ಕೊರೋನ ಲಸಿಕೆ: ಐಸಿಎಂಆರ್ ಗಡುವಿಗೆ ಇಂಡಿಯನ್‍ ಅಕಾಡೆಮಿ ಆಫ್ ಸೈನ್ಸಸ್ ವಿರೋಧ

Update: 2020-07-06 06:06 GMT

ಹೊಸದಿಲ್ಲಿ: ಕೊರೋನ ವೈರಸ್ ವಿರುದ್ಧದ ಲಸಿಕೆಯ ಕ್ಲಿನಿಕಲ್‍ ಟ್ರಯಲ್ ಮತ್ತು ಅಗತ್ಯ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವಂತೆ ಐಎಂಸಿಆರ್ ಮಹಾನಿರ್ದೇಶಕರು ಬರೆದಿರುವ ಪತ್ರ ವ್ಯಾಪಕ ಟೀಕೆಗೆ ಗುರಿಯಾಗಿದೆ.

ರವಿವಾರ ದೇಶದ ಅತ್ಯುನ್ನತ ವಿಜ್ಞಾನ ಅಕಾಡೆಮಿಯಾದ ಇಂಡಿಯನ್‍ ಅಕಾಡೆಮಿ ಆಫ್ ಸೈನ್ಸಸ್, ಐಸಿಎಂಆರ್ ಗಡುವಿನ ವಿರುದ್ಧ ಅಪಸ್ವರ ಎತ್ತಿದೆ.

“ಲಸಿಕೆ ಅಭಿವೃದ್ಧಿಪಡಿಸುವಲ್ಲಿ ತೊಡಗಿಸಿಕೊಂಡಿರುವ ವಿಜ್ಞಾನಿಗಳೂ ಸೇರಿದಂತೆ ವಿಜ್ಞಾನಿಗಳ ಸಮೂಹ, ಐಸಿಎಂಆರ್ ಘೋಷಿಸಿದ ಗಡುವು ಕಾರ್ಯಸಾಧುವಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. ಈ ಗಡುವು ನಾಗರಿಕ ಮನಸ್ಸಿನಲ್ಲಿ ಅವಾಸ್ತವ ನಿರೀಕ್ಷೆಗಳನ್ನು ಹುಟ್ಟುಹಾಕಿದೆ” ಎಂದು ಐಎಎಸ್‍ಸಿ ಹೇಳಿಕೆ ನೀಡಿದೆ.

“ಲಸಿಕೆ ಅಭಿವೃದ್ಧಿಗೆ ವೈಜ್ಞಾನಿಕವಾಗಿ ಕಾರ್ಯಗತಗೊಳಿಸುವ ಕ್ಲಿನಿಕಲ್‍ ಟ್ರಯಲ್‍ ಅಗತ್ಯ. ಲಸಿಕೆಯ ತುರ್ತು ಅಗತ್ಯತೆ ಇದೆ ಎನ್ನುವುದು ಪ್ರಶ್ನಾತೀತ. ಆದರೆ ಯಾವುದೇ ಆತುರದ ಕ್ರಮ ಕೈಗೊಂಡಲ್ಲಿ ವೈಜ್ಞಾನಿಕ ಪ್ರಕ್ರಿಯೆ ಮತ್ತು ಗುಣಮಟ್ಟದ ಜತೆ ರಾಜಿ ಮಾಡಿಕೊಂಡಂತಾಗುತ್ತದೆ”  ಎಂದು ಎಚ್ಚರಿಸಿದೆ.

“ರಾಷ್ಟ್ರೀಯ ನೈತಿಕ ಮಾರ್ಗಸೂಚಿಯನ್ನು ಜೀವ ವೈದ್ಯಕೀಯ ಸಂಶೋಧನೆಗಳಿಗೆ ರೂಪಿಸಬೇಕಾದ ಹೊಣೆ ಐಸಿಎಂಆರ್‍ಗಿದೆ. ಪರೀಕ್ಷೆಗೆ ಒಳಗಾಗುವವರಿಗೆ ಸೂಕ್ತ ಮಾಹಿತಿ ನೀಡಿ ಒಪ್ಪಿಗೆ ಪಡೆಯುವುದೂ ಸೇರಿದಂತೆ, ಮಾರ್ಗಸೂಚಿಯನ್ನು ಅದು ಸಿದ್ಧಪಡಿಸಬೇಕು. ಕ್ಲಿನಿಕಲ್ ಪರೀಕ್ಷೆ ನೈತಿಕ ಮಾರ್ಗಸೂಚಿಯನ್ನುಅನುಸರಿಸಬೇಕು” ಎಂದುಖ್ಯಾತ ಸಾರ್ವಜನಿಕ ಆರೋಗ್ಯ ಪ್ರತಿಪಾದಕಿ, ಪಬ್ಲಿಕ್ ಹೆಲ್ತ್ ಮೂವ್‍ಮೆಂಟ್‍ನ ಮೀರಾ ಶಿವ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News