ಪತ್ರಕರ್ತರ ಕಾರ್ಯ ಸಮಾಜಕ್ಕೆ ಮಾದರಿ: ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ

Update: 2020-07-01 12:31 GMT

ಬೆಂಗಳೂರು, ಜು. 1: ಕೊರೋನ ಸೋಂಕಿನಂತಹ ಸಮರಸ್ಥಿತಿಯಲ್ಲೂ ಪತ್ರಕರ್ತರು ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವುದು ಸಮಾಜದ ಎಲ್ಲರಿಗೂ ಮಾದರಿ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅತ್ಯಂತ ಜವಾಬ್ದಾರಿಯಿಂದ ವರ್ತಿಸಿ ಈ ಮಹಾಮಾರಿಯನ್ನು ತೊಲಗಿಸಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಲಹೆ ಮಾಡಿದ್ದಾರೆ.

ಬುಧವಾರ ಪತ್ರಿಕಾ ದಿನಾಚರಣೆ ಅಂಗವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಸಂವಹನಾ ಹಾಗೂ ಪತ್ರಿಕೋದ್ಯಮ ವಿಭಾಗ ಏರ್ಪಡಿಸಿದ್ದ ಕಾರ್ಯಕ್ರಮವನ್ನು ವೆಬಿನಾರ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಅದರಲ್ಲೂ ಎಲ್ಲ ರೀತಿಯ ಮಾಧ್ಯಮಗಳು ಹೊಣೆಗಾರಿಕೆಯಿಂದ ಈ ಮಹಾಮಾರಿಯ ವಿರುದ್ಧ ಸೆಣಸಲು ಸರಕಾರಕ್ಕೆ ಹೆಗಲುಕೊಟ್ಟು ಕೆಲಸ ಮಾಡಿವೆ. ಪತ್ರಕರ್ತ ಸಮುದಾಯ ತನ್ನ ಆರೋಗ್ಯವನ್ನು ಪಕ್ಕಕ್ಕಿಟ್ಟು ಜನರ ಕ್ಷೇಮಕ್ಕಾಗಿ ಹಗಲಿರುಳು ಕಾರ್ಯನಿರ್ವಹಿಸಿದ್ದು ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿದೆ ಎಂದರು.

ನಮ್ಮ ದೇಶವೂ ಎಲ್ಲ ಕ್ಷೇತ್ರಗಳಲ್ಲಿಯೂ ವೇಗವಾಗಿ ದಾಪುಗಾಲಿಡುತ್ತ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಆರ್ಥಿಕ, ರಾಜಕೀಯವಾಗಿ ಬಹಳಷ್ಟು ಪ್ರಭಾವಶಾಲಿ ದೇಶವಾಗಿದೆ. ಹೊಸ ಶತಮಾನದಲ್ಲಿ ಇಡೀ ಜಗತ್ತು ನಮ್ಮತ್ತ ನೋಡುತ್ತಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ನಿರ್ವಹಿಸುತ್ತಿರುವ ಪಾತ್ರ ವರ್ಣಿಸಲು ಸಾಧ್ಯವೇ ಇಲ್ಲ ಎಂದು ಅಶ್ವತ್ಥ ನಾರಾಯಣ ನುಡಿದರು.

ಕೋವಿಡ್ -19ಯಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ನಾವು ಮಾಧ್ಯಮವನ್ನು ಸ್ಮರಿಸಬೇಕು. ಕನ್ನಡದ ಮೊದಲ ಪತ್ರಿಕೆ 'ಮಂಗಳೂರು ಸಮಾಚಾರ' ಪತ್ರಿಕೆ ಮಂಗಳೂರಿನಲ್ಲಿ 1843 ಜುಲೈ 1ರಂದು ಆರಂಭಿಸಲಾಗಿತ್ತು. ಜರ್ಮನಿಯ ಹರ್ಮನ್ ಫ್ರೆಡಿರಿಕ್ ಈ ಪತ್ರಿಕೆಯ ಪ್ರಥಮ ಸಂಪಾದಕರು. ಈ ಘಟನೆ ಚರಿತ್ರಾರ್ಹವೆಂದೇ ಪರಿಗಣಿಸಿ ಮಾಧ್ಯಮ ಅಕಾಡೆಮಿಯ ವತಿಯಿಂದ ಜುಲೈ 1ನ್ನು ಕನ್ನಡ ಪತ್ರಿಕೋದ್ಯಮದ ಪಾಲಿನ ಜನ್ಮದಿನವೆಂದು ಆಚರಿಸಲಾಗುತ್ತಿದೆ. ಕನ್ನಡ ಪತ್ರಿಕೋದ್ಯಮಕ್ಕೆ 177 ವರ್ಷಗಳ ಭವ್ಯ ಇತಿಹಾಸವಿದೆ. ಈ ರೀತಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನಗೆ ಅತೀವ ಸಂತಸ ತಂದಿದೆ ಎಂದರು.

