ಲಕ್ಷಣಗಳು ಗೋಚರಿಸದ ರೋಗಿಗಳಿಗೆ ಮನೆಯಿಂದಲೇ ಚಿಕಿತ್ಸೆ: ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರಕಾರ

Update: 2020-07-04 16:50 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.4: ಬಹಿರಂಗವಾಗಿ ಕೊರೋನ ಸೋಂಕು ಲಕ್ಷಣಗಳು ಗೋಚರಿಸದ ರೋಗಿಗಳಿಗೆ ಮನೆಯಿಂದಲೇ ಚಿಕಿತ್ಸೆ ನೀಡುವ ಸಂಬಂಧ ಶನಿವಾರ ರಾಜ್ಯ ಸರಕಾರ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ.

ಲಕ್ಷಣ ರಹಿತರಾದ ಅಥವಾ ಕಡಿಮೆ ಲಕ್ಷಣವಿರುವ ಕೊರೋನ ರೋಗಿಗಳಲ್ಲಿ ಎಲ್ಲರಿಗೂ ಮನೆ ಐಸೋಲೇಶನ್ (ಮನೆ ಆರೈಕೆ) ಕಡ್ಡಾಯವಲ್ಲ. ಈ ಬಗೆಯ ಆರೈಕೆಗೆ ಮುನ್ನ ಆರೋಗ್ಯ ಇಲಾಖೆಯ ತಂಡವು ಮನೆಗೆ ಬಂದು ಪರಿಶೀಲನೆ ನಡೆಸಲಿದೆ. ಬಳಿಕವಷ್ಟೇ ಐಸೋಲೇಶನ್ ಮಾಡಲಾಗುತ್ತದೆ.

ಲಕ್ಷಣ ರಹಿತ ರೋಗಿಗಳನ್ನು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ದಾಖಲಿಸಲಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಲಕ್ಷಣ ರಹಿತರ ಸಂಖ್ಯೆ ಗಣನೀಯವಾಗಿ ಏರಿರುವುದರಿಂದ ಕೋವಿಡ್ ಕೇರ್ ಕೇಂದ್ರಗಳಲ್ಲಿ ಹಾಸಿಗೆ ಕೊರತೆ ಉಂಟಾಗಿದೆ. ಆದುದರಿಂದ ಮನೆಯಲ್ಲೇ ಆರೈಕೆ ಮಾಡುವ ಕ್ರಮವನ್ನು ಜಾರಿ ಮಾಡಲಾಗಿದೆ. ಇದರಿಂದ ಕುಟುಂಬದವರ ಆತಂಕ ಮತ್ತು ಆರೋಗ್ಯ ಸಿಬ್ಬಂದಿಗೂ ಹೊರೆ ಕಡಿಮೆಯಾಗಲಿದೆ.

ಗಂಭೀರವಾಗಿ ಅಸ್ವಸ್ಥಗೊಂಡ ರೋಗಿಗಳಿಗೆ ಚಿಕಿತ್ಸೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇರಲಿದೆ ಎಂಬ ಕಾರಣಕ್ಕೆ ಮನೆಯಲ್ಲೇ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ. ಈ ಮಾದರಿಯ ಆರೈಕೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಅನುಮೋದನೆ ನೀಡಿದೆ.

ಜಿಲ್ಲಾ ಮಟ್ಟದ ಆರೋಗ್ಯಾಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಯ ಅಧಿಕಾರಿಗಳನ್ನೊಳಗೊಂಡ ತಂಡವು ಪರಿಶೀಲನೆ ನಡೆಸಿ ಮನೆಯಲ್ಲಿ ಆರೈಕೆ ಮಾಡಲು ಸಾಧ್ಯವೇ ಎಂದು ನಿರ್ಧರಿಸಲಿದೆ. ಪಾಸಿಟಿವ್ ವರದಿ ಬಂದ ಬಳಿಕವೇ ರೋಗಿಯು ಮನೆಯ ಪ್ರತ್ಯೇಕ ಕೋಣೆಯಲ್ಲಿ ವಾಸಿಸಬಹುದು. ನಂತರ ಅಧಿಕಾರಿಗಳ ತಂಡ ಭೇಟಿ ನೀಡಿ ಅದು ಸೂಕ್ತವೇ ಎಂದು ಪರಿಶೀಲಿಸಲಿದೆ. ಸೂಕ್ತವಲ್ಲದಿದ್ದರೆ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲು ಅವಕಾಶವಿದೆ.

