಿಚಯ: ಕಲಬುರಗಿ ಜಿಲ್ಲೆಯ ಸಾವಳಗಿ ಎಂಬ ಹಳ್ಳಿಯಲ್ಲಿ ಶಾಂತಪ್ಪ-ಶರಣಮ್ಮ ದಂಪತಿಗಳ ಮಗಳಾಗಿ 1942ರ ಮಾ.25ರಂದು ಜನಿಸಿದ ಅವರು, ಮೆಟ್ರಿಕ್ ಮುಗಿದ ನಂತರ ಕಲೆಕ್ಟರ್ ಕಚೇರಿಯಲ್ಲಿ ಉದ್ಯೋಗ ಮಾಡುತ್ತಲೇ ಪದವಿ ಪಡೆದರು. ನಂತರ ಸಂಜೆ ಕಾಲೇಜಿನಲ್ಲಿ ಬಿಎಡ್ ಮತ್ತು ಎಂಎ ಪದವಿಯನ್ನು ಗಳಿಸುವ ಮೂಲಕ ಪ್ರಾಧ್ಯಾಪಕಿಯಾಗಿ, ಲೇಖಕಿಯಾಗಿ ಜನಪರ ಹೋರಾಟಗಳಲ್ಲಿ ಸದಾ ಸಕ್ರಿಯರಾಗಿದ್ದರು.

ಅವರು ಬದುಕು(ಕಾದಂಬರಿ), ಹಸಿಮಾಂಸ ಮತ್ತು ಹದ್ದುಗಳು(ಕಾದಂಬರಿ), ಅವ್ವ ಮತ್ತು ಇತರ ಕತೆಗಳು(ಕಥಾಸಂಕಲನ), ಸಪ್ತವರ್ಣದ ಹಾಡು, ದುರಗಮುರಗಿಯವರ ಸಂಸ್ಕೃತಿ (ಸಂಶೋಧನೆ), ಜ್ವಲಂತ, ಜೋಗಿಣಿ(ನಾಟಕ), ನನ್ನ ಚೆಲುವು ನಿನ್ನ ಒಲವು ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಒಟ್ಟು ಸಾಹಿತ್ಯ ಮಹಿಳಾ ಮತ್ತು ಶೋಷಿತರ ವಿಮೋಚನೆಯ ಚಿಂತನೆಗಳನ್ನು ಒಳಗೊಂಡಿದೆ.

ಗದಗದಲ್ಲಿ ಆಯೋಜಿಸಿದ್ದ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಗೀತಾ ನಾಗಭೂಷಣ್ರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ, ನಾಡೋಜ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಂತಾಪ: ಹಿರಿಯ ಸಾಹಿತಿ ಗೀತಾ ನಾಗಭೂಷಣ್ ನಿಧನಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್.ನಂದೀಶ್ ಹಂಚೆ ಸೇರಿ ಸಾಹಿತಿಗಳು, ಲೇಖಕರು, ಸಾಹಿತ್ಯಾಭಿಮಾನಿಗಳು ಸಂತಾಪ ವ್ಯಕ್ತಪಡಿಸಿ, ಕನ್ನಡ ಸಾಹಿತ್ಯಲೋಕ ಕಂಡ ಪ್ರಗತಿಪರ ಚಿಂತಕರಲ್ಲಿ ಪ್ರಮುಖರಾಗಿದ್ದರು. ಅವರ ಅಗಲಿಕೆ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವೆಂದು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News