ದೇಶದಲ್ಲಿ ಮಾಧ್ಯಮ ಜಗತ್ತು ಬಹಳ ಗಟ್ಟಿಯಾಗಿದೆ. ಜನರ ಆಶೋತ್ತರಗಳಿಗೆ ತಕ್ಕಂತೆ ಕೆಲಸ ಮಾಡುತ್ತಿರುವ ಕ್ಷೇತ್ರವು ನಮ್ಮ ಶ್ರೇಷ್ಟ ಸಂವಿಧಾನದ ನಾಲ್ಕನೆ ಆಧಾರ ಸ್ತಂಭ. ಈ ನಿಟ್ಟಿನಲ್ಲಿ ಭಾರತದ ಮಟ್ಟಿಗೆ ಮಾಧ್ಯಮಕ್ಕೆ ಬಹಳ ಪೂಜನೀಯ ಸ್ಥಾನಮಾನವಿದೆ. ಭಾರತದ ಮಾಧ್ಯಮ, ಜಗತ್ತಿನಲ್ಲಿಯೇ ಅತಿದೊಡ್ಡ ಮಾಧ್ಯಮ ಕ್ಷೇತ್ರವಾಗಿದೆ. ನಮ್ಮ ದೇಶದಲ್ಲಿ 5 ಸಾವಿರಕ್ಕೂ ಹೆಚ್ಚು ಸುದ್ದಿ ಪತ್ರಿಕೆಗಳಿವೆ. 1ಸಾವಿರಕ್ಕೂ ಹೆಚ್ಚು ಮ್ಯಾಗಝಿನ್‍ಗಳಿವೆ, 450 ಸುದ್ದಿ ವಾಹಿನಿಗಳಿವೆ. 200ಕ್ಕೂ ಹೆಚ್ಚು ನ್ಯೂಸ್ ಪೋರ್ಟಲ್‍ಗಳಿವೆ. ಒಂದು ಅಂದಾಜಿನ ಪ್ರಕಾರ 72ಸಾವಿರ ಕೋಟಿ ರೂ.ಗಳಷ್ಟು ವಾರ್ಷಿಕ ಜಾಹೀರಾತು ಆದಾಯವಿದೆ. ಹೀಗಾಗಿ ನಮ್ಮಲ್ಲಿ ಮಾಧ್ಯಮ ಕ್ಷೇತ್ರ ಬಲಿಷ್ಠವಾಗಿದ್ದು, ಅದು ಎದುರಿಸುತ್ತಿರುವ ಸವಾಲುಗಳಿಗೆ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಿದೆ ಎಂದು ಡಿಸಿಎಂ ಆಶಿಸಿದರು.

ವೆಬಿನಾರಿನಲ್ಲಿ ಬೆಂಗಳೂರು ವಿವಿ ಉಪ ಕುಲಪತಿ ಪ್ರೊ.ಜಾಫೆಟ್, 'ದಿ ಹಿಂದು' ಪತ್ರಿಕೆಯ ಬೆಂಗಳೂರು ಬ್ಯೂರೋ ಮುಖ್ಯಸ್ಥೆ ಎಸ್.ಬಾಗೇಶ್ರೀ, ವಿವಿಯ ಸಂವಹನಾ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ನರಸಿಂಹಮೂರ್ತಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News