ಪರಿಶೀಲನೆ ವೇಳೆ ಕೆಮ್ಮು, ಶೀತ, ಗಂಟಲು ನೋವು, ಉಸಿರಾಟದ ತೊಂದರೆ, ರಕ್ತದೊತ್ತಡ, ಜ್ವರ ಮೊದಲಾದವುಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ಮೂಲಕ ರೋಗಿಯ ಸೋಂಕಿನ ತೀವ್ರತೆಯನ್ನು ನಿರ್ಧರಿಸಲಾಗುತ್ತದೆ. ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆ, ಮೂತ್ರಪಿಂಡದ ತೊಂದರೆ, ಕ್ಯಾನ್ಸರ್, ಎಚ್ಐವಿ, ಕ್ಷಯ, ಥೈರಾಯಿಡ್ ತೊಂದರೆ ಮೊದಲಾದ ರೋಗಗಳ ಬಗ್ಗೆ ವಿಚಾರಿಸಲಾಗುತ್ತದೆ. ಇದರಲ್ಲಿ ಯಾವುದೇ ಗಂಭೀರ ಸಮಸ್ಯೆ ಇದ್ದಲ್ಲಿ ಮನೆ ಆರೈಕೆಗೆ ಶಿಫಾರಸು ಮಾಡುವುದಿಲ್ಲ. ಆರೈಕೆಗೊಳಪಡಿಸಿದ ನಂತರ ವೈದ್ಯರು ಯಾವ ಔಷಧ ಸೇವಿಸಬೇಕೆಂದು ಸೂಚಿಸುತ್ತಾರೆ.

- ಕೊರೋನ ಆರಂಭದ ಹಂತದ ಲಕ್ಷಣ ಕಾಣಿಸಿಕೊಂಡವರಿಗೆ ಹಾಗೂ ಸೋಂಕಿನ ಲಕ್ಷಣಗಳು ಕಾಣಿಸದವರಿಗೆ ಮನೆಯಲ್ಲಿ ಚಿಕಿತ್ಸೆ

- ಪ್ರತ್ಯೇಕವಾಗಿ ಮನೆಯಲ್ಲಿ ವಾಸಿಸಬೇಕು

- ಜಿಲ್ಲಾ ಆರೋಗ್ಯ ಪ್ರಾಧಿಕಾರ ಅಥವಾ ಬಿಬಿಎಂಪಿಯ ಆರೋಗ್ಯ ತಂಡವು ಮನೆಗೆ ಭೇಟಿ ನೀಡಿ, ವ್ಯವಸ್ಥೆ ಪರಿಶೀಲಿಸುತ್ತದೆ

- ಆರೈಕೆ ವಿಧಾನದ ಬಗೆಗಿನ ಮಾಹಿತಿಯನ್ನು ಟೆಲಿ ಕನ್ಸಲ್ಟೇಶನ್ ಮೂಲಕ ಪಡೆದುಕೊಳ್ಳಬೇಕು

-  ಮನೆ ಐಸೋಲೇಷನ್ ನಿಯಮಗಳನ್ನು ಕುಟುಂಬದ ಸದಸ್ಯರು ಕೂಡ ತಿಳಿದಿರಬೇಕು

-  ಉತ್ತಮವಾಗಿ ಗಾಳಿ ಬೆಳಕು ಇರುವ ಕೊಠಡಿ ಹಾಗೂ ಪ್ರತ್ಯೇಕ ಶೌಚಾಲಯ ಇರಬೇಕು

-  ಆರೋಗ್ಯದ ಸ್ಥಿತಿಗತಿಯ ಬಗ್ಗೆ ಪ್ರತಿನಿತ್ಯ ವೈದ್ಯರು ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು

-  ಮನೆಯ ಆರೈಕೆಗೆ ಒಳಗಾದ ವ್ಯಕ್ತಿಯ ಕೈಗೆ ಟ್ಯಾಗ್ ಅಳವಡಿಕೆ ಮಾಡಲಾಗುತ್ತದೆ. ಮನೆಯ ಪ್ರವೇಶ ದ್ವಾರಕ್ಕೆ ಭಿತ್ತಿ ಪತ್ರ ಅಂಟಿಸಲಾಗುತ್ತದೆ.

