ರೈತರ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಮುಂದಾಗಿ: ಪಶುವೈದ್ಯಾಧಿಕಾರಿಗಳಿಗೆ ಸಚಿವ ಪ್ರಭು ಚವ್ಹಾಣ್ ಎಚ್ಚರಿಕೆ

Update: 2020-07-06 11:13 GMT

ತುಮಕೂರು,ಜು. 6 : ರೈತರ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಮುಂದಾಗಿ ಎಂದು ಸಚಿವ ಪ್ರಭು ಚವ್ಹಾಣ್ ತುಮಕೂರಿನಲ್ಲಿ ಪಶುವೈದ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ವೈದ್ಯರು ತಾಲೂಕು ಮಟ್ಟದಲ್ಲಿ ಭೇಟಿ ನೀಡಿ ರೈತರ  ಸಮಸ್ಯೆಗಳನ್ನು ಪರಿಹರಿಸಿ. ಪಶುಸಂಗೋಪನೆ ಇಲಾಖೆಯಲ್ಲಿನ ಪಶುವೈದ್ಯರು ಬರೀ  ಕೇಂದ್ರಸ್ಥಾನದಲ್ಲಿ ಕಚೇರಿಯಲ್ಲಿ ಕುಳಿತುಕೊಳ್ಳದೇ ಹಳ್ಳಿಗಳಿಗೆ ಭೇಟಿ ನೀಡಿ ರೈತರ ಹಾಗೂ ಜಾನುವಾರುಗಳ ಸಮಸ್ಯೆಗಳನ್ನು ಪರಿಹಾರ ಮಾಡಲು ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ನಿತ್ಯ ಹಳ್ಳಿಗಳಿಗೆ ಭೇಟಿ ನೀಡಿದ ಕೆಲಸದ ಫೋಟೋ ಹಾಗೂ ವಿವರವನ್ನು ವಾಟ್ಸಾಪ್ ಮೂಲಕ ನನಗೆ ಕಳುಹಿಸಿ. ಸದ್ಯದಲ್ಲೇ ಪಶುಸಂಗೋಪನೆ ಇಲಾಖೆಯ ವಾರ್ ರೂಮ್ ಸ್ಥಾಪನೆ ಮಾಡವ ಆಲೋಚನೆ ಇದೆ ಎಂದು ಹೇಳಿದರು.

ಜಾನುವಾರುಗಳಿಗೆ ನಿಯಮಿತವಾಗಿ ವ್ಯಾಕ್ಸಿನ್ ನೀಡುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಜಾನುವಾರುಗಳು ರೈತರ ಬೆನ್ನೆಲುಬಾಗಿದ್ದು ರೈತನಿಗೆ ಅವುಗಳ ಆರೋಗ್ಯವನ್ನು ಕಾಪಾಡುವುದು ಸವಾಲಾಗಿರುತ್ತದೆ ವೈದ್ಯರು ಈ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿವಹಿಸಿ ರೈತರ ಹಿತಾಸಕ್ತಿ ಕಾಪಾಡಬೇಕು ಎಂದು ಹೇಳಿದರು.

ವೈದ್ಯರು ಹಳ್ಳಿಗಳಿಗೆ ಭೇಟಿ ನೀಡಿದಾಗ ಹಾಗೂ ಚಿಕಿತ್ಸೆ ನೀಡುವಾಗ ಕೋವಿಡ್ ಸೋಂಕು ಹರಡದಂತೆ ಎಚ್ಚರಿಕೆ ವಹಿಸಿ ಚಿಕಿತ್ಸೆ ನೀಡಲು ಎಲ್ಲ ಕ್ರಮ ಕೈಗೊಳ್ಳಬೇಕು. ಕಸಾಯಿಖಾನೆಗಳಿಗೆ ಅಕ್ರಮವಾಗಿ ಜಾನುವಾರಗಳನ್ನು ಸಾಗಿಸುತ್ತಿರುವುದಾಗಿ ದೂರುಗಳು ಬಂದಿರುತ್ತವೆ. ಅಧಿಕಾರಿಗಳು ಜಿಲ್ಲೆಯಲ್ಲಿ ಹದ್ದಿನ ಕಣ್ಣಿಟ್ಟು ಅಕ್ರಮ ಸಾಗಣೆ ತಡೆಯುವ ನಿಟ್ಟಿನಲ್ಲಿ ಸದಾ ಸಜ್ಜಾಗಿರಬೇಕು ಎಂದು ತಿಳಿಸಿದರು.

ಚೀಲನಹಳ್ಳಿ ವಧಾಗಾರಕ್ಕೆ ಭೇಟಿ

ಪಶುಸಂಗೋಪನೆ ಇಲಾಖೆಯ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚೀಲನಹಳ್ಳಿಯಲ್ಲಿ ಅಧುನಿಕವಾಗಿ ನಿರ್ಮಾಣಗೊಳ್ಳುತ್ತಿರುವ ವಧಾಗಾರ (ಕುರಿ ಮೇಕೆ ಮಾಂಸ ಉತ್ಪಾದನೆ ಅಧುನಿಕ ಸಂಸ್ಕರಣಾ ಕೇಂದ್ರಕ್ಕೆ) ಇಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ನಿರ್ಮಾಣ ಹಂತದಲ್ಲಿರುವ ಕಟ್ಟಡದ ಕಾಮಗಾರಿಯ ಲೋಪಗಳಾಗದಂತೆ ಗುಣಮಟ್ಟ ಕಾಯ್ದುಕೊಳ್ಳಲು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. 

ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ತುಮಕೂರು ನಗರದ ಶಾಸಕರಾದ ಜ್ಯೋತಿ ಗಣೇಶ್ ಅವರು ಸೇರಿದಂತೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂಧಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News