ಯಾರಿಗೆ ಅವಕಾಶವಿಲ್ಲ

50 ವರ್ಷ ಮೇಲ್ಪಟ್ಟವರು, ಮಧುಮೇಹ, ಅಧಿಕ ರಕ್ತದೊತ್ತಡ, ಎಚ್‍ಐವಿ, ಕ್ಯಾನ್ಸರ್, ಹೃದಯ ಕಾಯಿಲೆ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಮನೆಯ ಆರೈಕೆ ಅಪಾಯ. ಹಾಗಾಗಿ ಅಂತಹವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುತ್ತದೆ. ಮನೆ ಆರೈಕೆ ಅವಧಿಯಲ್ಲಿ ವ್ಯಕ್ತಿಗಳ ಆರೋಗ್ಯ ಸ್ಥಿತಿ ಹದಗೆಟ್ಟಲ್ಲಿ ಕೂಡಲೇ ಆಸ್ಪತ್ರೆಗೆ ಸಂಪರ್ಕಿಸಬೇಕು.

ರೋಗಿಗೆ ಸೂಚನೆಗಳು

- 8 ಗಂಟೆಗಳ ಕಾಲ ಎನ್-95 ಮಾಸ್ಕ್ ಧರಿಸಬೇಕು. ನಂತರ ಸೋಡಿಯಂ ಹೈಪೋಕ್ಲೋರೈಟ್ ನಿಂದ ತೊಳೆದು ಬಿಸಾಡಬೇಕು.

- ಪ್ರತ್ಯೇಕ ಕೋಣೆಯಲ್ಲಿ ವಾಸಿಸುವುದರೊಂದಿಗೆ ಮನೆಯವರಿಂದ 2 ಮೀಟರ್ ದೂರ ಇರಬೇಕು. ವೃದ್ಧರು ಹಾಗೂ ವಯೋಸಹಜ ರೋಗದಿಂದ ಬಳಲುತ್ತಿರುವವರ ಸಂಪರ್ಕಕ್ಕೆ ಬರಬಾರದು.

- ಕುದಿಸಿ ಆರಿಸಿದ ನೀರು ಕುಡಿಯಬೇಕು. ದಿನಕ್ಕೆ 2 ಲೀಟರ್ ನೀರು ಕುಡಿಯಬೇಕು. ಕೈಯನ್ನು ಆಗಾಗ್ಗೆ ತೊಳೆಯಬೇಕು. ಟವೆಲ್, ತಟ್ಟೆ, ಲೋಟ ಪ್ರತ್ಯೇಕವಾಗಿರಬೇಕು. ಮುಟ್ಟಿದ ವಸ್ತುಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಬೇಕು.

- ಆಕ್ಸಿಮೀಟರ್ ಹಾಗೂ ಡಿಜಿಟಲ್ ಥರ್ಮಾಮೀಟರ್ ಬಳಸಿ ಪ್ರತಿ ದಿನ ಆರೋಗ್ಯದ ಸ್ಥಿತಿಯನ್ನು ತಿಳಿದುಕೊಳ್ಳಬೇಕು. ವೈದ್ಯರು ಸೂಚಿಸಿದ ಔಷಧವನ್ನು ತಪ್ಪದೆ ಸೇವಿಸಬೇಕು. ಅಗತ್ಯವಿದ್ದಾಗ ಆಪ್ತ ಸಮಾಲೋಚನೆ ಸೇವೆ ಪಡೆಯಬಹುದು. ಯಾವುದೇ ಅನಾರೋಗ್ಯ ಲಕ್ಷಣ ಕಾಣಿಸಿಕೊಂಡರೆ ಮುಚ್ಚಿಡದೆ ವೈದ್ಯರಿಗೆ ತಿಳಿಸಬೇಕು.

- ಧೂಮಪಾನ, ಮದ್ಯಪಾನ, ತಂಬಾಕು ಸೇವನೆ ಮಾಡುವಂತಿಲ್ಲ. ಆರೋಗ್ಯ ಸೇತು ಆ್ಯಪ್ ಬಳಸಬೇಕು.

ಕುಟುಂಬದ ಸದಸ್ಯರಿಗೆ ಸೂಚನೆಗಳು

- ಕನಿಷ್ಠ ಆರು ಅಡಿಗಳಷ್ಟು ಅಂತರ ಕಾಯ್ದುಕೊಳ್ಳಬೇಕು

- ಹೊರಗಿನವರಿಗೆ ಪ್ರವೇಶಕ್ಕೆ ಅವಕಾಶ ನೀಡಬಾರದು

- ನೆರೆಹೊರೆಯವರ ಸಹಕಾರದಿಂದ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳಬೇಕು

- ಭಯ, ಆತಂಕಕ್ಕೆ ಒಳಗಾಗಬಾರದು

- ವ್ಯಕ್ತಿಯಲ್ಲಿ ಸಕಾರಾತ್ಮಕ ಚಿಂತನೆಗಳು ಮೂಡುವಂತೆ ನೋಡಿಕೊಳ್ಳಬೇಕು

- ಗೊಂದಲ ಉಂಟಾದಲ್ಲಿ ಅಥವಾ ಮಾಹಿತಿಗೆ ಸಹಾಯವಾಣಿ ಸಂಖ್ಯೆ 14410ಕ್ಕೆ ಸಂಪರ್ಕಿಸಿ

ಏನೇನು ಮುಂಜಾಗ್ರತೆ ಕೈಗೊಳ್ಳಬೇಕು:

- ಮಾಸ್ಕ್ ಒದ್ದೆಯಾಗಿದ್ದರೆ ಅಥವಾ ಕೊಳೆಯಾಗಿದ್ದರೆ ಬದಲಾಯಿಸಬೇಕು

- ರೋಗಿಯ ಕೊಠಡಿಗೆ ಆಹಾರ ತಲುಪಿಸಬೇಕು

- ರೋಗಿ ಬಳಕೆ ಮಾಡಿದ್ದ ಪಾತ್ರ ಹಾಗೂ ವಸ್ತುಗಳು ಮತ್ತೊಬ್ಬರು ಬಳಕೆ ಮಾಡಬಾರದು.

ಎಷ್ಟು ದಿನ ಆರೈಕೆ: ಮನೆ ಆರೈಕೆ ವೇಳೆ ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಬರಬೇಕು. ಸೋಂಕು ಲಕ್ಷಣಗಳು 17 ದಿನಗಳವರೆಗೆ ಗೋಚರಿಸದಿದ್ದಲ್ಲಿ ಹಾಗೂ 10 ದಿನಗಳಿಂದ ಜ್ವರ ರಹಿತರಾಗಿದ್ದಲ್ಲಿ ವ್ಯಕ್ತಿ ಗುಣಮುಖನಾಗಿದ್ದಾನೆ ಎಂದು ಪರಿಗಣಿಸಬಹುದು. ವ್ಯಕ್ತಿ ಗುಣಮುಖರಾಗಿರುವುದು ಖಚಿತವಾದ ಬಳಿಕ ಕೊಠಡಿಯನ್ನು ಸೋಂಕು ನಿವಾರಕದಿಂದ ಸ್ವಚ್ಛಗೊಳಿಸಬೇಕು.

ಅವಧಿ ಮುಕ್ತಾಯ

17 ದಿನಗಳ ಕಾಲ ಆರೈಕೆಯ ಅವಧಿ ಇರುತ್ತದೆ. 10 ದಿನಗಳವರೆಗೆ ಜ್ವರ, ಜ್ವರದ ಲಕ್ಷಣ ಇಲ್ಲದಿದ್ದರೆ ರೋಗಿ ಗುಣಮುಖನಾಗಿದ್ದಾನೆ ಎಂದು ಪರಿಗಣಿಸಲಾಗುತ್ತದೆ. ನಂತರ ಕೊರೊನಾ ಪತ್ತೆ ಪರೀಕ್ಷೆ ಬೇಕಿಲ್ಲ. ಅವದಿ ಪೂರ್ಣಗೊಂಡ ನಂತರ ರೋಗಿಯು ಇದ್ದ ಕೋಣೆ, ಮುಟ್ಟಿದ ಮನೆಯ ಭಾಗಗಳಿಗೆ ಸೋಡಿಯಂ ಹೈಪೋಕ್ಲೋರೈಟ್ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News